ಕಾಂಗ್ರೆಸ್‌ನಲ್ಲಿ ನಿಲ್ಲದ ಬಣ ರಾಜಕಾರಣ: ರಾಜ್ಯ ನಾಯಕರಿಗೆ ಕ್ಯಾರೆ ಅನ್ನದ ಕೈ ಪಕ್ಷದ ಆಕಾಂಕ್ಷಿಗಳು
ಕೈ ನಾಯಕರ ಬಣ ರಾಜಕಾರಣಕ್ಕೆ ಕಾರ್ಯಕರ್ತರು ಸುಸ್ತೋ ಸುಸ್ತು, ಬಣ ರಾಜಕಾರಣಕ್ಕೆ ಬ್ರೇಕ್ ಹಾಕ್ತಾರಾ ಸಿದ್ದರಾಮಯ್ಯ?
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಆ.23): ಇನ್ನೇನು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಆಯಾ ಮತಕ್ಷೇತ್ರಗಳ ಟಿಕೆಟ್ ಆಕಾಂಕ್ಷಿ ನಾಯಕರು ಇನ್ನಿಲ್ಲದ ಪೈಪೋಟಿ ನಡೆಸಿದ್ದು, ಜೊತೆಗೆ ತಮ್ಮ ತಮ್ಮ ಪ್ರಭಾವ ತೋರ್ಪಡಿಸಲು ಕಸರತ್ತು ನಡೆಸಿರೋ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಮುಧೋಳ ಮತಕ್ಷೇತ್ರದಲ್ಲಿ ಬಣ ರಾಜಕಾರಣ ತಾರಕಕ್ಕೇರಿದೆ. ಈ ಮಧ್ಯೆ ಕೈ ಪಕ್ಷದ ಹಿರಿಯ ನಾಯಕರು ಪಕ್ಷದ ಬಹಿರಂಗ ವೇದಿಕೆಯಲ್ಲಿಯೇ ಹೊಂದಾಣಿಕೆಯೊಂದಿಗೆ ಮುನ್ನಡೆಯುವಂತೆ ಸೂಚಿಸಿದರೂ ಪ್ರಯೋಜನ ಇಲ್ಲದಂತಾಗಿದೆ. ಮುಧೋಳ ಮತಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಬಣ ರಾಜಕಾರಣ ಕುರಿತು ವರದಿ ಇಲ್ಲಿದೆ.
ಹೌದು, ಬಾಗಲಕೋಟೆ ಜಿಲ್ಲೆಯ. 7 ವಿಧಾನಸಭಾ ಮತಕ್ಷೇತ್ರಗಳ ಪೈಕಿ ಮುಧೋಳ ಸಹ ಒಂದು. ಈ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಾಗಿರೋ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಮತ್ತು ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಮಧ್ಯೆ ಈಗಿನಿಂದಲೇ ಇನ್ನಿಲ್ಲದ ಪೈಪೋಟಿ ಶುರುವಾಗಿದೆ. ಹೀಗಾಗಿ ಈ ಮುಧೋಳ ಮತಕ್ಷೇತ್ರದಲ್ಲಿ ಪ್ರತಿಭಟನೆಯಾಗಲಿ, ಸಭೆಯಾಗಲಿ ಎರಡೆರಡು ಕಡೆಗೆ ಕಾರ್ಯಕರ್ತರನ್ನ ಕರೆಯುತ್ತಿರೋದು ಉಭಯ ನಾಯಕರು ತಮ್ಮ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದಂತಾಗಿದೆ.
ಸಿದ್ದುಗೆ ಹಿನ್ನಡೆ ಮಡಿಕೇರಿ ಚಲೋ ಯಾತ್ರೆ ರದ್ದು, ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ!
ಪ್ರತ್ಯೇಕ ಪ್ರತಿಭಟನೆಗಳ ಮೆರವಣಿಗೆ
ಜಿಲ್ಲೆಯ ಮುಧೋಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಬಲವಾಗಿ ಬೇರು ಬಿಟ್ಟಿರುವ ಬಣ ರಾಜಕಾರಣ ಸದ್ಯ ಅಂತ್ಯಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬದಲಿಗೆ ಬಣ ರಾಜಕಾರಣ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತ ಹೊರಟಂತೆ ಕಾಣುತ್ತಿದೆ. ಕ್ಷೇತ್ರದಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಮತ್ತು ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಇಬ್ಬರ ಮಧ್ಯೆ ತೀವ್ರ ಪೈಪೋಟಿ ಇದೆ. ಹೀಗಾಗಿ ಇಡೀ ತಾಲೂಕಿನಲ್ಲಿ ಕಾಂಗ್ರೆಸ್ ಗೆ ಭದ್ರ ಬುನಾದಿ ಇದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ಪರಿಣಾಮವಾಗಿ 2004 ರಿಂದಲೂ ಇಲ್ಲಿ ಬಿಜೆಪಿ ಗೆಲುವಿನ ನಗೆ ಬೀರುತ್ತಲೇ ಇದೆ.
