*  ಮೋದಿಯಿಂದ ಸಬ್‌ ವಿಕಾಸ್‌ ಅಲ್ಲ, ಸಬ್‌ಕಾ ಸರ್ವನಾಶ್‌: ವಿಪಕ್ಷ ನಾಯಕ*  ದೇಶ ಸರ್ವನಾಶ ಮಾಡಿದ್ದೇ ನೀವು: ಬೊಮ್ಮಾಯಿ ತಿರುಗೇಟು*  ಉಭಯ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ  

ಬೆಂಗಳೂರು(ಮಾ.09): ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಎಂದು ಹೇಳುತ್ತಾ ‘ಸಬ್‌ ಕಾ ಸರ್ವನಾಶ್‌’ ಮಾಡುತ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಯು ಸದನದಲ್ಲಿ ಆಡಳಿತಾರೂಢ ಬಿಜೆಪಿ(BJP) ಮತ್ತು ಪ್ರತಿಪಕ್ಷ ಕಾಂಗ್ರೆಸ್‌(Congress) ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.

ಮಂಗಳವಾರ ಬಜೆಟ್‌(Budget) ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ(Siddaramaiah), ‘ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮಾರ್ಗದರ್ಶನದಲ್ಲಿ ನಾವು ರಾಜ್ಯವನ್ನು ಸುಭಿಕ್ಷಗೊಳಿಸುತ್ತೇವೆ ಎಂದು ಹೇಳಲಾಗಿದೆ. ಆದರೆ, ನಿಜಕ್ಕೂ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌ ಆಗಿದೆಯಾ? ಹಾಗೆ ಹೇಳುತ್ತಾ ಸಬ್‌ ಕಾ ಸರ್ವನಾಶ್‌ ಎಂದು ದೇಶವನ್ನು ಸರ್ವನಾಶ ಮಾಡಿದ್ದಾರೆ’ ಎಂದು ಟೀಕಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಪೇಕ್ಷ ವ್ಯಕ್ತಪಡಿಸಿದರು.

ಬೊಮ್ಮಾಯಿ ಮಂಡಿಸಿದ್ದು ಸಾಲದ ಬಜೆಟ್‌: ಇದು ಡಬಲ್‌ ಎಂಜಿನ್‌ ಸರ್ಕಾರವಲ್ಲ, ಡಬ್ಬಾ ಸರ್ಕಾರ: ಸಿದ್ದು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು, ‘ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಗರೀಬಿ ಹಠಾವೋ ಕಾರ್ಯಕ್ರಮ ರೂಪಿಸಲಾಯಿತು. ಆದರೆ ಕಹಾ ಗಯಾ ಗರೀಬ್‌? (ಬಡವರು ಎಲ್ಲಿ ಹೋದರು?) ಬಡತನ ರೇಖೆಗಿಂತ ಕೆಳಗೆ ಇರುವವರ ಏಳ್ಗೆಗೆ ಈಗಲೂ ಯೋಜನೆ ರೂಪಿಸಲಾಗುತ್ತಿದೆ. ದೇಶ ಸರ್ವನಾಶ ಮಾಡಿದ್ದೇ ನೀವು. ಮೋದಿ ಬಗ್ಗೆ ಮಾತಾಡುವ ನೈತಿಕ ಹಕ್ಕು ನಿಮಗಿಲ್ಲ’ ಎಂದು ಕಾಂಗ್ರೆಸ್‌ ಯೋಜನೆಗಳನ್ನು ಟೀಕಿಸಿದರು.

