ವಿಜಯಪುರದಲ್ಲಿ ತಾರಕಕ್ಕೇರಿದ ಕೈ ಶಾಸಕರ ಜಗಳ : ರಾಜಕೀಯ ನಿವೃತ್ತಿ ಸವಾಲ್
* ಕಾಂಗ್ರೆಸ್ ಶಾಸಕರ ನಡುವೆ ತಾರಕಕ್ಕೇರಿದ ಆರೋಪ ಪ್ರತ್ಯಾರೋಪ
* ವಿಜಯಪುರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಸಮರ
* ಎಂಬಿ ಪಾಟೀಲ್‌ಗೆ ರಾಜಕೀಯ ನಿವೃತ್ತಿ ಸವಾಲು ಹಾಕಿದ ಯಶವಂತರಾಯಗೌಡ ಪಾಟೀಲ್
ವಿಜಯಪುರ, (ಆ.26): ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಯಶವಂತರಾಯಗೌಡ ಹಾಗೂ ಎಂ.ಬಿ. ಪಾಟೀಲ್ ನಡುವಿನ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ರಾಜಕೀಯ ನಿವೃತ್ತಿ ಸವಾಲು ಮಟ್ಟಕ್ಕೆ ಹೋಗಿದೆ.
ಪುಣೆಯಲ್ಲಿರುವ ಬಂಥನಾಳ ಶ್ರೀಗಳ ಆಸ್ತಿ ವಿಷಯದಲ್ಲಿ ನನ್ನ ಪಾತ್ರವಿದೆ ಎಂಬ ಶಾಸಕ ಎಂ.ಬಿ.ಪಾಟೀಲ್ ಮಾಡಿರುವ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಸವಾಲು ಹಾಕಿದ್ದಾರೆ.
ಧ್ವಜಾರೋಹಣ ವೇಳೆ ಜಿಗಜಿಣಗಿ ಮುನಿಸು, ನಿರೂಪಕನಿಗೆ ತರಾಟೆ, ಮನವೊಲಿಸಿದ ಶಶಿಕಲಾ ಜೊಲ್ಲೆ
ವಿಜಯಪುರದಲ್ಲಿ ಇಂದು (ಆ.26) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶವಂತರಾಯಗೌಡ ಪಾಟೀಲ್, ಬಂಥನಾಳ ಮಠದ ಭಕ್ತನಾದ ನಾನು ಅಲ್ಲಿ ಒಳ್ಳೆಯ ಸಂಸ್ಕಾರ ಕಲಿತಿದ್ದೇನೆ. ಆ ಮಠಕ್ಕೆ ಒಳ್ಳೆಯದನ್ನು ಬಯಸುವೆ. ನಾನು ಆ ಸಂಸ್ಥೆಯ ಸದಸ್ಯನಲ್ಲ. ವಿನಾಃಕಾರಣ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಎಂಬಿ ಪಾಟೀಲ್ ವಿರುದ್ಧ ಕಿಡಿಕಾರಿದರು.
ಭೀಮಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ. ಮರಳು ಅಕ್ರಮ ಸಾಗಾಟ ತಡೆಯುವಲ್ಲಿ ನನ್ನ ಪಾತ್ರವೇ ಪ್ರಮುಖವಾಗಿದೆ. ಪ್ರತಿ ಸಭೆಯಲ್ಲೂ ಅಕ್ರಮ ನಡೆಯದಂತೆ ತಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವೆ. ಏನಾದರೂ ಇದ್ದರೆ ಸಾಬೀತುಪಡಿಸಲಿ. ಸುಳ್ಳು ಆರೋಪ ಮಾಡುವುದು ನಿಲ್ಲಿಸಿ. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಯಾ ಪೈಸೆ ವ್ಯತ್ಯಾಸವಾಗಿದ್ದರೂ ಆ ಸ್ಥಾನದಲ್ಲಿ ಇರುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಫೋಟೋ ಅಳವಡಿಸಲು ಆದೇಶಿಸಿದಕ್ಕಾಗಿ ವೀರಶೈವ ಲಿಂಗಾಯತ ಮಹಾಸಭಾ ಅಭಿನಂದನೆ ಸಲ್ಲಿಸಿತು. ಆ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಿ ಎಂದು ಯಾರೂ ಮನವಿ ಸಲ್ಲಿಸಿರಲಿಲ್ಲ. ಆದರೆ, ಧರ್ಮ ವಿಭಜನೆ ವಿಷಯದಲ್ಲಿ ಕೈ ಹಾಕಿದ್ದೇ ನೀವು ಎಂದು ಎಂ.ಬಿ.ಪಾಟೀಲರಿಗೆ ತಿರುಗೇಟು ನೀಡಿದರು.