*   ಬಿಜೆಪಿ ಅಧಿಕಾರದ ವಿಕೃತಿಗೆ ವಾರ್ಡ್‌ ವಿಂಗಡಣೆಯೇ ಸಾಕ್ಷಿ*  ಬಿಜೆಪಿಯಿಂದ ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ*  ಸಲ್ಲಿಕೆ ಆಗುವ ಆಕ್ಷೇಪಣೆ ನೋಡಿಕೊಂಡು ಸರಿಪಡಿಸುತ್ತೇವೆ: ಮುಖ್ಯಮಂತ್ರಿ 

ಬೆಂಗಳೂರು(ಜೂ.26): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ ವಿಂಗಡಣೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದು ಕೇವಲ ಬಿಜೆಪಿಯಿಂದ, ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಟ್ವಿಟ್‌ ಮಾಡಿರುವ ಅವರು, ‘ಬೆಂಗಳೂರು ಮಹಾ ನಗರ ಪಾಲಿಕೆ (ಬಿಎಂಪಿ) ಯಾಗಿದ್ದನ್ನು ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆಯನ್ನಾಗಿ ಮಾಡಿದ್ದು ನಾನು. ಇದು ವಿಶ್ವ ನಗರಿಯಾಗಲಿ ಎನ್ನುವ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೆ. ಆದರೆ, ಇಂದು ಐಟಿ ಸಿಟಿಯ ಸ್ಥಿತಿ ನೋಡಿದರೆ ಅಯ್ಯೋ ಎನ್ನುವಂತಿದೆ. ಬಿಜೆಪಿ ಸರ್ಕಾರವು ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ರಾಜಕೀಯ ಸ್ವಾರ್ಥ ಸಾಧನೆಯ ಷಡ್ಯಂತ್ರ ನಡೆಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಹೊಸ ವಾರ್ಡ್‌ಗಳ ಪಟ್ಟಿ ಪ್ರಕಟ: ಆಕ್ಷೇಪ ಆಹ್ವಾನ

ಬಿಜೆಪಿ ಅಧಿಕಾರ ಪಿಪಾಸು. ಅನ್ಯ ಪಕ್ಷ ಅಧಿಕಾರದಲ್ಲಿರುವುದು ಆ ಪಕ್ಷಕ್ಕೆ ಅಪಥ್ಯ. ತನ್ನ ಕೆಟ್ಟಆಡಳಿತಕ್ಕೆ ಬೇಸತ್ತು ಬೆಂಗಳೂರಿಗರು ಬೇರೆ ಪಕ್ಷಕ್ಕೆ ಎಲ್ಲಿ ಮತ ಹಾಕಿಬಿಟ್ಟಾರೋ ಎನ್ನುವ ಭೀತಿಯಿಂದ ಚುನಾವಣೆಯನ್ನೇ ನಡೆಸಲಿಲ್ಲ. ಕೋರ್ಚ್‌ ಚಾಟಿ ಬೀಸಿದ ಮೇಲೆ ಚುನಾವಣೆ ಎನ್ನುತ್ತಿರುವ ಸರ್ಕಾರ, ಈಗ ವಾರ್ಡ್‌ ವಿಂಗಡಣೆಯ ನಾಟಕವಾಡಿದೆ. ಕೋರ್ಚ್‌ ಹೇಳಿದರಷ್ಟೇ ಕೆಲಸ ಎನ್ನುವ ಚಾಳಿ ಬಿಜೆಪಿ ಸರ್ಕಾರದ್ದು. ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿ ನಡೆದ ಈ ನಿರ್ಲಜ್ಜ ಸರ್ಕಾರಕ್ಕೆ ಜನಹಿತಕ್ಕಿಂತ ಪಕ್ಷ ಹಿತವೇ ಸರ್ವಸ್ವ. ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ ಅಧಿಕಾರದ ವಿಕೃತಿ ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಾರ್ಡ್‌ ವಿಂಗಡಣೆಯಲ್ಲಿ ಬೆಂಗಳೂರು ನಗರದ ಸಮಗ್ರತೆ, ಅನನ್ಯತೆಯನ್ನು ಕಡೆಗಣಿಸಲಾಗಿದೆ. ಬೆಂಗಳೂರು ಎಂದರೆ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಮಾತ್ರವಲ್ಲ. ಇದು ಕೇವಲ ಬಿಜೆಪಿಯಿಂದ ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ. ಐತಿಹಾಸಿಕ ವಾರ್ಡ್‌ಗಳ ಹೆಸರುಗಳನ್ನು ಬದಲಿಸಿ ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿನ ಚರಿತ್ರೆಯ ಕುರುಹುಗಳನ್ನು ಅಳಿಸಿ ಹಾಕಿ ಪಠ್ಯಕ್ಕೆ ಅಪಚಾರ ಎಸಗಿದಂತೆ ನಾಡಪ್ರಭುಗಳು ಮತ್ತು ಮೈಸೂರು ಒಡೆಯರ ಘನ ಕೀರ್ತಿಗೆ ಚ್ಯುತಿ ತರುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.

