ಹಿಂದಿನ ಸರ್ಕಾರದ ಅವಧಿಯಲ್ಲಿ ರದ್ದು ಮಾಡಲಾಗಿದ್ದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

ಬೆಂಗಳೂರು (ಜು.01): ಹಿಂದಿನ ಸರ್ಕಾರದ ಅವಧಿಯಲ್ಲಿ ರದ್ದು ಮಾಡಲಾಗಿದ್ದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಂ ಚಿಂತಕರ ಚಾವಡಿ ಕೇಂದ್ರ ಮಂಡಳಿ ಸದಸ್ಯರು ಶುಕ್ರವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆ ಪೂರ್ವದಲ್ಲಿ ಘೋಷಿಸಲಾಗಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ ಮುಂದಿನ ವರ್ಷದಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನಿಗದಿ ಮಾಡಲಾಗುವುದು. ಅಲ್ಲದೆ, ಕಳೆದ ಅವಧಿಯಲ್ಲಿ ರದ್ದು ಅಥವಾ ಸ್ಥಗಿತಗೊಳಿಸಲಾಗಿರುವ ಯೋಜನೆಗಳನ್ನು ಮತ್ತೆ ಆರಂಭಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಕ್ಷದ ವಿರುದ್ಧ ಬಹಿರಂಗ ಟೀಕೆ ಸರಿಯಲ್ಲ: ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಸಲಹೆ

ಇದೇ ವೇಳೆ ಚಾವಡಿಯ ಸದಸ್ಯರು, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಹಾಗೂ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಅಲ್ಪಸಂಖ್ಯಾತರಿಗಾಗಿ ವಸತಿ ಶಾಲೆ ಹಾಗೂ ಜಿಲ್ಲೆಗೊಂದು ಅಲ್ಪಸಂಖ್ಯಾತರ ಪಾಲಿಟೆಕ್ನಿಕ್‌ ಕಾಲೇಜು ಸ್ಥಾಪಿಸಬೇಕೆಂದು ಬೇಡಿಕೆ ಸಲ್ಲಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮದ್‌, ಚಾವಡಿಯ ಅಧ್ಯಕ್ಷ ಮುಜಾಫರ್‌ ಅಸಾದಿ, ಪ್ರಮುಖರಾದ ಮಸ್ತಾನ್‌ ಬಿರಾದಾರ್‌, ಬಾನು ಮುಷ್ತಾಖ್‌, ರಹಮತ್‌ ತರೀಕೆರೆ ಇತರರಿದ್ದರು.

ದ್ವೇಷ ಸೃಷ್ಟಿಗೆ ಅವಕಾಶ ಕೊಡಬೇಡಿ: ‘ನಮ್ಮ ನಮ್ಮಲ್ಲೇ ದ್ವೇಷ, ವೈರತ್ವ ಹುಟ್ಟು ಹಾಕುವ ಕೆಲ ಶಕ್ತಿಗಳು ನಮ್ಮ ಮಧ್ಯದಲ್ಲಿವೆ. ಅವರಿಗೆ ಬೆಲೆ, ಅವಕಾಶ ನೀಡದೆ ಎಲ್ಲಾ ಧರ್ಮ, ಜಾತಿಯವರು ಮಾನವಧರ್ಮ ಪಾಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಶಾಂತಿ ಹಾಗೂ ಸೌಹಾರ್ದಯುತ ವಾತಾವರಣ ನಿರ್ಮಾಣವಾದರೆ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಹೇಳಿದ್ದಾರೆ.

ಬಕ್ರೀದ್‌ ಹಬ್ಬದ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇಸ್ಲಾಂ ಧರ್ಮೀಯರ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಬಳಿಕ ಅವರು ಮಾತನಾಡಿದರು. ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು. ಹೀಗಾಗಿ ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ ಹಂಚಿ ಬದುಕಬೇಕು. ಅನೇಕ ಶಕ್ತಿಗಳು ಉದ್ದೇಶಪೂರ್ವಕವಾಗಿಯೇ ನಮ್ಮ ನಡುವೆ ದ್ವೇಷ ಹುಟ್ಟಿಸಲು ಪ್ರಯತ್ನ ಮಾಡುತ್ತವೆ. ಅದಕ್ಕೆ ನಾವು ಸೊಪ್ಪು ಹಾಕಬಾರದು. ಈ ನಿಟ್ಟಿನಲ್ಲಿ ದೇವರು ಎಲ್ಲರಿಗೂ ಒಳ್ಳೆಯ ಬುದ್ಧಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

ಪ್ರಧಾನಿ ಮೋದಿ ಪರಿಶ್ರಮದಿಂದ ಭಾರತಕ್ಕೆ ಜಾಗತಿಕ ಅಗ್ರ ಸ್ಥಾನ: ಸಂಸದ ಅಣ್ಣಾಸಾಹೇಬ ಜೊಲ್ಲೆ

ತ್ಯಾಗದ ಸಂಕೇತ: ಬಕ್ರೀದ್‌ ಹಬ್ಬ ತ್ಯಾಗದ ಸಂಕೇತ. ರಾಜ್ಯದ ಮುಸಲ್ಮಾನ ಬಾಂಧವರಿಗೆ ಬಕ್ರೀದ್‌ ಹಬ್ಬದ ಶುಭಾಶಯ ಕೋರಿದ್ದೇನೆ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಹಲವರು ಹಾಜರಿದ್ದರು.