ಪುತ್ತೂರು: ಮುಚ್ಚುತ್ತಿಲ್ಲ ಪುತ್ತಿಲ ವರ್ಸಸ್ ಬಿಜೆಪಿ ಕಂದಕ!
ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಬಾಂಧವ್ಯ ಸರಿಪಡಿಸುವ ಪ್ರಯತ್ನಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರದ ಹಿರಿಯರು ಮುಂದಾಗಿರುವಂತೆಯೇ ಇನ್ನೊಂದಂಡೆ ವಾತಾವರಣ ಸಂಘರ್ಷದತ್ತ ತಿರುಗುತ್ತಿದೆ.
ಮಂಗಳೂರು (ಮೇ.20) :
ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಬಾಂಧವ್ಯ ಸರಿಪಡಿಸುವ ಪ್ರಯತ್ನಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರದ ಹಿರಿಯರು ಮುಂದಾಗಿರುವಂತೆಯೇ ಇನ್ನೊಂದಂಡೆ ವಾತಾವರಣ ಸಂಘರ್ಷದತ್ತ ತಿರುಗುತ್ತಿದೆ.
ಬಿಜೆಪಿ ಮುಖಂಡರಾದ ಡಿ.ವಿ.ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲು ವಿರುದ್ಧ ಅವಹೇಳನಕಾರಿ ಬ್ಯಾನರ್ ಅಳವಡಿಸಿದ ಆರೋಪದಲ್ಲಿ ಬಂಧನಕ್ಕೊಳಗಾದ 9 ಮಂದಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವುದು ಬಿಜೆಪಿಯನ್ನು ಸಂಕಷ್ಟಕ್ಕೆ ತಳ್ಳಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 9 ಮಂದಿ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಕೇಂದ್ರ ಮಾಜಿ ಸಚಿವ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ದಿಢೀರ್ ಆಗಮಿಸಿ ಭೇಟಿ ಮಾಡಿದ್ದಾರೆ.
ಕಾರ್ಯಕರ್ತರಿಗೆ ಹೊಡೆಸಿದ್ದು ನಳಿನ್, ಕಲ್ಲಡ್ಕ: ಅಭಯಚಂದ್ರ ಜೈನ್ ಆರೋಪ
ಪುತ್ತಿಲ ಸ್ಪರ್ಧೆ, ಅದರಿಂದ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಿದ್ದು, ಇದೀಗ ಪುತ್ತಿಲರನ್ನು ಸಂಸತ್ ಸ್ಥಾನಕ್ಕೆ ಸ್ಪರ್ಧಿಸಲು ಬೆಂಬಲಿಸುವಂತೆ ಅವರ ಬಳಗ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದೆ. ಈ ಮಧ್ಯೆ ಬಿಜೆಪಿ ಹಾಗೂ ಸಂಘಪರಿವಾರದ ಹಿರಿಯ ಮುಖಂಡರು ಪುತ್ತೂರಲ್ಲಿ ಪುತ್ತಿಲ ಹಾಗೂ ಬಿಜೆಪಿ ನಡುವಿನ ಕಂದಕ ಮುಚ್ಚುವ ಬಗ್ಗೆ ಪ್ರಯತ್ನಕ್ಕೆ ಇಳಿದಿದ್ದಾರೆ. ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ, ಬಳಿಕ ಈ ಘಟನೆ ಹಿಂದೆ ಕಾಂಗ್ರೆಸ್ ಕೈವಾಡ ಎಂದು ಜರೆದಿದ್ದಾರೆ, ಬ್ಯಾನರ್ ಹಾಕಿ ಅವಮಾನ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಪರಾಜಿತ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಈಗ ಮುಖಂಡರ ಜತೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಿದ್ದಾರೆ. ಕರಾವಳಿಯ ಎಲ್ಲ ಪಕ್ಷಗಳ ಶಾಸಕರು ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಈ ಎಲ್ಲ ರಾಜಕೀಯ ವಿದ್ಯಮಾನಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪುತ್ತಿಲ-ಬಿಜೆಪಿ ಬಿರುಕು ಸರಿಪಡಿಸುವ ಪ್ರಯತ್ನವನ್ನೇ ಹೊಸಕಿ ಹಾಕುವಂತೆ ಮಾಡುತ್ತಿವೆ.
ಪುತ್ತಿಲ ಹಾಗೂ ಬಿಜೆಪಿ ನಡುವಿನ ಕಂದಕವನ್ನು ಸರಿಪಡಿಸುವ ದಿಶೆಯಲ್ಲಿ ಗುರುವಾರ ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಗಮಿಸಿದರೂ ಕೊನೆಗೆ ಇಂತಹ ಘಟನೆ ನಡೆಯಬಾರದಿತ್ತು ಎನ್ನುವ ಮೂಲಕ ಬಿಜೆಪಿ ಮುಖಂಡರತ್ತ ಬೊಟ್ಟು ಮಾಡಿ ತೆರಳಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರ ಕ್ರಮವನ್ನು ವಿರೋಧಿಸಿದ್ದಾರೆ. ಆದರೆ ಪಕ್ಷ ಹಾಗೂ ಪುತ್ತಿಲ ಬಣದ ನಡುವಿನ ಕಂದಕ ಕರಗಿಲ್ಲ.