ಬಿಬಿಎಂಪಿ ವಾರ್ಡ್‌ ಸಂಖ್ಯೆ ಹೆಚ್ಚಳಕ್ಕೆ ಅಧಿಸೂಚನೆ

ಮೊನ್ನೆಯಷ್ಟೇ ಪ್ರಧಾನಿ ಬಂದು ಹೋಗಿದ್ದಾರೆ. ಅದಕ್ಕಾಗಿ .23 ಕೋಟಿ ಖರ್ಚು ಮಾಡಿ ನಗರದ ರಸ್ತೆಗುಂಡಿ ಮುಚ್ಚಲಾಗಿದೆ. ಇದನ್ನು ಗಮನಿಸಿದರೆ ಪ್ರಧಾನಿ ನಗರದ ಬೇರೆ ಬೇರೆ ಮಾರ್ಗಗಳಲ್ಲಿ ಆಗಾಗ್ಗೆ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಸಲುವಾಗಿಯಾದರೂ ಅಧಿಕಾರಿಗಳು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬಹುದು ಎಂದು ನ್ಯಾಯಾಲಯ ಚಾಟಿ ಬೀಸಿದೆ. ಇನ್ನು, ಪ್ರಧಾನಿಗಳಿಗಾಗಿ ಸಿದ್ದಪಡಿಸಿದ ರಸ್ತೆಯೇ ಕುಸಿದು ಬಿದ್ದಿದೆ. ಶೇ.40ರಷ್ಟುಕಮಿಷನ್‌ ಕಳಪೆ ಕಾಮಗಾರಿಯ ಫಲಶೃತಿ ಇದು. ದೇಶದ ಪ್ರಧಾನಿಯೇ ಸಂಚರಿಸಿದ ರಸ್ತೆಯೇ ಕಳಪೆ! ಬಿಜೆಪಿ ಅಭಿವೃದ್ಧಿ ಮಾದರಿ ಎಂದರೆ ಇದೇನಾ? ಎಂದು ಪ್ರಶ್ನಿಸಿದ್ದಾರೆ.

ಎಚ್‌ಡಿಕೆ ಹೇಳಿಕೆ ರಾಜಕೀಯ ಆರೋಪ ಅಷ್ಟೇ: ಬೊಮ್ಮಾಯಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ ಮರುವಿಂಗಡಣೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯು ರಾಜಕೀಯ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಸುವರ್ಣ ಮಹೋತ್ಸವ ಸಮಾರಂಭದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಕ್ಷೇಪಣೆ ಸಲ್ಲಿಸಲು 15 ದಿನ ಅವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ನೋಡಿಕೊಂಡು ಏನು ಸರಿಪಡಿಸಬೇಕೋ, ಅದನ್ನು ಮಾಡುತ್ತೇವೆ. ಪ್ರತಿಪಕ್ಷದವರು ಕೇವಲ ರಾಜಕೀಯ ಆರೋಪಗಳನ್ನು ಮಾಡುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದರು.

ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ: ಸಂಸದ ಮೋಹನ್‌

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಹಿಂದೆ 198 ಇದ್ದ ವಾರ್ಡ್‌ 243 ವಾರ್ಡ್‌ ಆಗುತ್ತಿದೆ. 2011ರ ಜನಸಂಖ್ಯೆ ಆಧಾರದ ಮೇಲೆ ವಾರ್ಡ್‌ ವಿಂಗಡಣೆಯಾಗಿದೆ. ವ್ಯವಸ್ಥಿತವಾಗಿ ವಾರ್ಡ್‌ ವಿಂಗಡಣೆಯಾಗಿದೆ. ಚುನಾವಣೆ ನಡೆದರೆ 243 ವಾರ್ಡ್‌ ಪೈಕಿ 150ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲ್ಲುತ್ತದೆ. ಯಾವ ವಾರ್ಡ್‌ಗೆ ಹೆಚ್ಚು ಸ್ಥಳ ಇರುತ್ತದೆಯೋ ಅದರ ಹೆಸರಿಡಲಾಗುತ್ತದೆ. ವಾರ್ಡ್‌ಗಳ ಹೆಸರು ಬದಲಾವಣೆಗೆ ಆಕ್ಷೇಪಣೆ ಇದ್ದರೆ ಸರಿಪಡಿಸಲಾಗುತ್ತದೆ. ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತದೆ. ಕೆಲವು ಸಣ್ಣಪುಟ್ಟಸಮಸ್ಯೆಗಳಿವೆ. ಆಕ್ಷೇಪಣೆ ಸಲ್ಲಿಕೆ ವೇಳೆ ಅವುಗಳ ಬಗ್ಗೆ ಸಲ್ಲಿಕೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ವಾರ್ಡ್‌ಗಳ ವಿಂಗಡಣೆ ವೈಜ್ಞಾನಿಕವಾಗಿದೆ: 