ಇಷ್ಟಾದರೂ ಇಲ್ಲಿನ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಿಲ್ಲ. ಒಣ ಪ್ರತಿಷ್ಠೆಯಲ್ಲಿ ಕಾಲ ಹರಣ ಮಾಡುತ್ತಿದ್ದಾರೆ. ಇಲ್ಲಿನ ಬಣ ರಾಜಕೀಯ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ ನೋಡುವುದಾದರೆ ಉಭಯ ನಾಯಕರ ಬಣಗಳು ಒಟ್ಟಾಗಿ ಕಾರ್ಯಕ್ರಮ ಮಾಡುತ್ತಿಲ್ಲ, ಒಟ್ಟಿಗೆ ಹೋರಾಟ ರೂಪಿಸುತ್ತಿಲ್ಲ. ಎಲ್ಲವೂ ಪ್ರತ್ಯೇಕವಾಗಿ ನಡೆಯುತ್ತವೆ. ಸಾಲದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನ ಮೇಲೆ ಮೊಟ್ಟೆ ಎಸೆದ ಪ್ರಕರಣ ಖಂಡಿಸಿ ಇತ್ತೀಚಿಗೆ ಮುಧೋಳದಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆಗಳು ನಡೆದವು, ಅದರಲ್ಲೂ ಎರಡು ಗುಂಪಾಗಿ ಪ್ರತ್ಯೇಕ ಪ್ರತಿಭಟನೆ ನಡೆದವು. ಒಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ನೇತೃತ್ವದಲ್ಲಿ, ಇನ್ನೊಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಸತೀಶ್ ಬಂಡಿವಡ್ಡರ ನೇತೃತ್ವದಲ್ಲಿ ನಡೆಯಿತು. ಹೀಗೆ ಉಭಯ ನಾಯಕರ ನೇತೃತ್ವದಲ್ಲಿ ಒಂದೇ ದಿನ, ಒಂದೇ ಸಮಯಕ್ಕೆ, ಒಂದೇ ಊರಲ್ಲಿ ಎರಡೆರಡು ಕಾಂಗ್ರೆಸ್ ಪ್ರತಿಭಟನೆಗಳು ನಡೆದಿರೋದು ಮುಧೋಳ ಕಾಂಗ್ರೆಸ್ ಬಣ ರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾದಂತಾಗಿದೆ.
ಆಮ್ ಆದ್ಮಿಗೆ ಮತ್ತೊಂದು ಹೊಡೆತ, ಮದ್ಯ ಜಟಾಪಟಿ ನಡುವೆ ಆಪ್ ಕಾರ್ಯಕರ್ತರು ಬಿಜೆಪಿಗೆ!