ಬಿಜೆಪಿ ನಾಯಕರ ಹಿಂದೇಟು:
9 ಮಂದಿ ವಿರುದ್ಧ ಪೊಲೀಸ್ ದೌರ್ಜನ್ಯ ಸೋಮವಾರ ರಾತ್ರಿ ನಡೆದಿದ್ದು, ಈವರೆಗೂ ಬಿಜೆಪಿ ಸ್ಥಳೀಯ ಮುಖಂಡರನ್ನು ಹೊರತುಪಡಿಸಿದರೆ, ಮಾಜಿ ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್ ಆಗಲೀ ಆಸ್ಪತ್ರೆಗೆ ಆಗಮಿಸಿ ತಮ್ಮದೇ ಕಾರ್ಯಕರ್ತರನ್ನು ಮಾತನಾಡಿಸಿಲ್ಲ ಎಂದ ನೋವನ್ನು ಬಿಜೆಪಿ ಕಾರ್ಯಕರ್ತರು ವ್ಯಕ್ತಪಡಿಸುತ್ತಾರೆ. ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ ಎಂಬ ಪ್ರಶ್ನೆ ಪುತ್ತಿಲರ ಜಾಲತಾಣಗಳಲ್ಲೂ ಭಾರಿ ವೈರಲ್‌ಗೆ ಆಗುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಪುತ್ತಿಲ ಬಳಗ ಆಸ್ಪತ್ರೆ ಒಳಗೆ ಪ್ರವೇಶಿಸಲು ಅಡ್ಡಿಪಡಿಸಿದೆ. ಇಂತಹ ವಿದ್ಯಮಾನಗಳು ಪುತ್ತಿಲ ವರ್ಸಸ್ ಬಿಜೆಪಿ ನಡುವೆ ಬಿರುಕು ಮತ್ತಷ್ಟುಹೆಚ್ಚಿಸಲು ಕಾರಣವಾಗುತ್ತಿದೆ.
ನಮ್ಮ ಕಾರ್ಯಕರ್ತರು ತಾಲಿಬಾನಿಗಳಲ್ಲ, ದೇಶದ್ರೋಹಿಗಳಲ್ಲ: ಪೊಲೀಸರ ವರ್ತನೆಗೆ ಯತ್ನಾಳ್ ಗರಂ
ಪ್ರತಿ ಅಸೆಂಬ್ಲಿ ಕ್ಷೇತ್ರ, ಬೂತ್‌ಗಳಲ್ಲಿ ಪುತ್ತಿಲ ಬ್ಯಾನರ್!
ಇವೆಲ್ಲದರ ನಡುವೆ ಅರುಣ್ ಕುಮಾರ್ ಪುತ್ತಿಲ ಪರವಾಗಿ ಅಭಿಮಾನಿಗಳು ಈಗಾಗಲೇ ಸಂಸತ್ ಸ್ಥಾನಕ್ಕೆ ಪುತ್ತಿಲ ಬೆಂಬಲಿಸಿ ಎಂದು ವಾಟ್ಸ್‌ಆ್ಯಪ್ ಗುಂಪುಗಳ ಮೂಲಕ 1.50 ಲಕ್ಷಕ್ಕೂ ಅಧಿಕ ಸದಸ್ಯರನ್ನು ಸೇರ್ಪಡೆ ಮಾಡಿದ್ದಾರೆ. ಈ ಮೂಲಕ ಜಿಲ್ಲೆಯಾದ್ಯಂತ ಪುತ್ತಿಲ ಹವಾ ಮೂಡುವಂತೆ ಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದಾರೆ. ದ.ಕ. ಜಿಲ್ಲೆಯ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಜಿಲ್ಲೆಯಲ್ಲಿ ಗೆದ್ದ ಬಿಜೆಪಿ ಶಾಸಕರಿಗೆ ಪುತ್ತಿಲರ ಅಭಿಮಾನಿಗಳ ಹೆಸರಲ್ಲಿ ಅಭಿನಂದನಾ ಬ್ಯಾನರ್‌ಗಳು ಕಾಣಿಸತೊಡಗಿವೆ. ಅಲ್ಲದೆ ಪುತ್ತೂರಿನ ಎಲ್ಲ 220 ಬೂತ್‌ಗಳಲ್ಲೂ ಪುತ್ತಿಲರ ಅಭಿಮಾನಿಗಳು ಜಿಲ್ಲೆಯ ಗೆದ್ದ ಬಿಜೆಪಿ ಶಾಸಕರ ಜತೆ ಪುತ್ತಿಲರ ಹೆಸರಿನಲ್ಲಿ ಅಭಿನಂದನಾ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದಾರೆ.