ಕೋಟ್ಯಂತರ ಜನ ಇಷ್ಟಪಡುವ ಒಬ್ಬ ವ್ಯಕ್ತಿಯ ಅಸಹಜ ಸಾವು ಸಂದೇಹ ಹುಟ್ಟು ಹಾಕುವುದು ಸ್ವಾಭಾವಿಕ. ಮರ್ಲಿನ್‌ ಮನ್ರೋರಿಂದ ಹಿಡಿದು ಡಯಾನಾವರೆಗಿನ ಸಾವು ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಈಗ ಸುಶಾಂತ್‌ ಸಿಂಗ್‌ ರಾಜಪೂತ್‌ ಅಸಹಜ ಸಾವಿನ ನಂತರ ಮುಂಬೈ ಚಿತ್ರರಂಗದಲ್ಲಿ ವಂಶವಾಹಿಗೆ ಮಣೆ ಹಾಕುವುದರಿಂದ ಶುರುವಾದ ಚರ್ಚೆ, ಸಾವಿನ ಹಿಂದೆ ಆದಿತ್ಯ ಠಾಕ್ರೆ ಇದ್ದಾರೆ ಎನ್ನುವವರಿಗೆ ಬಂದು ತಲುಪಿ, ತನಿಖೆ ಸಿಬಿಐಗೆ ಸುಪರ್ದಿಗೆ ಹೋಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ರಾಜ್ಯದಲ್ಲಿ ನಡೆದ ಘಟನೆಗೆ ಇನ್ನೊಂದು ರಾಜ್ಯದ ಪೊಲೀಸರು ದಾಖಲಿಸಿದ ದೂರನ್ನು ಪರಿಗಣಿಸಿ ಕೇಂದ್ರೀಯ ತನಿಖಾ ದಳ ತನಿಖೆ ನಡೆಸಲಿದೆ. ಸುಶಾಂತ್‌ ಸಿಂಗ್‌ ಸಾವಿನ ತನಿಖೆ ಒಂದು ಬದಿ ಆದರೆ, ಈ ತನಿಖೆಯ ಕಾನೂನು ಮತ್ತು ರಾಜಕೀಯ ಪರಿಣಾಮಗಳು ಇನ್ನೊಂದು ಬದಿ. ಸೋಷಿಯಲ್‌ ಮೀಡಿಯಾದಲ್ಲಿ ಜನಸಾಮಾನ್ಯರ ಒತ್ತಡದ ಕಾರಣದಿಂದ ಕೂಡ ಸುಶಾಂತ್‌ ಪ್ರಕರಣದ ತನಿಖೆ ಪುನಃ ನಡೆಯಲಿದೆ ಎನ್ನುವುದು ಕೂಡ ಐತಿಹಾಸಿಕ ಬೆಳವಣಿಗೆ. ಸುಶಾಂತ್‌ ಪ್ರಕರಣ ಮತ್ತೊಮ್ಮೆ ತಥ್ಯ ಮತ್ತು ನ್ಯಾಯದ ಚರ್ಚೆಗೆ ಹೊಸ ರೂಪ ನೀಡಿದೆ. ಸುಪ್ರೀಂಕೋರ್ಟ್‌ ಈಗ ಹೇಳಿರುವಂತೆ ‘ಜನಮಾನಸದಲ್ಲಿ ನ್ಯಾಯದಾನ ನಡೆದಿದೆ’ ಎಂಬ ಅಭಿಪ್ರಾಯ ಸ್ಥಾಪನೆ ಪ್ರಜಾಪ್ರಭುತ್ವದಲ್ಲಿ ಮುಖ್ಯ ವಿಚಾರ.

ನಟ ಸುಶಾಂತ್‌ಗಾಗಿ ಮಾಡಿದ ಸಾಮೂಹಿತ ಪ್ರಾರ್ಥನೆಯಲ್ಲಿ 101 ದೇಶದ ಜನ ಭಾಗಿ

ತೀರ್ಪಿನ ಪರಿಣಾಮಗಳು ಏನು?

