ದೆಹಲಿ ಅಬಕಾರಿ ಹಗರಣ ಜಟಾಪಟಿ ತಾರಕಕ್ಕೇರಿದೆ. ಸಿಬಿಐ ದಾಳಿ, ಇಡಿ ಕೇಸ್‌ನಿಂದ ಕೆರಳಿ ಕೆಂಡವಾಗಿರುವ ಆಮ್ ಆದ್ಮಿ ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಆಮ್ ಆದ್ಮಿ ಕಾರ್ಯಕರ್ತರು ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. 

ನವದೆಹಲಿ(ಆ.23): ಆರವಿಂದ್ ಕೇಜ್ರಿವಾಲ್ ಹಾಗೂ ಕೇಂದ್ರ ಬಿಜೆಪಿ ನಡುವಿನ ಹೋರಾಟ ತಾರಕಕ್ಕೇರಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲಿನ ಸಿಬಿಐ ದಾಳಿ ಹಾಗೂ ಇಡಿ ಕೇಸ್‌ನಿಂದ ಕೆರಳಿರುವ ಆಪ್, ಸತತ ವಾಗ್ದಾಳಿ ನಡೆಸುತ್ತಿದೆ. ಈ ಬೆಳವಣಿಗೆಗಳು ಭಾರಿ ಸಂಚಲನ ಸೃಷ್ಟಿಸಿರುವ ನಡುವೆ ಆಮ್ ಆದ್ಮಿಗೆ ಮತ್ತೊಂದು ಶಾಕ್ ಎದುರಾಗಿದೆ. ದೆಹಲಿ ಆಪ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ದೆಹಲಿ ಆಮ್ ಆದ್ಮಿ ಪಾರ್ಟಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳು ಹೊರಬರುತ್ತಿದ್ದಂತೆ ಕಾರ್ಯಕರ್ತರು ತೀವ್ರ ಮುಜುಗರ ಅನುಭವಿಸುತ್ತಿದ್ದಾರೆ. ಆಪ್ ಹಗರಣದಿಂದ ರೋಸಿ ಹೋಗಿರುವ ಕಾರ್ಯಕರ್ತರು ಇದೀಗ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಹೇಳಿದೆ. ಆಪ್ ಪೂರ್ವ ದೆಹಲಿ ಲೋಕಸಭಾ ಉಸ್ತುವಾರಿ ಚಂದ್ರಕೇತು ಮಿಶ್ರಾ ಸೇರಿದಂತೆ ಹಲವು ಆಪ್ ಕಾರ್ಯಕರ್ತರು ಬಿಜೆಪಿ ಸೇರಿಕೊಂಡಿದ್ದಾರೆ. ಈ ಕುರಿತು ದೆಹಲಿ ಬಿಜೆಪಿ ಮುಖ್ಯಸ್ಥ ಅದೇಶ್ ಗುಪ್ತಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ನೂರಕ್ಕೂ ಹೆಚ್ಚು ಆಪ್ ಕಾರ್ಯಕರ್ತರು, ಸ್ವಯಂಸೇವಕರು ಬಿಜೆಪಿ ಸೇರಿಕೊಂಡಿದ್ದಾರೆ. ಭ್ರಷ್ಟಾಚಾರ ವಿರುದ್ಧದ ಹೋರಾಟದ ಮೂಲಕ ಅಸ್ಥಿತ್ವಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಇದೀಗ ಅಧಿಕಾರದ ಆಸೆಯಿಂದ, ಇತರ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಪಾರ್ಟಿ ಫಂಡ್ ಕಲೆ ಹಾಕಲು ಭ್ರಷ್ಟಾಚಾರ ಮಾರ್ಗ ಅನುಸರಿಸುತ್ತಿದೆ. ಇದು ತೀವ್ರ ಬೇಸರ ತರಿಸಿದೆ ಎಂದು ಆಪ್ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Scroll to load tweet…

ಮನೀಶ್‌ ಸಿಸೋಡಿಯಾಗೆ ಭಾರತ ರತ್ನ ಕೊಡ್ಬೇಕಿತ್ತು; ಬದಲಿಗೆ ಸಿಬಿಐ ರೇಡ್‌ ನಡೆಸಿದೆ: ಕೇಜ್ರಿವಾಲ್‌ ಕಿಡಿ

