ನವದೆಹಲಿ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಪುತ್ರ ಪಾರ್ಥ ಪವಾರ್‌ ಮೇಲೆ ಎಲ್ಲರ ಗಮನವಿದೆ. ತಂದೆ ಉಪ ಮುಖ್ಯಮಂತ್ರಿ ಇದ್ದರೂ ಸುಶಾಂತ್‌ಗೆ ನ್ಯಾಯ ಸಿಗಬೇಕು, ಸಿಬಿಐಗೆ ಕೊಡಬೇಕು ಎಂದು ಪಾರ್ಥ ಹೇಳಿದ ನಂತರ ಶರದ್‌ ಪವಾರ್‌ ‘ಆತ ಬಿಡಿ ಅಪ್ರಬುದ್ಧ’ ಎಂದು ಹೇಳಿದ್ದರು. ಆದರೆ ಇದಾದ ಮೇಲೆ ಮರಳಿ ಪಾರ್ಥ ‘ಸತ್ಯಮೇವ ಜಯತೇ’ ಎಂದು ಟ್ವೀಟ್‌ ಮಾಡಿದ್ದಾರೆ.

ಪವಾರ್‌ ಸೀನಿಯರ್‌ ಮತ್ತು ಅಜಿತ್‌ ಪವಾರ್‌ ನಡುವೆ ಗುದ್ದಾಟ ಗೊತ್ತಿರುವುದೇ. ಆದರೆ ಈಗ ಪಾರ್ಥನ ಹೇಳಿಕೆ ಗಮನಿಸಿದರೆ, ಎಲ್ಲಿ ಮತ್ತೆ ತೆರೆಮರೆಯಲ್ಲಿ ಅಜಿತ್‌ ದಾದಾ ಮತ್ತು ಬಿಜೆಪಿ ನಡುವೆ ಮಾತುಕತೆ ನಡೆಯುತ್ತಿವೆಯೇ, ನೀರನ್ನು ಪರೀಕ್ಷೆ ಮಾಡಲು ಅಜಿತ್‌ ದಾದಾ ಮಗನಿಂದ ಹೇಳಿಕೆ ಕೊಡಿಸುತ್ತಿದ್ದಾರೆಯೇ ಎಂದೆಲ್ಲ ಮುಂಬೈನಲ್ಲಿ ಚರ್ಚೆ ನಡೆಯುತ್ತಿವೆ.

ಸುಶಾಂತ್ ಸಿಂಗ್ ಸಾವು: ತೀರ್ಪಿನ ಪರಿಣಾಮಗಳೇನು?

ಪೊಲೀಸ್‌ ಪಾಂಡೆಯ ವಿಡಿಯೋಗಳು

ಸುಶಾಂತ್‌ ಪ್ರಕರಣದಲ್ಲಿ ಕುಟುಂಬ ಮತ್ತು ರಿಯಾ ಬಿಟ್ಟರೆ ಅತಿ ಹೆಚ್ಚು ಸುದ್ದಿ ಆದವರು ಬಿಹಾರದ ಪೊಲೀಸ್‌ ಮಹಾನಿರ್ದೇಶಕ ಗುಪ್ತೇಶ್ವರ ಪಾಂಡೆ. ದಿನಂಪ್ರತಿ ಹೊಸ ವಿಡಿಯೋ ಸೋಷಿಯಲ್‌ ಮೀಡಿಯಾಗೆ ತಪ್ಪದೇ ಹಾಕುವ ಪಾಂಡೆಗೆ 7 ಲಕ್ಷ ಫಾಲೋವರ್‌ಗಳಿದ್ದಾರೆ. 2009ರಲ್ಲಿ ಪೊಲೀಸ್‌ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಬಕ್ಸರ್‌ಗೆ ಟಿಕೆಟ್‌ ಕೇಳಿದ್ದ ಪಾಂಡೆ 9 ತಿಂಗಳ ನಂತರ ವಾಪಸ್‌ ಬಂದಿದ್ದರು. ಈಗಲೂ ಪಾಂಡೆ ಆಡುವ ಮಾತು ಕೇಳಿದರೆ ಯಾವುದೋ ರಾಜಕಾರಣಿ ಹಾಗೇ ಇರುತ್ತದೆ. ಅಂದಹಾಗೆ, ಪಾಂಡೆ, ನಿತೀಶ್‌ ಕುಮಾರ್‌ ಮತ್ತು ಬಿಜೆಪಿ ನಾಯಕತ್ವಕ್ಕೆ ಆತ್ಮೀಯರು.

ಸಿನೆಮಾ ಸೂಸೈಡ್‌ ಮತ್ತು ಪಾಲಿಟಿಕ್ಸ್‌

ತಾರೆಯರಲ್ಲಿ ಸಾಮಾನ್ಯ ಜನ ತಮ್ಮ ಬದುಕಿನ ಪ್ರತಿಬಿಂಬ ನೋಡುತ್ತಾರೆ. ಹೀಗಾಗಿಯೇ ಏನೋ ತಾರೆಯರ ಬದುಕಿನಲ್ಲಿ ಅವಘಡ ಘಟಿಸಿದರೆ ಸಾಮಾನ್ಯ ಜನ ಹೆಚ್ಚು ಆತಂಕಕ್ಕೆ ಒಳಗಾಗಿ ಸಾವಿನ ನಾನಾ ಮುಖಗಳ ತನಿಖೆ ನಡೆಸತೊಡಗುತ್ತಾರೆ. ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸಕಾಲಕ್ಕೆ ತಾರ್ಕಿಕ ಅಂತ್ಯ ನೀಡದೆ ಹೋದರೆ ಇವೆಲ್ಲ ಸಾಮಾನ್ಯ. 1979ರಲ್ಲಿ ಸಂಕೇಶ್ವರದ ಬಳಿಯ ಗೋಟೂರು ಪ್ರವಾಸಿ ಮಂದಿರದಲ್ಲಿ ಮಿನುಗು ತಾರೆ ಕಲ್ಪನಾ ಅಸಹಜ ಸಾವು ಇಂಥದ್ದೇ ಸಂಚಲನ ಎಬ್ಬಿಸಿತ್ತು.

ನಾಟಕದ ವೇದಿಕೆಯಲ್ಲಿ ಕಲ್ಪನಾ ಮತ್ತು ಗುಡಗೇರಿ ಬಸವರಾಜ್‌ ಹೊಡೆದಾಡಿಕೊಂಡ ನಂತರ ರಾತ್ರಿ ನಡೆದ ಕಲ್ಪನಾ ಅಸಹಜ ಸಾವಿನ ತನಿಖೆಗೆ ದೇವರಾಜ್‌ ಅರಸ್‌ ಸರ್ಕಾರ ಸಿಒಡಿಯನ್ನು ನೇಮಿಸಿತ್ತು. ಇವತ್ತಿಗೂ ಕಲ್ಪನಾ ಅಸಹಜ ಸಾವಿನ ಬಗ್ಗೆ ಜನರಿಗೆ ಸಂಶಯವಿದೆ. ಇವತ್ತು ಸಂಶಯದ ಮುಳ್ಳಿನ ಬಗ್ಗೆ ಬೊಟ್ಟು ಮಾಡಲು ಸೋಷಿಯಲ್‌ ಮೀಡಿಯಾ ಇದೆ, ಆಗ ಇವೆಲ್ಲ ಇರಲಿಲ್ಲ. ಅಷ್ಟೇ ವ್ಯತ್ಯಾಸ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