ಆರ್‌ಸಿಬಿ ತಂಡ ಐಪಿಎಲ್ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ನಡೆದಿರುವ ದುರ್ಘಟನೆ ನಿಜಕ್ಕೂ ಅಪಾರ ನೋವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕೊಟ್ಟೂರು (ಜೂ.06): ಆರ್‌ಸಿಬಿ ತಂಡ ಐಪಿಎಲ್ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ನಡೆದಿರುವ ದುರ್ಘಟನೆ ನಿಜಕ್ಕೂ ಅಪಾರ ನೋವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ತಾಲೂಕಿನ ಉಜ್ಜಯಿನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡ ಗೆದ್ದಿದ್ದು ಭಾರೀ ಖುಷಿ ತಂದಿತ್ತು. ಆದರೆ ಅದರ ವಿಜಯೋತ್ಸವದಲ್ಲಿ ನಡೆದ ದುರ್ಘಟನೆಯಲ್ಲಿ ಮಡಿದ ಕ್ರಿಕೆಟ್ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.
ಕ್ರಿಕೆಟ್ ಹಾಗೂ ಆಟಗಾರರ ಬಗ್ಗೆ ಅಭಿಮಾನವಿರಬೇಕು. ಆದರೆ ಅತಿಯಾದ ಅಭಿಮಾನ ಬೇಡೆ. ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಅಧಿಕ ಅಭಿಮಾನಿಗಳು ಸೇರುವುದು ಸಾಮಾನ್ಯವಾದರೂ, ನಿರೀಕ್ಷೆಗೂ ಮೀರಿ ಸೇರಿದಾಗ ಪೊಲೀಸರು ಕಟ್ಟು ನಿಟ್ಟಿನ ನಿಯಂತ್ರಣ ಮಾಡಬೇಕಿತ್ತು ಎಂದರು. ಅಲ್ಲದೇ ಸರ್ಕಾರದ ವತಿಯಿಂದಲೂ ಅದೇ ದಿನ ಏಕಾಏಕಿ ಆಟಗಾರರಿಗೆ ಸನ್ಮಾನ ಇರಿಸಿಕೊಂಡಿದ್ದು ಸಹ ಹೆಚ್ಚು ಜನ ಸೇರಲು ಕಾರಣವಾಗಿರಬಹುದು. ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದ ಆರ್‌ಸಿಬಿಯವರು ಯಾವುದೇ ಮುನ್ನಚ್ಚರಿಕೆ ಕೈಗೊಂಡಿದ್ದರೋ ಇಲ್ಲವೋ ಎಂಬುದು ತಿಳಿಯಬೇಕು. ದುರ್ಘಟನೆ ಕುರಿತು ಸರ್ಕಾರ ಮಾಡಿಕೊಳ್ಳುತ್ತಿರುವ ಸಮರ್ಥನೆ ಸರಿಯಲ್ಲ.
ಕ್ರಿಕೆಟ್‌ಗೆ ಅಪಾರ ಅಭಿಮಾನಿಗಳಿರುವುದು ತಿಳಿದಿದ್ದರೂ ಮುಂಜಾಗ್ರತೆ ವಹಿಸದೇ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇದರಲ್ಲಿ ಗುಪ್ತಚರ ಇಲಾಖೆ ವೈಫಲ್ಯವೂ ಇದೆ. ಸರ್ಕಾರ ಮತ್ತು ಆರ್‌ಸಿಬಿ ಒಂದೇ ದಿನ ಕಾರ್ಯಕ್ರಮ ಆಯೋಜನೆ ಮಾಡಿದಾಗ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ಮಾಡಬೇಕಿತ್ತು. ಕಾರ್ಯಕ್ರಮ ಪ್ರವೇಶಕ್ಕೆ ಆರ್‌ಸಿಬಿ ಯಾವುದೇ ಖಚಿತ ಮಾಹಿತಿ ನೀಡದಿರುವುದು ನಂತರ ಎಲ್ಲರಿಗೂ ಉಚಿತ ಎಂದು ಹೇಳಿರುವುದು ಪ್ರಮಾದಕ್ಕೆ ಕಾರಣವಾಗಿರಬಹುದು. ದುರ್ಘಟನೆ ಕುರಿತು ನೇಮಕ ಮಾಡಲಾಗುವ ಮ್ಯಾಜಿಸ್ಟೀರಿಯಲ್ ತನಿಖೆಯಲ್ಲಿ ತಪ್ಪು ಮಾಡಿದವರನ್ನು ಪತ್ತೆ ಹಚ್ಚಿ, ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇವಸ್ಥಾನ ಮನಸ್ಸುಗಳ ಬೆಸೆಯುವ ತಾಣ: ಹಳ್ಳಿಗಳಲ್ಲಿ ದೇವಸ್ಥಾನಗಳು ಮನಸ್ಸು ಮನಸ್ಸುಗಳು ಬೆಸೆಯುವ ತಾಣಗಳಾಗಿವೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು. ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಶ್ರೀ ಗಣೇಶ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗೋಪುರ, ಕಳಸ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇವರು, ಹಬ್ಬ, ಜಾತ್ರೆಗಳು ಮಾನವ ಸಂಬಂಧಗಳನ್ನು ಉಳಿಸುವ, ಬಾಂಧವ್ಯ ಗಟ್ಟಿಗೊಳ್ಳುವ ತಾಣಗಳಾಗಿವೆ. ಹಾಗಾಗಿಯೇ ನಮ್ಮ ಪೂರ್ವಜರು ತಲಾ ತಲಾಂತರಗಳಿಂದ ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಜಂಜಡ ಬದುಕಿನಲ್ಲಿ ಆಶಾಭಾವನೆ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದರು.
ಸುಗ್ಗಿ ಬಂತೆಂದರೆ ದೇವಸ್ಥಾನ ನಿರ್ಮಾಣ, ಜಾತ್ರೆಗಳು ನಡೆಯುತ್ತವೆ. ಎಲ್ಲೋ ದೂರವಿರುವ ಸಂಬಂಧಿಕರು ಹತ್ತಿರವಾಗುತ್ತಾರೆ. ತಮ್ಮ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಎಲ್ಲರೂ ಒಗ್ಗಟ್ಟಾಗಿ ದೇವರ ಕಾರ್ಯ ಮಾಡುವುದರ ಮೂಲಕ ಹಳ್ಳಿಗಳಲ್ಲಿ ಜಾತಿ, ಧರ್ಮಗಳ ಸೌಹಾರ್ದತೆ ಮೆರೆಯುತ್ತಾರೆ ಎಂದರು. ಕೂಡ್ಲಿಗಿ ತಾಲೂಕಿನಲ್ಲಿ ದೇವಸ್ಥಾನಗಳು ಅಗಣಿತ, ಐತಿಹಾಸಿಕ ದೇವಾಲಯಗಳು, ಶಿಲಾಯುಗದ ಕಾಲದ ಪಳೆಯುಳಿಕೆಗಳು ಇಲ್ಲಿ ದೊರೆಯುತ್ತಿದ್ದು, ಆದಿಮಾನವರ ಕಾಲದ ಐತಿಹಾಸಿಕ ನೆಲೆಗಳು ಇಡೀ ದೇಶದಲ್ಲಿಯೇ ಕೂಡ್ಲಿಗಿಯಲ್ಲಿ ಮಾತ್ರ ಸ್ಪಷ್ಠವಾಗಿ ಗೋಚರಿಸುತ್ತವೆ. ಹೀಗಾಗಿ ಇಲ್ಲಿಯ ಇತಿಹಾಸ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