ಸಿಸೋಡಿಯಾ ಸಿಎಂ ಆಫರ್ ಹೇಳಿಕೆಯಿಂದ ಮತ್ತೆ ಮಜುಗರ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಜೊತೆ ಗುಜರಾತ್‌ ಪ್ರವಾಸಕ್ಕೆ ಬಂದಿರುವ ಮನೀಶ್‌ ಸಿಸೋಡಿಯಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿಯಿಂದ ಬಂದ ದೂತರೊಬ್ಬರು ನನಗೆ ಎರಡು ಆಫರ್‌ ನೀಡಿದರು. ಒಂದು- ಆಪ್‌ ಒಡೆದು ಹೊರಗೆ ಬಂದರೆ ನಿಮ್ಮ ವಿರುದ್ಧ ಇರುವ ಸಿಬಿಐ, ಇ.ಡಿ. ಸೇರಿದಂತೆ ಎಲ್ಲಾ ದೊಡ್ಡ ಪ್ರಕರಣಗಳನ್ನು ಹಿಂಪಡೆಯುತ್ತೇವೆ. ಎರಡು- ನಿಮ್ಮನ್ನೇ ದೆಹಲಿಗೆ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದರು. ನಾನು ಅವರಿಗೆ ಸ್ಪಷ್ಟವಾದ ರಾಜಕೀಯ ಉತ್ತರ ನೀಡಿದ್ದೇನೆ. ನನ್ನ ರಾಜಕೀಯ ಗುರು ಕೇಜ್ರಿವಾಲ್‌. ಅವರಿಂದಲೇ ನಾನು ರಾಜಕೀಯ ಕಲಿತಿದ್ದೇನೆ. ನಾನು ಸಿಎಂ ಅಥವಾ ಪಿಎಂ ಆಗಲು ರಾಜಕಾರಣಕ್ಕೆ ಬಂದಿಲ್ಲ ಎಂದು ಹೇಳಿ ಕಳಿಸಿದ್ದೇನೆ’ ಎಂದು ತಿಳಿಸಿದರು. ಈ ನಡುವೆ, ಈ ಸಂಬಂಧ ಆಡಿಯೋ ಸಂಭಾಷಣೆಯ ಸಾಕ್ಷ್ಯವನ್ನೂ ಸಿಸೋಡಿಯಾ ಹೊಂದಿದ್ದಾರೆ. ಈ ಕುರಿತು ಕೆಲ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ. 

ಅನುರಾಗ್‌ ಠಾಕೂರ್‌ ತಿರುಗೇಟು:
ಮನೀಶ್‌ ಸಿಸೋಡಿಯಾ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ‘ಕೇಜ್ರಿವಾಲ್‌ ದೊಡ್ಡ ಸುಳ್ಳುಗಾರ. ಅವರ ಮಂತ್ರಿಗಳು ಇನ್ನೂ ದೊಡ್ಡ ಸುಳ್ಳುಗಾರರು’ ಎಂದಿದ್ದು, ಆಫರ್‌ ಹೇಳಿಕೆಯನ್ನು ನಿರಾಕರಿಸಿದ್ದಾರೆ. ದೆಹಲಿ ಸರ್ಕಾರದ ಆಡಳಿತ ಈಗ ಮೊಹಲ್ಲಾ ಕ್ಲಿನಿಕ್‌ಗಳಿಂದ ಮೊಹಲ್ಲಾ ಹೆಂಡದಂಗಡಿಗೆ ತಿರುಗಿದೆ. ಮದ್ಯದ ಹಗರಣದಲ್ಲಿ ಕೇಜ್ರಿವಾಲ್‌ ಕಿಂಗ್‌ಪಿನ್‌ ಆಗಿದ್ದರೆ ಸಿಸೋಡಿಯಾ ಪ್ರಮುಖ ಆರೋಪಿ. ಇಲ್ಲಿಯವರೆಗೆ ಅವರಿಬ್ಬರೂ ಮದ್ಯದ ಹಗರಣದ ಬಗ್ಗೆ ತೃಪ್ತಿದಾಯಕ ಸ್ಪಷ್ಟನೆ ನೀಡಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸೇರಿದರೆ ನಿಮ್ಮ ಕೇಸ್‌ಗಳು ಖುಲಾಸೆಯಾಗುತ್ತದೆ ಎಂದು ಸಂದೇಶ ಬಂದಿದೆ: ಮನೀಶ್‌ ಸಿಸೋಡಿಯಾ