ಸಚಿವ ಇದೇ ವೇಳೆ ಉನ್ನತ ಶಿಕ್ಷಣ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಮಾತನಾಡಿ, ಬಿಬಿಎಂಪಿ ವಾರ್ಡ್‌ ವಿಂಗಡಣೆ ವೈಜ್ಞಾನಿಕವಾಗಿ ನಡೆದಿದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಅಗತ್ಯ ಇಲ್ಲ. ಕಾಂಗ್ರೆಸ್‌ ಇರುವ ಕಡೆ ವಾರ್ಡ್‌ ಕಡಿಮೆ ಮಾಡಲಾಗಿದೆ. ಬಿಜೆಪಿ ಇರುವ ಕಡೆ ವಾರ್ಡ್‌ ಹೆಚ್ಚು ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ, ಆಕ್ಷೇಪಣೆ ಸಲ್ಲಿಸಬಹುದು. 15 ದಿನದಲ್ಲಿ ಆಕ್ಷೇಪಣೆ ಕೊಡಬಹುದು. ಕಾನೂನು ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಏನೇ ಇದ್ದರೂ ಕಾನೂನಾತ್ಮಕವಾಗಿ ಸರಿಪಡಿಸಬಹುದು ಎಂದು ತಿಳಿಸಿದರು.

ವಾರ್ಡ್‌ ವಿಂಗಡಣೆ ವೇಳೆ ಬಿಬಿಎಂಪಿ ಎಡವಟ್ಟು, ತೀವ್ರ ಆಕ್ಷೇಪ

ಬೆಂಗಳೂರು: ಬೈರಸಂದ್ರ ವಾರ್ಡ್‌ಗೆ ಸೇರಿದ ಎಲ್‌ಐಸಿ ಕಾಲೋನಿಯ 80 ಅಡಿಯಷ್ಟುಭಾಗವನ್ನು 2 ಕಿ.ಮೀ. ದೂರದಲ್ಲಿರುವ ತಿಲಕ್‌ ನಗರ ವಾರ್ಡ್‌ಗೆ ಸೇರಿಸಿ ವಾರ್ಡ್‌ ಮರು ವಿಂಗಡಣೆ ಮಾಡಿರುವುದಕ್ಕೆ ಕಾಲೋನಿಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ವಾರ್ಡ್‌ ಸಂಖ್ಯೆ 250ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಜಂಟಿ ಸಮಿತಿ ಶಿಫಾರಸು

ಬಿಬಿಎಂಪಿಯ ವಾರ್ಡ್‌ ಮರು ವಿಂಗಡಣೆ ಕರಡು ವರದಿಯನ್ನು ಕಳೆದ ಗುರುವಾರ ಪ್ರಕಟಿಸಿದ್ದು, 15 ದಿನದಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಕೆ ಮಾಡುವಂತೆ ಕೋರಲಾಗಿದೆ. ಈಗಾಗಲೇ ಹಲವು ವಾರ್ಡ್‌ ಹೆಸರು ಬದಲಾವಣೆ ಮಾಡಿರುವುದು ಹಾಗೂ ಹೊಸ ಹೆಸರು ನಾಮಕರಣ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟುಆಕ್ಷೇಪ ವ್ಯಕ್ತವಾಗುತ್ತಿದೆ. ಈ ಬಗ್ಗೆ ಈ ಹಿಂದೆ ಬೈರಸಂದ್ರ ವಾರ್ಡ್‌ಗೆ ಸೇರಿದ ಎಲ್‌ಐಸಿ ಕಾಲೋನಿಯನ್ನು ಎರಡು ವಾರ್ಡ್‌ಗೆ ಹಂಚಿಕೆ ಮಾಡಲಾಗಿದೆ. ಅದರಲ್ಲೂ ಕಾಲೋನಿಯ ಕೇವಲ ಅಡಿಯಷ್ಟುಭಾಗವನ್ನು 2 ಕಿ.ಮೀ ದೂರ ಇರುವ ತಿಲಕ್‌ ನಗರ ವಾರ್ಡ್‌ಗೆ ಸೇರಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಜತೆಗೆ, ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಮಾಡುವ ಮುನ್ನ ಸಾರ್ವಜನಿಕರು, ಸಂಘ-ಸಂಸ್ಥೆಗಳ ಅಭಿಪ್ರಾಯ ಪಡೆಯದೇ ಎಸಿ ಕಚೇರಿಯಲ್ಲಿ ಕುಳಿತ ಅಧಿಕಾರಿಗಳು ಅವೈಜ್ಞಾನಿಕವಾಗಿ ವಾರ್ಡ್‌ ಮರು ವಿಂಗಡಣೆ ಮಾಡಿದ್ದಾರೆ. ಬೈರಸಂದ್ರ ವಾರ್ಡ್‌ ಸಂಖ್ಯೆಯೂ ಬದಲಾಗಿದೆ. ಈ ಬಗ್ಗೆ ಎಲ್‌ಐಸಿ ಕಾಲೋನಿಯ ಅಸೋಸಿಯೇಷನ್‌ ಮೂಲಕ ಆಕ್ಷೇಪಣೆ ಸಲ್ಲಿಸುವುದಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.