ಬೆಂಗಳೂರು, (ಮೇ.21): ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟ ಸುಮಾರು 1 ಸಾವಿರ ಅನಾಥ ಶವಗಳ ಅಸ್ಥಿ ಸರಕಾರದ ಬಳಿ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಹಾಯಕ ಜನರ ಅಸ್ಥಿ ಸರ್ಕಾರದ ಬಳಿ ಇದೆ. ಅನಿವಾರ್ಯ ಅಥವಾ ಕಷ್ಟದಿಂದಲೋ ಕುಟುಂಬದವರು ಸಂಗ್ರಹಿಸದ ಅಸ್ಥಿ ಸರಕಾರದ ಬಳಿ ಇದೆ ಎಂದು ಸ್ಪಷ್ಟಪಡಿಸಿದರು.

ಅನಾಥ ಮಕ್ಕಳ ಪಾಲಿಗೆ ತಾಯಿಯಾದ ಶಶಿಕಲಾ ಜೊಲ್ಲೆ

ಮೃತರ ಸಂಬಂಧಿಕರು ಮೊಬೈಲ್ ಸ್ವಿಚ್ ಆಫ್ ಇದೆ. ನಾವು ಅಸ್ಥಿ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದೇವೆ. ಆದರೆ ಅವರವರ ಕಷ್ಟದಿಂದ ಅಸ್ಥಿ ಪಡೆಯುತ್ತಿಲ್ಲ. ಅಂತಹ ಅಸ್ಥಿಗಳನ್ನು ಸರ್ಕಾರವೇ ಸಂಸ್ಕಾರ ಮಾಡಲು ತೀರ್ಮಾನಿಸಿದೆ ಎಂದು ಅಶೋಕ್ ಹೇಳಿದರು.

ಬಡವ ಬಲ್ಲಿದ ಎಂದು ಭೇದ ಭಾವ ಮಾಡದೇ ಅಸ್ಥಿಗಳನ್ನು ಪಂಚಭೂತಗಳಲ್ಲಿ ಲೀನವಾಗುವಂತೆ ವ್ಯವಸ್ಥೆ. ನೀರಿನಲ್ಲಿ ಸಂಪ್ರದಾಯಬದ್ಧವಾಗಿ ಕಂದಾಯ ಇಲಾಖೆ ವತಿಯಿಂದ ಗೌರವಯುತವಾಗಿ ಸಂಸ್ಕಾರ ಮಾಡಲಿದ್ದೇವೆ ಎಂದು ತಿಳಿಸಿದರು.