ಶಾಸಕ ಬೇಳೂರು, ಸಚಿವ ಮಧು ಗುದ್ದಾಟ ತಾರಕಕ್ಕೆ: ವಿವಾದ ಇನ್ನೂ ಜೀವಂತ
ಸಚಿವ ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಆರೋಪ- ಪ್ರತ್ಯಾರೋಪ ಮಾಡಿಕೊಂಡಿದ್ದು, ವಿವಾದ ಜೀವಂತವಾಗಿಟ್ಟಿದ್ದಾರೆ

ಬೆಂಗಳೂರು(ನ.11): ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ತಿಕ್ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ಮಧು ಬಂಗಾರಪ್ಪ ಬೆಂಬಲಿಗರು ‘ಉಸ್ತುವಾರಿ ಸಚಿವರು ಯಾರೋ ಗೊತ್ತಿಲ್ಲ’ ಎಂದಿರುವ ಬೇಳೂರು ಗೋಪಾಲಕೃಷ್ಣ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ಸಲ್ಲಿಸಿದರು.
ಇದರ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಆರೋಪ- ಪ್ರತ್ಯಾರೋಪ ಮಾಡಿಕೊಂಡಿದ್ದು, ವಿವಾದ ಜೀವಂತವಾಗಿಟ್ಟಿದ್ದಾರೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾತನಾಡಿ, ‘ಬೇಳೂರು ಗೋಪಾಲಕೃಷ್ಣ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದೇನೆ. ಅವರು ಹುಷಾರಾಗಿ ಮಾತನಾಡುವುದು ಒಳ್ಳೆಯದು’ ಎಂದು ಹೇಳಿದ್ದರೆ, ಬೇಳೂರು ಗೋಪಾಲಕೃಷ್ಣ ಅವರು, ‘ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ವಿರುದ್ಧ ದೂರು ನೀಡಿರುವವರು ಆ ಸಚಿವರ ಅಡುಗೆ ಮನೆಯಲ್ಲಿರುವವರು. ಅವರಲ್ಲಿ ಪಕ್ಷಕ್ಕೆ ದುಡಿದವರು ಯಾರು ಎಂಬುದು ಗೊತ್ತಿದೆ. ನಾನು ಸಹ ನಾಳೆ 100 ಜನರನ್ನು ಕರೆದುಕೊಂಡು ಹೋಗಬಲ್ಲೆ, ಆ ತಾಕತ್ತು ನನಗಿದೆ’ ಎಂದು ಮಾರುತ್ತರಿಸಿದ್ದಾರೆ. ಅಲ್ಲದೆ, ನಾನು ಉಸ್ತುವಾರಿ ಸಚಿವರ ಕಾರ್ಯವೈಖರಿ ಬದಲಿಸಿಕೊಳ್ಳುವಂತೆ ನೇರವಾಗಿ ಹೇಳಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೇರವಾಗಿ ಹರಿಹಾಯ್ದಿದ್ದಾರೆ.
ಪಿಎಸ್‌ಐ, ಡಿಸಿಸಿಬಿ ಹಗರಣಗಳಲ್ಲಿ ವಿಜಯೇಂದ್ರ, ರಾಘವೇಂದ್ರ ಕೈವಾಡ: ಬೇಳೂರು ಗೋಪಾಲಕೃಷ್ಣ
ಬೇಳೂರು ಹೇಳಿಕೆಗೆ ಪ್ರತಿಕ್ರಿಯಿಸಲ್ಲ:
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಧು ಬಂಗಾರಪ್ಪ, ನಾನು ಯಾವುದೇ ವಿಚಾರವನ್ನೂ ಬಹಿರಂಗವಾಗಿ ಮಾತನಾಡುವುದಿಲ್ಲ. ಇದೆಲ್ಲ ಪಕ್ಷದ ಆಂತರಿಕ ವಿಚಾರ, ಏನೇ ಇದ್ದರೂ ಪಕ್ಷವೇ ನಿರ್ಣಯ ತೆಗೆದುಕೊಳ್ಳುತ್ತದೆ. ಬೇಳೂರು ಹೇಳಿಕೆಗೆ ಎಲ್ಲಿ ಪ್ರತಿಕ್ರಿಯೆ ನೀಡಬೇಕೋ ಅಲ್ಲಿ ನೀಡುತ್ತೇನೆ. ನಾನಾಗಲಿ ಬೇಳೂರು ಆಗಲಿ ಹುಷಾರಾಗಿ ಮಾತನಾಡುವುದು ಒಳ್ಳೆಯದು ಎಂದರು.
ಏನಿದು ವಿವಾದ?:
ಇತ್ತೀಚೆಗೆ ಶಿವಮೊಗ್ಗದ ಕೆಡಿಪಿ ಸಭೆಗೆ ಗೈರಾಗಿದ್ದ ಗೋಪಾಲಕೃಷ್ಣ, ಉಸ್ತುವಾರಿ ಸಚಿವರು ಯಾರೋ ಗೊತ್ತಿಲ್ಲ. ಅವರಿಂದ ನನಗೇನೂ ಆಗಬೇಕಾಗಿಲ್ಲ. ಕೆಡಿಪಿ ಸಭೆಗೆ ನನಗೆ ಆಹ್ವಾನವಿಲ್ಲ, ಹೀಗಾಗಿ ನಾನು ಭಾಗವಹಿಸುತ್ತಿಲ್ಲ. ಬಹುಶಃ ಅವರು ನನ್ನನ್ನು ವಿರೋಧ ಪಕ್ಷದವನು ಎಂದು ಭಾವಿಸಿರಬಹುದು. ಅವರಿಗೆ ಹೆದರಿಕೊಂಡು ಹೋಗಲು ನಾನು ಕುಮಾರ್ ಬಂಗಾರಪ್ಪ ಅಲ್ಲ, ಬೇಳೂರು ಗೋಪಾಲಕೃಷ್ಣ ಎಂದು ಬಹಿರಂಗವಾಗಿ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಬೆಂಬಲಿಗರು ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಿದ್ದರು.