* ದಿ ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆ* ನಾಯಕರ ಪರ - ವಿರೋಧ ವಾಕ್ ಸಮರಕ್ಕೂ ಈ ಚಿತ್ರ ವೇದಿಕೆ* ದಿ ಕಾಶ್ಮೀರ್ ಫೈಲ್ಸ್ ಬಿಜೆಪಿಯ ಟೂಲ್ ಕಿಟ್ ಎಂದ ಪ್ರಿಯಾಂಕ್ ಖರ್ಗೆ

ವರದಿ: ರವಿ ಶಿವರಾಮ್‌, ಏಷ್ಯಾನೆಟ್‌ನ್ಯೂಸ್

ಬೆಂಗಳೂರು, (ಮಾ.19):
ದಿ ಕಾಶ್ಮೀರ ಫೈಲ್ಸ್ (The Kashmir Files) ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆ ದೇಶದಾದ್ಯಂತ ಜೋರಾಗಿರುವ ಹೊತ್ತಿನಲ್ಲೇ ರಾಜಕೀಯ ನಾಯಕರ ಪರ - ವಿರೋಧ ವಾಕ್ ಸಮರಕ್ಕೂ ಈ ಚಿತ್ರ ವೇದಿಕೆಯಾಗಿದೆ. ದಿ ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ (Priyank Kharge) ಇದು ಬಿಜೆಪಿಯ ಟೂಲ್ ಕಿಟ್ ಎಂಬ ಗಂಭೀರ ಆರೋಪ ಮಾಡಿದ್ದಾರೆ. 

‌ಕೆಪಿಸಿ ಕಚೇರಿಯಲ್ಲಿ ಮಾತನಾಡಿದ ಪ್ರಿಯಾಂಕ ಖರ್ಗೆ ರಾಜ್ಯದಲ್ಲಿ ಈ ಸಿನಿಮಾಗೆ ಟ್ಯಾಕ್ಸ್ ಫ್ರೀ ಮಾಡಿದ್ರು. ಶಾಸಕರೆಲ್ಲಾರೂ ಸಿನಿಮಾ ನೋಡಲು ಸ್ಪೀಕರ್ ವ್ಯವಸ್ಥೆ ಮಾಡಿದ್ರು. ಆದ್ರೆ ಸಿನಿಮಾ ಬಿಜೆಪಿಯವರ ಟೂಲ್ ಕಿಟ್ ಎನ್ನುವ ಆರೋಪ ಮಾಡಿದ್ದಾರೆ. ಹಾಗಾದರೆ ಈ ಘಟನೆ ನಡೆದಿದ್ದು ಸುಳ್ಳೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಘಟನೆ ನಡೆದಿಲ್ಲ ಎಂದು ನಾನು ಹೇಳುತ್ತಿಲ್ಲ ಆದರೆ ಈ ಸಿನಿಮಾ ನಿರ್ದೇಶಕರ ಕಲ್ಪನೆ ಎಂಬ ದ್ವಂದ್ವ ಉತ್ತರ ನೀಡಿದ್ರು. ಅಂತಿಮವಾಗಿ ಇದೊಂದು ಸಿನಿಮಾ ಎಂದ ಖರ್ಗೆ, ಕೋಮುಗಲಭೆ ಒಂದು ಗಲಭೆ ಅಷ್ಟೇ. ಅದು ಆಗಬಾರದು. ಆದ್ರೆ ಬಿಜೆಪಿಯವರು ಯಾಕೆ ಈ ಚಿತ್ರವನ್ನು ಇಷ್ಟೊಂದು ವೈಭಕಿರಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ರು. 

The Kashmir Files: ಕಾಶ್ಮೀರ್ ಫೈಲ್ಸ್‌ಗೆ ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ

ಗೋಧ್ರಾ ಸಿನಿಮಾ ಮುಚ್ಚಿಟ್ಟಿದ್ದೇಕೆ?
ಕಾಶ್ಮೀರ್ ಫೈಲ್ಸ್ ಸಿನಿಮಾ ವೈಭವಿಕರಣ ಮಾಡ್ತಾ ಇರೋರು ಈ ಹಿಂದೆ ನಡೆದ ಗೋಧ್ರಾ ಹತ್ಯಾಕಾಂಡದ ಸಿನಿಮಾವನ್ನು ಮುಚ್ಚಿಟ್ಟಿರೋದು ಯಾಕೆ ಎಂದು ಪ್ರಶ್ನೆ ಮಾಡಿದ್ರು. ಕಾಶ್ಮೀರದಲ್ಲಿ ಘಟನೆ ನಡೆದಾಗ ಅಂದು ಯಾವ ಸರ್ಕಾರ ಇತ್ತು, ಏನು ಕ್ರಮ ಕೈಗೊಂಡಿದ್ರು ಎನ್ನುವ ಬಗ್ಗೆ ನಾನಿಗ ಚರ್ಚೆ ಮಾಡೋಕೆ ಹೋಗೊದಿಲ್ಲ ಎಂದು ಹೇಳಿದ್ರು. ಕನ್ನಡದಲ್ಲಿ ಕೂಡ ಕಾಶ್ಮೀರ್ ಫೈಲ್ಸ್ ಸಿನಿಮಾ ಬರ್ತಾ ಇದ್ಯಂತಲ್ಲಾ ಎಂದು ಕೇಳಿದ ಪ್ರಶ್ನೆಗೆ ಬರ್ಲಿ ಬಿಡಿ, ಆಸಕ್ತಿ ಇದ್ದವರು ನೋಡ್ತಾರೆ. ಅಂತಿಮವಾಗಿ ಅದೊಂದು ಸಿನಿಮಾ ಅಷ್ಟೇ ಎಂದು ವ್ಯಾಖ್ಯಾನ ಮಾಡಿದ್ರು.‌

