ಸಿದ್ದರಾಮಯ್ಯ ಇಳಿಸುವ ಸಂಚು ಮಾಡಿರದಿದ್ದರೆ ಪ್ರಮಾಣ ಮಾಡಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ವಾಲ್ಮೀಕಿ ನಿಗಮ ಮತ್ತು ಎಂಡಿಎ ನಲ್ಲಿ ನಡೆದಿರುವ ಅವ್ಯವಹಾರದಲ್ಲಿ ಮುಖ್ಯಮಂತ್ರಿಗಳನ್ನು ಸಿಲುಕಿಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಏಜೆಂಟರನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಮೈಸೂರು (ಆ.02): ವಾಲ್ಮೀಕಿ ನಿಗಮ ಮತ್ತು ಎಂಡಿಎ ನಲ್ಲಿ ನಡೆದಿರುವ ಅವ್ಯವಹಾರದಲ್ಲಿ ಮುಖ್ಯಮಂತ್ರಿಗಳನ್ನು ಸಿಲುಕಿಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಏಜೆಂಟರನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಸಂಚು ನಡೆಸಿರುವುದು ಸುಳ್ಳಾದರೆ ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು. ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಡಿಎ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಡಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ, ಶಾಸಕ ಅಶ್ವತ್ಥ್ ನಾರಾಯಣ ಸಂಚು ರೂಪಿಸಿದ್ದಾರೆ. ಇಲ್ಲವಾದರೆ ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಲಿ ಎಂದರು.
ರಾಜ್ಯಪಾಲರು ಯಾವುದೇ ಪಕ್ಷದ ಏಜೆಂಟ್ ಅಲ್ಲ. ಅವರು ಬಿಜೆಪಿ ಪರವಾಗಿ ಕೆಲಸ ಮಾಡಿದರೆ ಪ್ರತಿಭಟಿಸಬೇಕಾಗುತ್ತದೆ. ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಎಂಡಿಎ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸುತ್ತಾರೆ. ರಾಜ್ಯಪಾಲರು ಕೂಡಲೇ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮಾಹಿತಿ ಕೇಳುತ್ತಾರೆ. ರಾಜ್ಯಪಾಲರು ಬಿಜೆಪಿ- ಜೆಡಿಎಸ್ನಾಯಕರ ಅಭಿಪ್ರಾಯದಂತೆ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು. ಸಿದ್ದರಾಮಯ್ಯ ಅವರ ಕುಟುಂಬದವರು ಖಾಸಗಿ ಜಮೀನು ಖರೀದಿಸಿದರೆ ಸರ್ಕಾರಕ್ಕೆ ಯಾವ ರೀತಿ ನಷ್ಟವಾಗುತ್ತದೆ?
14 ನಿವೇಶನ ಪಡೆಯಲು ಸಿದ್ದರಾಮಯ್ಯ ಪ್ರಭಾವ ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ ಮಾತ್ರಕ್ಕೆ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಬಹುದೇ? ಅಬ್ರಹಾಂ ಕೊಟ್ಟ ದೂರೇ ಅಂತಿಮವೇ? ಎಂದು ಅವರು ಪ್ರಶ್ನಿಸಿದರು. ಟಿ.ಜೆ. ಅಬ್ರಹಾಂ ಸಲ್ಲಿಸಿರುವ 20 ಪುಟಗಳ ದೂರನ್ನು ಓದಿದರೆ ರಾಜಭವನದಲ್ಲಿ ಬಿಜೆಪಿ ನಾಯಕರು ಕುಳಿತು ಸಿದ್ಧಪಡಿಸಿರುವಂತಿದೆ. ರಾಜ್ಯಪಾಲರು ರಾಜಭವನವನ್ನು ಬಿಜೆಪಿ ಕಚೇರಿ ಮಾಡಬೇಡಿ. ಇದರ ವಿರುದ್ಧ ಜನರ ಮಧ್ಯೆ ಹೋಗುತ್ತೇವೆ. ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೇ ಅತೀ ಹಿಂದುಳಿದ ವರ್ಗದ ಮುಖ್ಯಮಂತ್ರಿಗೆ ತೊಂದರೆ ಕೊಡಲು, ದಲಿತ ಅಲ್ಪಸಂಖ್ಯಾತರಿಗೆ ಅವಮಾನ ಮಾಡಲು ಬಿಜೆಪಿ, ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಉಂಟಾಗುವ ಅಶಾಂತಿಗೆ ಬಿಜೆಪಿ, ಜೆಡಿಎಸ್ ನಾಯಕರು ಕಾರಣರಾಗುತ್ತಾರೆ ಎಂದು ಅವರು ಎಚ್ಚರಿಸಿದರು. ಪಾದಯಾತ್ರೆಯಿಂದ ಹಿಂದೆ ಸರಿದಿರುವುದಾಗಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕ್ಷುಲಕ. ಆದರೆ ಆಂತರಿಕವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಸುವ ಪ್ರಯತ್ನದಲ್ಲಿದ್ದಾರೆ ಎಂದು ಲಕ್ಷ್ಮಣ್ ದೂರಿದರು.
ರಾಜ್ಯಪಾಲರ ಕಚೇರಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಕೇಂದ್ರ ಸರ್ಕಾರ: ಸಚಿವ ದಿನೇಶ್ ಗುಂಡೂರಾವ್
ಜಿಲ್ಲಾ ಕಾಂಗ್ರೆಸ್ಅಧ್ಯಕ್ಷ ಡಾ. ಬಿ.ಜೆ. ವಿಜಯ್ಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದರೆ ಕ್ರಾಂತಿ ಆಗುತ್ತದೆ. ಬಿಜೆಪಿಯ ಪ್ರತಿ ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ. ಹೈಕಮಾಂಡ್ ನಿಂದ ಸೂಚನೆ ಬಂದ ತಕ್ಷಣ ಬೀದಿಗಿಳಿಯುತ್ತೇವೆ ಎಂದರು. ಆ. 3ರಂದು ಬಿಜೆಪಿ ಪಾದಯಾತ್ರೆ ಮಾಡುವುದಿಲ್ಲ ಎಂಬ ಮಾಹಿತಿ ಬಂದಿದೆ. ರಾಜ್ಯದಲ್ಲಿ ಎಲ್ಲಿಯೇ ಬಿಜೆಪಿ ರ್ಯಾಲಿ, ಪಾದಯಾತ್ರೆ ಮಾಡಿದರೆ ಪ್ರತಿಯಾಗಿ ಹೋರಾಟಕ್ಕೆ ನಾವೂ ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದರು. ನಗರ ಕಾಂಗ್ರೆಸ್ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಎಂ. ರಾಮು, ಎಚ್.ವಿ. ರಾಜೀವ್, ಭಾಸ್ಕರ್, ಶಿವಪ್ರಸಾದ್, ಸಂತೋಷ್, ಶಿವಣ್ಣ, ಗಿರೀಶ್, ಕೆ. ಮಹೇಶ್, ತಿಮ್ಮಯ್ಯ, ಶಾಂತರಾಜು ಇದ್ದರು.