ಬೆಂಗಳೂರು, (ಮೇ.21): ಕೊರೋನಾ ಸೋಂಕಿತರು ಹೋಮ್​ ಐಸೊಲೇಶನ್‌ನಲ್ಲಿ ಇರುವಂತೆ ಹೇಳಿದ್ದ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಹೋಮ್​ ಐಸೊಲೇಶನ್​ನಲ್ಲಿದ್ದ 778 ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು ಎಎಪಿ ಗಂಭೀರ ಆರೋಪ ಮಾಡಿದೆ.

ಈ ಬಗ್ಗೆ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷರಾದ ಬಿ.ಟಿ. ನಾಗಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಪರಿಣಾಮ ಆಸ್ಪತ್ರೆಗಳ ಮೇಲೆ ಒತ್ತಡ ಅಧಿಕವಾಗಿರುವ ಕಾರಣ ಸೋಂಕಿತರು ಹೋಮ್​ ಐಸೊಲೇಶನ್​ಗೆ ಒಳಗಾಗುವಂತೆ ಸರ್ಕಾರ ತಿಳಿಸಿತ್ತು. ಆದರೆ, ಮನೆ ಆರೈಕೆಯಲ್ಲಿದ್ದ ಕೊರೋನಾ ಸೋಂಕಿತರಿಗೆ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಪ್ರತಿ ದಿವಸ ಸೂಕ್ತ ವೈದ್ಯಕೀಯ ಉಪಚಾರಗಳು, ಸಹಾಯ , ಮಾರ್ಗದರ್ಶನ ಹಾಗೂ ಆರೈಕೆ ಇದ್ಯಾವುದೂ ಸಿಗದ ಕಾರಣದಿಂದ ಇದೇ ಮೇ ತಿಂಗಳ 18 ದಿವಸಗಳಲ್ಲಿ 778 ಮಂದಿ ಬೆಂಗಳೂರಿಗರು ಸಾವನ್ನಪ್ಪಿದ್ದಾರೆ ಎಂದರು.

ಸರ್ಕಾರದ ಬಳಿ 1000 ಅನಾಥ ಶವಗಳ ಅಸ್ಥಿ: ಸಚಿವ ಅಶೋಕ್

 ಹೀಗಾಗಿ ಈ ಎಲ್ಲಾ ಸಾವುಗಳಿಗೆ ಸರ್ಕಾರ ನಡೆಸುವವರ ಸಂಪೂರ್ಣ ಬೇಜವಾಬ್ದಾರಿತನ, ನಿರ್ಲಕ್ಷ್ಯತನವೇ ನೇರ ಕಾರಣವಾಗಿದ್ದು ಇದು ಸರ್ಕಾರಿ ಪ್ರಾಯೋಜಿತ ಕಗ್ಗೊಲೆಗಳು ಎಂದು  ಆರೋಪಿಸಿದರು.

ಸರ್ಕಾರವು ಸೋಂಕು ಪೀಡಿತರಿಗೆ ಬೆಡ್ ಗಳನ್ನು ಪೂರೈಸಲು ಅಸಹಾಯಕವಾಗಿ ಮನೆಗಳಲ್ಲಿಯೇ ಆರೈಕೆ ಪಡೆದುಕೊಳ್ಳಬೇಕೆಂದು ಹೇಳಿ ಕೇವಲ ಕೈ ತೊಳೆದುಕೊಂಡಿತೇ ಹೊರತು ಆ ರೋಗಿಗಳ ಸ್ಥಿತಿಗತಿ ಏನಾಗಿದೆ ಎಂಬ ಪರಿಶೀಲನೆಯನ್ನು ಮಾಡಲೇ ಇಲ್ಲ.ಹೋಮ್ ಐಸೊಲೇಷನ್ ಮಾರ್ಗದರ್ಶನ ಸೂತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೆ ಇಷ್ಟೆಲ್ಲ ಸಾವು ನೋವುಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯಕೀಯ ಸಲಹೆ ಉಪಚಾರಗಳು ಸಿಕ್ಕಿದ್ದಲ್ಲಿ ಈ ಸಾವುಗಳನ್ನು ತಡೆಯಬಹುದಾಗಿತ್ತು . ಅದನ್ನು ಬಿಟ್ಟು ಬಿಬಿಎಂಪಿ ಹಾಗೂ ಸರ್ಕಾರದ ಮಂತ್ರಿಗಳು ಬರೀ ಸುಳ್ಳುಗಳನ್ನೇ ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದೇ ಈ ಎಲ್ಲಾ ಸಾವುಗಳಿಗೆ ಕಾರಣ ಎಂದು ಕಿಡಿಕಾರಿದರು.