ತೀವ್ರ ವಾಕ್ಸಮರ:

ಆಗ ಕಾಂಗ್ರೆಸ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಉಭಯ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಕಾಂಗ್ರೆಸ್ಸಿಗರು ಕೇಂದ್ರದ ಬಿಜೆಪಿ ಸರ್ಕಾರ, ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಬಿಜೆಪಿ ಸದಸ್ಯರು, ಕಾಂಗ್ರೆಸ್‌ ಅಡಳಿತಾವಧಿಯಲ್ಲಿನ ಹಗರಣ, ಆಡಳಿತ ವೈಫಲ್ಯಗಳನ್ನು ಹೇಳಿ ಕಿಡಿಕಾರಿದರು. ಪರಿಣಾಮ ಸದನವು ಗದ್ದಲದ ಗೂಡಾಯಿತು. ಯಾವ ಸದಸ್ಯರು ಏನು ಮಾತನಾಡುತ್ತಿದ್ದಾರೆ ಎಂಬುದು ತಿಳಿಯಲಿಲ್ಲ. ಸದನವನ್ನು ಹತೋಟಿಗೆ ತರಲು ಉಪಸಭಾಧ್ಯಕ್ಷ ಆನಂದ್‌ ಮಾಮನಿ ಅವರು ಹರಸಾಹಸ ಪಡಬೇಕಾಯಿತು.

ತಮ್ಮ ಮಾತು ಮುಂದುವರೆಸಿದ ಬೊಮ್ಮಾಯಿ, ‘ಈ ದೇಶವನ್ನು ವಿನಾಶ ಮಾಡಿದ್ದು ಕಾಂಗ್ರೆಸ್‌. ಭಾರತವನ್ನು(India) ವಿದೇಶಗಳ ಮುಂದೆ ಭಿಕ್ಷೆ ಬೇಡುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ’ ಎಂದು ಕಿಡಿಕಾರಿದರು.

HD Kumaraswamy: ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ಸಾಧ್ಯತೆ

ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಪ್ರಧಾನಿಗಳ ಮಾತುಗಳು ಕೇವಲ ಘೋಷಣೆ ಮಾತ್ರ. ಮಾಜಿ ಪ್ರಧಾನಿ ವಾಜಪೇಯಿ ಇದ್ದಾಗ ದೇಶ ಪ್ರಕಾಶಿಸುತ್ತಿದೆ ಎಂದಿದ್ದರು. ಆದರೆ, ದೇಶ ಪ್ರಕಾಶಿಸಲೇ ಇಲ್ಲ’ ಎಂದು ಹೇಳಿದರು. ಇದಕ್ಕೆ ಎದಿರೇಟು ನೀಡಿದ ಮುಖ್ಯಮಂತ್ರಿಗಳು, ‘ವಾಜಪೇಯಿ ಅವರ ಕಾಲದಲ್ಲಿ ಸುವರ್ಣ ಚತುಷ್ಪಥ ಆಗಿದ್ದರಿಂದಲೇ ನೀವು ಸುಖವಾಗಿ ರಸ್ತೆಯಲ್ಲಿ ಓಡಾಡುವಂತಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ ಅಣೆಕಟ್ಟುಗಳನ್ನು(Dam) ನಿರ್ಮಿಸಿದ್ದು ಕಾಂಗ್ರೆಸ್‌’ ಎಂದು ಆ ಪಕ್ಷದ ಸದಸ್ಯರು ಪ್ರತಿಪಾದಿಸಿದರೆ, ‘ಹೌದು ಒಂದು ಅಣೆಕಟ್ಟು ಕಟ್ಟಲು 50 ವರ್ಷ ಬೇಕಾಯಿತು’ ಎಂದು ಬಿಜೆಪಿ ಸದಸ್ಯರು ಕಿಚಾಯಿಸಿದರು. ‘ಬಿಜೆಪಿ ದೇಶದ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ’ ಎಂದು ಕಾಂಗ್ರೆಸ್‌ ಟೀಕಿಸಿದರೆ, ‘ಜಾಗತೀಕರಣ ಹಾಗೂ ಉದಾರೀಕರಣ ಮೂಲಕ ಅದಕ್ಕೆ ನಾಂದಿ ಹಾಡಿದ್ದೇ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌’(Manmohan Singh) ಎಂದು ಬಿಜೆಪಿ ಸದಸ್ಯರು ಹರಿಹಾಯ್ದರು. ಉಭಯ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ಹೆಚ್ಚಾದಾಗ ಉಪಸಭಾಧ್ಯಕ್ಷರು ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.