ನನಗೆ 91 ವರ್ಷ. ಲೋಕಸಭೆಗೆ ಸ್ಪರ್ಧಿಸುವ ಪ್ರಶ್ನೆ ಬರದು: ಎಚ್.ಡಿ.ದೇವೇಗೌಡ
ನನಗೆ 91 ವರ್ಷ ಆಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂಬುದಾಗಿ ಭಾವಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ.
ಬೆಂಗಳೂರು (ಜೂ.07): ನನಗೆ 91 ವರ್ಷ ಆಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂಬುದಾಗಿ ಭಾವಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ. ಆದರೂ ಈ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು. ಲೋಕಸಭೆಗೂ ಮುನ್ನ ಹಲವು ಚುನಾವಣೆಗಳು ಎದುರಾಗಲಿದೆ. ಬಿಬಿಎಂಪಿ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಿವೆ. ಇದಕ್ಕೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಈ ಬಗ್ಗೆ ಪಕ್ಷದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಎಷ್ಟು ಕ್ಷೇತ್ರದಲ್ಲಿ, ಯಾವ ಕ್ಷೇತ್ರದಲ್ಲಿ ಪಕ್ಷವು ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಕ್ಷ ಸಂಘಟನೆಗೆ ಜೆಡಿಎಸ್‌ನಲ್ಲಿ ಹೊಸ ತಂಡ: ಪಕ್ಷವನ್ನು ಸಂಘಟಿಸಲು ಹೊಸ ತಂಡವನ್ನು ರಚಿಸಲಾಗುವುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮಾಹಿತಿ ನೀಡಿದರು. ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 9ರಿಂದ 15 ಮಂದಿ ಮುಖಂಡರು ಈ ತಂಡದಲ್ಲಿ ಇರಲಿದ್ದಾರೆ. ದಿನಕ್ಕೆ ಎರಡು ಲೋಕಸಭೆ ಕ್ಷೇತ್ರ ಭೇಟಿ ಮಾಡಿ ಪರಿಶೀಲನೆ ಮಾಡುತ್ತೇವೆ. ಶಾಸಕಾಂಗ ಪಕ್ಷದ ನಾಯಕರು ಈ ನಿಟ್ಟಿನಲ್ಲಿ ಗಮನಹರಿಸಲಿದ್ದಾರೆ. ನಾನೂ ಸಹ ಎಲ್ಲೆಲ್ಲಿ ಪ್ರವಾಸ ಮಾಡಬೇಕೆಂದು ಪಕ್ಷ ಹೇಳುತ್ತದೆಯೋ ಅಲ್ಲೆಲ್ಲ ಪ್ರಚಾರ ಮಾಡುತ್ತೇನೆ. ನಮ್ಮ ಕಾರ್ಯಕರ್ತರೇ ನಮಗೆ ಶಕ್ತಿ. ಪ್ರಾದೇಶಿಕ ಪಕ್ಷದ ಶಕ್ತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದರು.
ಪಠ್ಯ ಪರಿಷ್ಕರಣೆ ಗೊಂದಲ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಮೊದಲು ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ನಾನೂ ಸಹ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ರಾಜ್ಯ ಪ್ರವಾಸ ಕೈಗೊಂಡು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ಹಲವು ಕಡೆ ಪ್ರಚಾರ ಕೈಗೊಂಡಿದ್ದು, ಈಗಲೂ ಅದೇ ಉತ್ಸಾಹದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಲಾಗುವುದು. ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಅದರಿಂದ ಕುಗ್ಗಬೇಕಿಲ್ಲ. ಅನೇಕ ಚುನಾವಣೆಗಳಲ್ಲಿ ನಾನು ಸೇರಿದಂತೆ ನಾವೆಲ್ಲರೂ ಗೆಲುವು, ಸೋಲು ಅನುಭವಿಸಿದ್ದೇವೆ. ಆಮೇಲೆ ಫೀನಿಕ್ಸಿನಂತೆ ಮೇಲೆದ್ದು ಬಂದಿದ್ದೇವೆ. ಈಗಲೂ ಅಷ್ಟೆ, ಸೋತಿದ್ದೇವೆ ಎಂದು ಮನೆಯಲ್ಲಿ ಕೂರಲಾರೆ. ಪಕ್ಷಕ್ಕಾಗಿ ಕೆಲಸ ಮಾಡಲಿಕ್ಕೆ ನಾನು ತಯಾರಿದ್ದೇನೆ ಎಂದರು.
5 ಜಿಲ್ಲೆಗಳ ಜೆಡಿಎಸ್ ಮುಖಂಡರ ಜತೆ ಗೌಡ, ಎಚ್‌ಡಿಕೆ ಸಭೆ: ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಪಕ್ಷದ ಸಂಘಟನೆಯತ್ತ ಗಮನಹರಿಸಿರುವ ಜೆಡಿಎಸ್, ಐದು ಜಿಲ್ಲೆಗಳ ಮುಖಂಡರ ಜತೆ ಆತ್ಮಾವಲೋಕನ ಸಭೆ ನಡೆಸಿತು. ಮಂಗಳವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳ ಮುಖಂಡರ ಜತೆ ಆತ್ಮಾವಲೋಕನ ಸಭೆ ನಡೆಯಿತು.
ರಾಜ್ಯದಲ್ಲಿ 5 ಗ್ಯಾರಂಟಿಗಳ ಅನುಷ್ಠಾನದ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್ ನೀಡಿದ ಸರ್ಕಾರ!
ಸಭೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳೇನು ಎಂಬುದರ ಕುರಿತು ಪರಾಮರ್ಶೆ ಮಾಡಲಾಯಿತು. ಬಳಿಕ ಮುಂದಿನ ಚುನಾವಣೆಗಳತ್ತ ಹೆಚ್ಚಿನ ಗಮನಹರಿಸಲು ಪಕ್ಷವನ್ನು ಸಂಘಟಿಸತ್ತ ನಿಗಾವಹಿಸಬೇಕು ಎಂದು ವರಿಷ್ಠರು ಸಲಹೆ ನೀಡಿದರು. ಒಂದೊಂದೇ ಜಿಲ್ಲೆಯ ಸರಣಿ ಸಭೆಗಳನ್ನು ನಡೆಸಿದ ವರಿಷ್ಠರು, ಎಲ್ಲಾ ಜಿಲ್ಲಾ ಮುಖಂಡರಿಗೆ ಕೆಲವು ಮಹತ್ವದ ಅಂಶಗಳ ಬಗ್ಗೆ ಕಿವಿಮಾತು ಹೇಳಿ, ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಸೂಚಿಸಿದರು. ಈ ವೇಳೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು, ಈ ಸೋಲು ಶಾಶ್ವತ ಅಲ್ಲ, ತಾತ್ಕಾಲಿಕ. ಧೃತಿಗೆಡದೆ ಪಕ್ಷವನ್ನು ಮರಳಿ ಕಟ್ಟೋಣ. ನಿಮ್ಮ ಜತೆ ನಾವಿದ್ದೇವೆ. ನಿಮ್ಮ ಜತೆ ಹಗಲಿರುಳು ಶ್ರಮಿಸುತ್ತೇವೆ ಎಂದು ಕಿವಿಮಾತು ಹೇಳಿದರು.