ಇಂದಿರಾ ಗಾಂಧಿಯಂತಥ ಮತ್ತೊಬ್ಬ ಪ್ರಧಾನಿ ಬಂದೇ ಇಲ್ಲ: ಸಿಎಂ ಸಿದ್ದರಾಮಯ್ಯ
ದೇಶ ಕಂಡ ಜನಪ್ರಿಯ ರಾಜಕಾರಣಿಯಾಗಿದ್ದ ದಿವಂಗತ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರಂತಹ ಜನಪರ ಪ್ರಧಾನಿ ಮತ್ತೇ ಯಾರು ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

ಬೆಂಗಳೂರು (ನ.01): ದೇಶ ಕಂಡ ಜನಪ್ರಿಯ ರಾಜಕಾರಣಿಯಾಗಿದ್ದ ದಿವಂಗತ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರಂತಹ ಜನಪರ ಪ್ರಧಾನಿ ಮತ್ತೇ ಯಾರು ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು. ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರ 39ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಅತ್ಯಂತ ಧೈರ್ಯವಂತ ಮಹಿಳೆ. ದೇಶದ ಬಡವರ ಆರಾಧ್ಯ ದೈವ. ಬಡಜನರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು. ಉಳುವವನಿಗೆ ಭೂಮಿ ಕೊಡುವಂತ ಯೋಜನೆ ಜಾರಿಗೆ ತಂದಿದ್ದರು ಎಂದರು.
ಮಹಾತ್ಮಗಾಂಧಿ ಹತ್ಯೆ, ಇಂದಿರಾಗಾಂಧಿ ಹತ್ಯೆ, ರಾಜೀವ್ ಗಾಂಧಿ ಹತ್ಯೆ ದೇಶಕ್ಕೆ ಆದ ದೊಡ್ಡ ನಷ್ಟ. ಈ ಮೂವರು ದೇಶಕ್ಕಾಗಿ ಹುತಾತ್ಮರಾದರು. ಅವರ ತ್ಯಾಗ, ಬಲಿದಾನ ನಮ್ಮ ದೇಶದ ಮಣ್ಣಿನಲ್ಲಿ ದಾಖಲಾಗಿದೆ. ಆದರೆ, ಬಿಜೆಪಿಯವರಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಚರಿತ್ರೆ ಇಲ್ಲ. ಕೇವಲ ಖಾಲಿ ದೇಶಭಕ್ತಿ ಬಗ್ಗೆ ಭಾಷಣ ಮಾಡುತ್ತಾರೆ. ಖಾಲಿ ಭಾಷಣಗಳಿಂದ ದೇಶಕ್ಕೆ, ದೇಶದ ಜನರಿಗೆ ಏನೂ ಸಿಗುವುದಿಲ್ಲ ಎಂದು ಟೀಕಿಸಿದರು.
ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಒಪ್ಪಿಗೆ ನೀಡಿ: ಹೈಕೋರ್ಟ್
ಸರ್ದಾರ್ ಸ್ಮರಿಸಿದ ಸಿಎಂ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾಗಿದ್ದರೂ ಕಾರ್ಯಕ್ರಮದಲ್ಲಿ ಪಟೇಲರ ಭಾವಚಿತ್ರ ಇಲ್ಲದಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಪಟೇಲರ ಜನ್ಮದಿನ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಕೊಡುಗೆ ಅಪಾರ. ವೇದಿಕೆಯಲ್ಲಿ ಭಾವಚಿತ್ರ ಇಡಬೇಕಿತ್ತು ಎಂದು ಕಾರ್ಯಕ್ರಮ ಆಯೋಜಕರಿಗೆ ಕಿವಿಮಾತು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹಮದ್, ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.