ಜಾರಕಿಹೊಳಿ ಮಾತಿಗೂ ಕ್ಯಾರೆ ಅನ್ನದ ಕೈ ನಾಯಕರು
ಇನ್ನು ಮುಧೋಳ ಮತಕ್ಷೇತ್ರದಲ್ಲಿನ ಬಣ ರಾಜಕಾರಣ ಕಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇತ್ತೀಚಿಗೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮುಧೋಳದ ಕಾಂಗ್ರೆಸ್ ಪಕ್ಷದ ಬಹಿರಂಗ ಕಾರ್ಯಕ್ರಮದಲ್ಲೆ ಉಭಯ ನಾಯಕರಿಗೆ ಒಗ್ಗಟ್ಟಿನ ಮಂತ್ರ ಜಪಿಸಿ ಮುನ್ನಡೆಯುವಂತೆ ಸೂಚಿಸಿದ್ದರು, ಸಾಲದ್ದಕ್ಕೆ ನೀವಿಬ್ಬರೂ ಒಂದಾಗದ ಹೊರತು ಪಕ್ಷದ ಗೆಲುವು ಸಾಧ್ಯವಿಲ್ಲ, ಇದೇ ಪರಿಸ್ಥಿತಿ ಮುಂದುವರೆದರೆ ಬಿಜೆಪಿಯವರು ರಿವರ್ಸ್ ಓಡಿ ಗೆಲ್ತಾರೆ ಅಂತ ಭಾಷಣ ಮಾಡಿದ್ದರು. ಹೀಗಾಗಿ ಪಕ್ಷದ ಒಗ್ಗಟ್ಟಿನಲ್ಲಿ ಬಲವಿದೆ, ನೀವೆಲ್ಲರೂ ಒಗ್ಗೂಡಿದರೆ ಕಾಂಗ್ರೆಸ್ ಗೆಲುವು ನಿಶ್ವಿತ ಅಂತ ಹೇಳಿದ್ದರು. ಇಷ್ಟೆಲ್ಲಾ ಬಹಿರಂಗ ಹೇಳಿಕೆ ಭಾಷಣದ ನಂತರವೂ ಎಚ್ಚೆತ್ತುಕೊಳ್ಳದ ಕೈ ನಾಯಕರು ಒಗ್ಗೂಡದೆ ಮತ್ತೇ ಬೇರೆ ಬೇರೆಯಾಗಿಯೇ ಮುನ್ನಡೆಯುತ್ತಿದ್ದು ಈ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತಿಗೂ ಸಹ ಕ್ಷೇತ್ರದ ಕೈ ನಾಯಕರು ಕ್ಯಾರೆ ಅನ್ನದಂತಾಗಿದ್ದಾರೆ.
ಬಣ ರಾಜಕಾರಣ & ಭಿನ್ನಮತಕ್ಕೆ ಬ್ರೇಕ್ ಹಾಕ್ತಾರಾ ಸಿದ್ದರಾಮಯ್ಯ
ಹೌದು, ಬಾಗಲಕೋಟೆ ಜಿಲ್ಲೆಯ ಕೆಲವು ಮತಕ್ಷೇತ್ರಗಳಲ್ಲಿ ಬಣ ರಾಜಕೀಯ, ಭಿನ್ನಮತಗಳು ಶುರುವಾಗಿದ್ದು, ಇದಕ್ಕೆ ಯಾವುದೇ ಬ್ರೇಕ್ ಬೀಳುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಯಾರೂ ಸಹ ಒಗ್ಗಟ್ಟು ಪ್ರದರ್ಶಿಸುವ ಗೋಜಿಗೆ ಹೋಗುತ್ತಿಲ್ಲ. ಯಾಕೆಂದರೆ ಮುಧೋಳದಲ್ಲಿ ಬಣ ರಾಜಕಾರಣ ಕಂಡು ಬರುತ್ತಿದ್ದರೆ, ಇತ್ತ ತೇರದಾಳದಲ್ಲಿ ಕೆಲ ಕೈ ನಾಯಕರು ಬಹಿರಂಗವಾಗಿಯೇ ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಅಸಮಾಧಾನ ಹೊರ ಹಾಕಿ ಭಿನ್ನಮತಕ್ಕೆ ನಾಂದಿ ಹಾಡಿದ್ದರು, ಸಾಲದ್ದಕ್ಕೆ ಬಾದಾಮಿಯಲ್ಲಿಯೇ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅಸಮಾಧಾನ ಹೊರ ಹಾಕಿದ್ದರು. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದಾದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದಿಂದ ಆಯ್ಕೆಯಾಗಿರೋ ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ವತಃ ಸಭೆ ನಡೆಸಿ, ಜಿಲ್ಲೆಯ ಕೈ ನಾಯಕರಿಗೆ ತಿಳುವಳಿಕೆ ಹೇಳಿ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಹೇಳಿ, ಪಕ್ಷ ಮುನ್ನಡೆಯುವಂತೆ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಜಿಲ್ಲೆಯ ನಾಯಕರ ಮತ್ತು ಕಾರ್ಯಕರ್ತರ ಆಶಯವಾಗಿದೆ.
ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಬಣ ರಾಜಕಾರಣ ಮತ್ತು ಭಿನ್ನಮತ ಮುಂದುವರೆದಿದ್ದು, ಇವುಗಳಿಗೆ ಬ್ರೇಕ್ ಹಾಕಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದಾಗ್ತಾರಾ ಅಂತ ಕಾದು ನೋಡಬೇಕಿದೆ.