Asianet Suvarna News Asianet Suvarna News

ಸುಧಾಕರ್‌-ರಮೇಶ್‌ ಹಕ್ಕುಚ್ಯುತಿ ಗದ್ದಲಕ್ಕೆ ಕಲಾಪ ಬಲಿ

ರಮೇಶ್‌ಕುಮಾರ್‌ ಕಲಾಪಕ್ಕೆ ಗೈರಾಗಿರುವುದಕ್ಕೆ ಬಿಜೆಪಿ ಸದಸ್ಯರು ಪಲಾಯನವಾದಿ ಎಂದು ಮಾಡಿದ ಟೀಕೆ ಪ್ರತಿಪಕ್ಷದ ಸದಸ್ಯರನ್ನು ಮತ್ತಷ್ಟುಕೆರಳಿಸುವಂತೆ ಮಾಡಿ ಸದನದಲ್ಲಿ ಕೋಲಾಹಲ ಸೃಷ್ಟಿಸಿತು.

Talks Over Sudhakar Ramesh Kumar In Karnataka Assembly
Author
Bengaluru, First Published Mar 12, 2020, 7:39 AM IST

ವಿಧಾನಸಭೆ [ಮಾ.12]:  ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮತ್ತು ಮಾಜಿ ಸಭಾಧ್ಯಕ್ಷ ರಮೇಶ್‌ಕುಮಾರ್‌ ನಡುವೆ ಮಂಗಳವಾರ ನಡೆದ ವೈಯಕ್ತಿಕ ಬೈದಾಟದ ಘಟನೆ ಸಂಬಂಧ ಹಕ್ಕು ಚ್ಯುತಿ ಮಂಡಿಸಲು ತಮಗೆ ಮೊದಲು ಅವಕಾಶ ನೀಡಬೇಕೆಂದು ಆಡಳಿತ ಮತ್ತು ಪ್ರತಿಪಕ್ಷಗಳು ಹಿಡಿದ ಬಿಗಿ ಪಟ್ಟು, ವಾಗ್ವಾದ, ಗದ್ದಲದ ಪರಿಣಾಮ ಬುಧವಾರ ಸದನದಲ್ಲಿ ಯಾವುದೇ ಕಲಾಪ ನಡೆಯದೇ ಇಡೀ ದಿನದ ಕಲಾಪ ಗದ್ದಲಕ್ಕೆ ಬಲಿಯಾಯಿತು.

ರಮೇಶ್‌ಕುಮಾರ್‌ ಕಲಾಪಕ್ಕೆ ಗೈರಾಗಿರುವುದಕ್ಕೆ ಬಿಜೆಪಿ ಸದಸ್ಯರು ಪಲಾಯನವಾದಿ ಎಂದು ಮಾಡಿದ ಟೀಕೆ ಪ್ರತಿಪಕ್ಷದ ಸದಸ್ಯರನ್ನು ಮತ್ತಷ್ಟುಕೆರಳಿಸುವಂತೆ ಮಾಡಿ ಸದನದಲ್ಲಿ ಕೋಲಾಹಲ ಸೃಷ್ಟಿಸಿತು. ಸಭಾಧ್ಯಕ್ಷರು ಉಭಯ ಪಕ್ಷಗಳ ನಾಯಕರನ್ನು ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದರೂ ಫಲಪ್ರದವಾಗಲಿಲ್ಲ. ಎರಡು ಪಕ್ಷಗಳ ಸದಸ್ಯರ ಮಾತಿನ ಸಮರಕ್ಕೆ ನಾಲ್ಕು ಬಾರಿ ಕಲಾಪ ಮುಂದೂಡಲಾಯಿತು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಅವಕಾಶ ನೀಡಿದರೂ ಬಿಜೆಪಿ ಸದಸ್ಯರು ಅದಕ್ಕೆ ಅವಕಾಶ ನೀಡದೆ ಗದ್ದಲವನ್ನುಂಟು ಮಾಡಿದರು. ಡಾ.ಕೆ.ಸುಧಾಕರ್‌ ಅವರಿಗೆ ಮೊದಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಒಂದು ಹಂತಕ್ಕೆ ಪ್ರಶ್ನೋತ್ತರ ಅವಧಿ ಮುಕ್ತಾಯದ ಬಳಿಕ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡಲಾಗುವುದು ಎಂಬ ಸಭಾಧ್ಯಕ್ಷರ ಮಾತಿಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದರು. ಆದರೆ ಬಿಜೆಪಿ ಸದಸ್ಯರು ಮೊದಲು ಹಕ್ಕುಚ್ಯುತಿಗೆ ಮಂಡನೆಗೆ ಅವಕಾಶ ನೀಡಬೇಕು ಎಂದು ಹಟ ಹಿಡಿದರು. ಆಗ ಹಕ್ಕುಚ್ಯುತಿ ಮಂಡನೆ ಸಂಬಂಧ ಪ್ರಸ್ತಾಪಿಸಲು ಸಭಾಧ್ಯಕ್ಷರು ತಮಗೆ ಅವಕಾಶ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರೂ ಆಡಳಿತ ಪಕ್ಷದ ಸದಸ್ಯರು ಅದನ್ನು ಪರಿಗಣಿಸದೇ ವಿರೋಧಿಸಿದರು.ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲದ ವಾತಾವರಣ ನಿರ್ಮಾಣವಾಗಿ ಕಲಾಪ ನಡೆಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾದ ಕಾರಣ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ.

ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಟ್ಟಿಗೆ ನಿಂತು ತಮ್ಮ ವಾದವನ್ನು ಪ್ರಸ್ತಾಪಿಸಲು ಮುಂದಾದರು. ರಮೇಶ್‌ಕುಮಾರ್‌ ಪದ ಬಳಕೆಯು ಅಕ್ಷೇಪಾರ್ಹವಾಗಿದ್ದು, ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಅವರು ಸಹ ನಾವು ಮೊದಲು ಹಕ್ಕುಚ್ಯುತಿ ಮಂಡನೆಗೆ ನೊಟೀಸ್‌ ಅವಕಾಶ ನೀಡಿದ್ದು, ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು ಎರಡು ಕಡೆಯಿಂದ ಹಕ್ಕುಚ್ಯುತಿ ಪ್ರಸ್ತಾಪ ತಮಗೆ ತಲುಪಿದೆ. ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡಲಾಗುವುದು ಎಂದರು. ಸಿದ್ದರಾಮಯ್ಯ ಅದಕ್ಕೆ ಒಪ್ಪಿದರು. ಆದರೆ ಬಿಜೆಪಿ ಸದಸ್ಯರು ಮಾತ್ರ ರಮೇಶ್‌ ಕುಮಾರ್‌ ಅಮಾನತಿಗೆ ಪಟ್ಟು ಹಿಡಿದರಲ್ಲದೇ, ಅವರೊಬ್ಬ ಪಲಾಯಾನವಾದಿ ಎಂದು ಟೀಕಿಸಿದರು. ಇದು ಪ್ರತಿಪಕ್ಷ ಸದಸ್ಯರನ್ನು ಮತ್ತಷ್ಟುಕೆರಳಿಸುವಂತೆ ಮಾಡಿದ್ದು, ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಇದರಿಂದ ಕೋಲಾಹಲ ಉಂಟಾದ್ದರಿಂದ ಕಲಾಪ 10 ನಿಮಿಷವೂ ನಡೆಯದೆ 15 ನಿಮಿಷಗಳ ಕಾಲ ಮುಂದೂಡಲಾಯಿತು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮತ್ತೆ ಸದನ ಆರಂಭಗೊಂಡಾಗ, ಸಿದ್ದರಾಮಯ್ಯ ಮಾತನಾಡಲು ಮುಂದಾದರು. ಆದರೆ, ಸಭಾಧ್ಯಕ್ಷರು ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಇದರಿಂದ ಸಿದ್ದರಾಮಯ್ಯ ತೀವ್ರ ಆಕ್ರೋಶಗೊಂಡು, ಪ್ರತಿಪಕ್ಷ ನಾಯಕನಾದ ನನಗೆ ನೀಡಲು ಮೊದಲು ಮಾತನಾಡಲು ಅವಕಾಶ ನೀಡಬೇಕು ಎಂದು ಹೇಳಿದರು. ಈ ವೇಳೆ ಮತ್ತೆ ಗದ್ದಲ, ಜಟಾಪಟಿ ಉಂಟಾದ ಹಿನ್ನೆಲೆಯಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಲಾಯಿತು. ಮಧ್ಯಾಹ್ನ 3.30ಕ್ಕೆ ಸದನಕ್ಕೆ ಆರಂಭವಾದ ನಂತರ ಸಿದ್ದರಾಮಯ್ಯ ಅವರು ನಾವು ಮೊದಲು ನೊಟೀಸ್‌ ನೀಡಿದ್ದರಿಂದ ನಮಗೆ ಮೊದಲು ಅವಕಾಶ ನೀಡಬೇಕು ಎಂದರು. ಇದಕ್ಕೆ ಸುಧಾಕರ್‌ ಆಕ್ಷೇಪ ವ್ಯಕ್ತಪಡಿಸಿ, ನಾನು ಸಹ ನೊಟೀಸ್‌ ನೀಡಿದ್ದೇನೆ. ನಾನು ಮಾತನಾಡುವ ವೇಳೆ ಆಗಿರುವ ವಿಚಾರ ಇದಾಗಿದೆ. ನನ್ನ ಮಾತು ಮುಗಿದಿಲ್ಲ. ಹೀಗಾಗಿ ನನಗೆ ಮೊದಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಲಿಲ್ಲ. ಸುಧಾಕರ್‌ ಮಾತಿನ ಮೇಲೆಯೇ ಪ್ರಸ್ತಾಪ ಮಾಡಲಾಗಿದೆ. ನನಗೆ ಮೊದಲು ಅವಕಾಶ ನೀಡದಿದ್ದರೆ ಕೆಟ್ಟಸಂಪ್ರದಾಯಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.