ಮೊನ್ನೆಯಷ್ಟೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪಕ್ಷಾತೀತವಾಗಿ ಎಲ್ಲಾ ಶಾಸಕರಿಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಿದ್ರು.‌ ವಿಧಾನಸೌಧಕ್ಕೆ ಎರಡು ಬಸ್ ತರಿಸಿ ಅಲ್ಲಿಂದಲೇ ಶಾಸಕರನ್ನು ಚಿತ್ರ ಮಂದಿರಕ್ಕೆ ಕರೆದುಕೊಂಡು ಹೋಗಿದ್ರು. ವಿಶೇಷ ಅಂದ್ರೆ ಅಂದು ಬಿಜೆಪಿ ಶಾಸಕರು ಸಚಿವರನ್ನು ಹೊರತು ಪಡಿಸಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಚಿತ್ರ ವೀಕ್ಷಣೆಗೆ ಹೋಗಿರಲಿಲ್ಲ. ಅಂದು ಬಸ್ ಏರಿ ಕುಳಿತಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು, ಜೆಡಿಎಸ್ ಶಾಸಕ ಶಿವಲಿಂಗೆ ಗೌಡರಿಗೆ ಸಿನಿಮಾ ವೀಕ್ಷಣೆಗೆ ಬರುವಂತೆ, ತಮ್ಮ ಜೊತೆ ಬಸ್ ನಲ್ಲಿ ಬರುವಂತೆ ಮನವಿ ಮಾಡಿದ್ರು.‌ ಆದರೆ ಶಿವಲಿಂಗೆ ಗೌಡರು ಇಲ್ಲ ಸರ್ ನೀವು ಹೋಗಿ ನಾನು ಆಮೇಲೆ ಬರ್ತೇನೆ ಎಂದು ಜಾರಿಕೊಂಡಿದ್ರು...

ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡೋಕೆ ಹೋಗ್ತಿರಾ ಸರ್ ಎಂದು ವಿಧಾನಸಭೆ ಲಾಂಜ್ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕೇಳಿದಾಗ, ಇಲ್ಲಪ್ಪ ನನಗೆ ಹಿಂದಿ ಅರ್ಥ ಆಗೋದಿಲ್ಲ. ನಾನು ಸಿನಿಮಾ ಎಲ್ಲಾ ನೋಡೊದು ಕಡಿಮೆ ಎಂದು ಈ ಸಿನಿಮಾ ವೀಕ್ಷಣೆಗೆ ನಿರಾಸಕ್ತಿ ತೋರಿದ್ರು. 

ನೈಜ ಘಟನೆ ಆಧಾರಿತ ಕಾಶ್ಮೀರ ಪಂಡಿತರ ಮಾರಣಹೋಮದ ಮೇಲೆ ಮಾಡಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಬಹುತೇಕ ಕಾಂಗ್ರೆಸ್ ನಾಯಕರು ವಿರೋಧ ಮಾಡಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ಉಗ್ರವಾಗಿ ಹೇಳಿಕೆ ನೀಡಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಈ ಸಿನಿಮಾ ಬಿಜೆಪಿಯ ಟೂಲ್ ಕಿಟ್ ಎಂದು ಆರೋಪಿಸುವ ಮೂಲಕ ಬಿಜೆಪಿ ನಾಯಕರ ಜೊತೆ ವಾಕ್ ಸಮರಕ್ಕೆ ಮತ್ತೊಂದು ವೇದಿಕೆ ಕಲ್ಪಿಸಿದ್ದಾರೆ. 

ರಾಜ್ಯ ಬಿಜೆಪಿ ಮಾಧ್ಯಮ ವಿಭಾಗ ಕೂಡ ಈ ಸಿನಿಮಾ‌ ವೀಕ್ಷಣೆ ವ್ಯವಸ್ಥೆ ಮಾಡಿದೆ. ಪತ್ರಕರ್ತರು, ಸಮಾಜದ ಪ್ರಮುಖರು ಸೇರಿದಂತೆ ಬೇರೆ ಬೇರೆ ವಲಯದ ಮುಖ್ಯಸ್ಥರಿಗೂ ಸಿನಿಮಾ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಿದೆ.