ಬಡವರು ರಾಜಕೀಯ ಅಧಿಕಾರ ಪಡೆಯಬೇಕು: ಸಚಿವ ಕೆ.ಎನ್.ರಾಜಣ್ಣ
ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ನಾಯಕ ಸಮುದಾಯ ಸೇರಿದ ಎಲ್ಲಾ ಜಾತಿಯ ಬಡವರು ವಿದ್ಯೆಯ ಜೊತೆಗೆ, ರಾಜಕೀಯ ಅಧಿಕಾರ ಪಡೆಯುವತ್ತ ಗಮನಹರಿಸಿದಾಗ ಮಾತ್ರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು (ಫೆ.26): ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ನಾಯಕ ಸಮುದಾಯ ಸೇರಿದ ಎಲ್ಲಾ ಜಾತಿಯ ಬಡವರು ವಿದ್ಯೆಯ ಜೊತೆಗೆ, ರಾಜಕೀಯ ಅಧಿಕಾರ ಪಡೆಯುವತ್ತ ಗಮನಹರಿಸಿದಾಗ ಮಾತ್ರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘ, ಜಿಲ್ಲಾ ನಾಯಕ ಮಹಿಳಾ ಸಮಾಜವತಿಯಿಂದ ಆಯೋಜಿಸಿದ್ದ 2022-23ನೇ ಸಾಲಿನ ವಾಲ್ಮೀಕಿ ಸಮಾಜದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಇತರರಿಗೆ ಸಮಾನವಾಗಿ ಪೈಪೋಟಿ ನೀಡಲು ಸಾಧ್ಯವೆಂದರು.
ದಕ್ಷಿಣ ಕರ್ನಾಟಕ, ಹಳೆಯ ಮೈಸೂರು ಭಾಗದಲ್ಲಿ ವಾಲ್ಮೀಕಿ ಸಮಾಜ ಬಾಂಧವರಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಇರುವುದನ್ನು ಕಾಣಬಹುದು. ಆದರೆ ಉತ್ತರ ಕರ್ನಾಟಕದಲ್ಲಿ ಅದರಲ್ಲಿಯೂ ಇಂದು ಎಲ್ಲಾ ಹಿಂದುಳಿದ ಸಮಾಜಗಳಿಗೆ ಬೆಳಕಾಗಿದ್ದ ಎಲ್.ಜಿ. ಹಾವನೂರು ಹುಟ್ಟಿದ ಊರಿನಲ್ಲಿಯೆ ಇಂದು ಒಗ್ಗಟ್ಟಿಲ್ಲ. ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತ ವಾಗಲಿದೆ. ಇದು ಮುಂದಿನ ಜನಾಂಗದ ಮೇಲೆ ಕೆಟ್ಟ ಪರಿಣಾಮ ಬೀರದಲಿದೆ. ಈ ಮಾತು ಕೇವಲ ವಾಲ್ಮೀಕಿ ಸಮಾಜಕ್ಕಷ್ಟೇ ಸಿಮೀತವಲ್ಲ. ಎಲ್ಲಾ ಶೋಷಿತ ಸಮಾಜಗಳು ತಮ್ಮಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಎಂದು ಸಚಿವ ಕೆ.ಎನ್. ರಾಜಣ್ಣ ನುಡಿದರು.
ಶೀಘ್ರದಲ್ಲೇ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಚಿವ ಕೆ.ಎನ್.ರಾಜಣ್ಣ
ಸರ್ಕಾರದಿಂದ ಜನಾಂಗದ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಹಾಗೂ ವಿದೇಶಿ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದ ವಿದ್ಯಾರ್ಥಿವೇತನಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ವಿಲ್ಲದೆ ಕೊರತೆಯಾಗಿದೆ. ಹಾಗಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಆಗಿರುವ ತೊಂದರೆ ಸರಿಪಡಿಸಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಭರವಸೆ ನೀಡಿದರು.