ಈ ವೇಳೆ ರಮೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಬೇಕು ಎಂದು ಬಿಜೆಪಿ ಸದಸ್ಯರು ಸಹಿ ಮಾಡಿರುವ ಪತ್ರವನ್ನು ಸಭಾಧ್ಯಕ್ಷರಿಗೆ ತಲುಪಿಸಿದರು. ಇದನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ಮತ್ತೆ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ವಾಗ್ವಾದ ಪ್ರಾರಂಭವಾಯಿತು. ಹೀಗೆ ನಡೆದರೆ ಸದನ ನಡೆಸಲು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷರು ಹೇಳಿದರೂ ಸದಸ್ಯರು ಕೇಳಲಿಲ್ಲ. ಹೀಗಾಗಿ ಮತ್ತೊಮ್ಮೆ ಸದನವನ್ನು 4 ಗಂಟೆಯವರೆಗೆ ಮುಂದೂಡಲಾಯಿತು. ಮತ್ತೆ 4.45ಕ್ಕೆ ಸದನ ಪ್ರಾರಂಭವಾದಾಗ ಸಿದ್ದರಾಮಯ್ಯ ಅವರು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದು, ಪ್ರಜಾಪ್ರಭುತ್ವಕ್ಕೆ ಬೆಂಕಿ ಹಾಕುತ್ತಿದ್ದಾರೆ. ಸಭಾಧ್ಯಕ್ಷರು ಹೇಳಿದರೂ ಅವರ ಮಾತಿಗೆ ಗೌರವ ನೀಡದೆ ಪೀಠಕ್ಕೆ ಅಗೌರವ ತೋರುತ್ತಿದ್ದಾರೆ. ಇದು ನಾಚಿಕೆಗೇಡು ಎಂದರು. ಆಗ ಸಚಿವ ಸುಧಾಕರ್‌, ನಮ್ಮನ್ನು ಅನರ್ಹಗೊಳಿಸಿ ಅನ್ಯಾಯ ಮಾಡಲಾಗಿದೆ. ರಮೇಶ್‌ಕುಮಾರ್‌ ಸದನಕ್ಕೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಮಾತಿನ ಚಕಮಕಿ ತೀವ್ರಗೊಂಡ ಕಾರಣ ಸಭಾಧ್ಯಕ್ಷರು ಹೀಗಾದರೆ ಸದನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.

Follow Us:
Download App:
  • android
  • ios