ವಾಮಾಚಾರ: ನಾನು ಹಾಸನಕ್ಕೆ ಉಸ್ತುವಾರಿ ಸಚಿವನಾಗಿ ನೇಮಕವಾದಾಗ ಕೆಲವರು ಮಾಟ, ಮಂತ್ರ, ವಾಮಾಚಾರದ ಹೆಸರಿನಲ್ಲಿ ಹೆದರಿಸಿದ್ದರು. ಕಾಕತಾಳಿಯ ಎಂಬಂತೆ ಹಾಸನಕ್ಕೆ ಹೊರಟ ಮೊದಲ ದಿನವೇ ಕುಣಿಗಲ್‌ನಲ್ಲಿ ಪಟಾಕಿ ಕಣ್ಣಿಗೆ ಸಿಡಿದು ಕೊಂಚ ಗೊಂದಲ ಆಗಿತ್ತು. ನನ್ನ ಮೇಲೆ ವಾಮಾಚಾರ ಮಾಡುವವರಿಂದ ನನಗೆ ರಕ್ಷಣೆ ನೀಡು ಎಂದು ನಮ್ಮ ಮನೆದೇವರಾದ ಉಗ್ರ ನರಸಿಂಹನಿಗೆ ಮನವಿ ಮಾಡಿದ್ದೇನೆ. ನಾಲ್ವರ ಒಳಿತಿಗಾಗಿ ದುಡಿಯುತ್ತಿರುವ ನನ್ನ ರಕ್ಷಣೆ ಮಾಡುವ ಕೆಲಸ ಆ ಉಗ್ರ ನರಸಿಂಹನಿಗೆ ಬಿಟ್ಟಿದ್ದೇನೆ ಎಂದು ಹಾಸನ ಜಿಲ್ಲೆಯ ರಾಜಕಾರಣ ಕುರಿತು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಬರಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ಜಿಲ್ಲಾ ನಾಯಕ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಲ ರಾಜಣ್ಣ, ಪ್ರತಿಭಾಪುರಸ್ಕಾರದ ಹೆಸರಿನಲ್ಲಿ ನಾಯಕ ಜನಾಂಗದ ಎಲ್ಲರನ್ನು ಒಂದೆಡೆಗೆ ಸೇರಿಸಬೇಕೆಂಬ ಉದ್ದೇಶದಿಂದ ೨೦೧೭-೧೮ನೇ ಸಾಲಿನಿಂದ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕೊರೊನ ಸಂದರ್ಭದಲ್ಲಿ ಎರಡು ವರ್ಷ ನಡೆದಿರಲಿಲ್ಲ. ಈ ಬಾರಿ ಸುಮಾರು ೪೦೦ಕ್ಕೂ ಅಧಿಕ ಹೆಣ್ಣು ಮಕ್ಕಳೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಶೇ. ೯೯ ರಷ್ಟು ಅಂಕ ಪಡೆದ ಪ್ರತಿಭಾನ್ವಿತ ಮಕ್ಕಳು ನಮ್ಮ ಸಮಾಜದಲ್ಲಿ ಇದ್ದಾರೆ. ಅವರಿಗೆ ಒಳ್ಳೆಯ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಹಾಗಾಗಿ ನಿಮಗೆ ಓದುವ ಸಂದರ್ಭದಲ್ಲಿ ಅರ್ಥಿಕವಾಗಿ ಸೇರಿದಂತೆ ಯಾವುದೇ ರೀತಿಯ ತೊಂದರೆಯಾದರೂ ನಮ್ಮನ್ನು ಸಂಪರ್ಕಿಸಿ, ನಿಮ್ಮ ನೆರವಿಗೆ ನಾವು ಬರುತ್ತವೆ ಎಂದು ಮಕ್ಕಳಿಗೆ ಧೈರ್ಯ ತುಂಬಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿ, ನಾಯಕ ಜನಾಂಗದ ಮಹಿಳೆಯರಲ್ಲಿ ಅತ್ಯಂತ ಪ್ರಭಾವಶಾಲಿಗಳು, ಮೂರು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರು, ಎರಡು ಬಾರಿ ಜಿ.ಪಂ. ಅಧ್ಯಕ್ಷರಾಗಿ, ಶಬರಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಾದರಿಯಾಗಿರುವ ಶಾಂತಲಾ ರಾಜಣ್ಣ ಅವರಿಗೆ ಈ ಬಾರಿ ಮಹಿಳಾ ಖೋಟಾದಲ್ಲಿ ಎಂ.ಪಿ. ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು. ಶಾಂತಲ ಅವರಿಗೆ ತುಮಕೂರಿನಲ್ಲಿ ಟಿಕೆಟ್ ನೀಡುವುದರಿಂದ ಚಿತ್ರದುರ್ಗದಲ್ಲಿ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಗೆಲುವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ರಾಜನಹಳ್ಳಿಯ ಶ್ರೀವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಇಂದಿನ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಪ್ರತಿಭೆ ಇದ್ದರು, ಕೀಳು ಎಂಬ ಭಾವನೆಯಿಂದ ನೋಡುವ ಪ್ರವೃತ್ತಿ ಬೆಳೆದುಕೊಂಡು ಬಂದಿದೆ. ಅದನ್ನು ಮೆಟ್ಟಿ ನಿಂತವರು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಇಂದು ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಹಾಗಾಗಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಆಯೋಜಿಸಿರುವ ಈ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಅತ್ಯಂತ ಅಭಿನಂದನಾರ್ಹರು ಎಂದರು.
ಗ್ಯಾರಂಟಿ ಯೋಜನೆ ಸಫಲವಾಗಿರುವುದನ್ನು ಕಂಡು ಬಿಜೆಪಿಗೆ ಹೊಟ್ಟೆಯುರಿ: ಸಚಿವ ಸಂತೋಷ್ ಲಾಡ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಜಿ. ಪುರುಷೋತ್ತಮ ವಹಿಸಿದ್ದರು. ಸಮಾಜದ ಮುಖಂಡರಾದ ಭೀಮಯ್ಯ, ದೊಡ್ಡಯ್ಯ, ಜಿ. ಪುಟ್ಟರಾಮಯ್ಯ, ಬಿ.ಜಿ. ಕೃಷ್ಣಪ್ಪ, ರಶ್ಮಿಗಿರೀಶ್, ಎಸ್. ಲಕ್ಷ್ಮಿ ನಾರಾಯಣ, ಕೆಂಪಹನುಮಯ್ಯ, ಆರ್. ವಿಜಯಕುಮಾರ್, ಎಸ್.ಆರ್. ರಾಜಕುಮಾರ್, ನಿವೃತ್ತ ಬಿಇಒ ಬಸವರಾಜು, ಪರಿಶಿಷ್ಟ ಪಂಗಡಗಳ ಅಧಿಕಾರಿ ರಾಜಕುಮಾರ್, ನೆಲಹಾಳ್ ಮೂರ್ತಿ, ಮಲ್ಲಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.