ಸುಶಾಂತ್‌ ಸಾವಿನ ನಂತರ ಮರಣೋತ್ತರ ವರದಿ, ವಿಧಿವಿಜ್ಞಾನ ವರದಿ, ಒಳ ಅಂಗಗಳ ವರದಿ ಮತ್ತು 58 ಮಂದಿಯ ಹೇಳಿಕೆಗಳ ಆಧಾರದ ಮೇಲೆ ಮುಂಬೈ ಪೊಲೀಸರು ಹೇಳುವ ಪ್ರಕಾರ, ಸುಶಾಂತರದು ಆತ್ಮಹತ್ಯೆ. ಹೀಗಾಗಿ ಯಾವುದೇ ದೂರು ದಾಖಲಿಸಲಿಲ್ಲ. ಆದರೆ ಏಕಾಏಕಿ ಹೊಸ ತಥ್ಯಗಳ ಆಧಾರದ ಮೇಲೆ ಸುಶಾಂತ್‌ ತಂದೆ ನೀಡಿದ ದೂರನ್ನು ದಾಖಲಿಸಿದ ಪಟನಾ ಪೊಲೀಸರು, ತನಿಖೆಗೆ ತಾವೇ ಮುಂಬೈಗೆ ತೆರಳಿದಾಗ ಸ್ಥಳೀಯ ಪೊಲೀಸರು ಅಡ್ಡಿ ಪಡಿಸಿದರು ಎನ್ನುವ ಕಾರಣಕ್ಕೆ ಸುಪ್ರೀಂಕೋರ್ಟ್‌ ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಿದೆ.

ಈಗ ಏಳುವ ಮುಖ್ಯ ಪ್ರಶ್ನೆ, ಒಂದು ವೇಳೆ ಇದೇ ಪ್ರಕರಣವನ್ನು ಆಧಾರ ಮಾಡಿಕೊಂಡು ನಾಳೆ ಬಿಜೆಪಿಯವರು ಆಳುತ್ತಿರುವ ಬೆಂಗಳೂರಿನಲ್ಲಿ ಒಬ್ಬ ಮಲೆಯಾಳಿಯ ಸಾವು ಘಟಿಸಿ ಸ್ಥಳೀಯ ಪೊಲೀಸರ ತನಿಖೆ ನಂತರವೂ ಕಮ್ಯುನಿಸ್ಟರ ಆಳ್ವಿಕೆ ಇರುವ ಕೇರಳ ಪೊಲೀಸರು ದೂರು ದಾಖಲಿಸಿ ತನಿಖೆಗೆ ಬಂದರೆ, ಸ್ಥಳೀಯ ಪೊಲೀಸರು ತನಿಖೆ ನಡೆಸಲು ಅವಕಾಶ ಮಾಡಿಕೊಡಬೇಕಾ? ಒಂದು ವೇಳೆ ಕೊಟ್ಟಿಲ್ಲವಾದರೆ ಸಿಬಿಐ ತನಿಖೆಗೆ ಪ್ರಕರಣ ಹೋದರೆ ಒಕ್ಕೂಟ ವ್ಯವಸ್ಥೆಯ ಕಥೆಯೇನು? ಮತ್ತು ಘಟನೆ ನಡೆದ ರಾಜ್ಯ ಬಿಟ್ಟು ಇನ್ನೊಂದು ರಾಜ್ಯ ತನಿಖೆ ನಡೆಸುವುದು ಸರಿ ಇದೆ ಎಂದಾದಲ್ಲಿ ರಾಜಕೀಯ ಕಾರಣಕ್ಕಾಗಿ ಕೂಡ ಇವುಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಇರುವುದಿಲ್ಲವೇ? ಜೊತೆಗೆ ಈ ತನಿಖೆಯನ್ನು ಸುಪ್ರೀಂಕೋರ್ಟ್‌ ನಿಗರಾಣಿಯಲ್ಲಿ ನಡೆಸದೇ ಇರುವುದರಿಂದ ಮುಂದಿನ ಎರಡು ಮೂರು ತಿಂಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ತಿಕ್ಕಾಟ ಕೂಡ ನಿರೀಕ್ಷಿತ.

ಸುಶಾಂತ್ ಸಾವಿನ ಪ್ರಮುಖ ಸಾಕ್ಷಿ ಸಿದ್ಧಾರ್ಥ್ ಪಿಥನಿ ವಿಚಾರಣೆ

ಮುಂಬೈ ಪೊಲೀಸರ ತಪ್ಪೇನು?

ದೇಶ ವಿದೇಶಗಳಲ್ಲಿ ಇಷ್ಟಪಡುತ್ತಿದ್ದ ಒಬ್ಬ ನಟ ಅಸಹಜವಾಗಿ ಸಾವಿಗೀಡಾದ ನಂತರ ತನಿಖೆ ನಡೆಸಿ ವರದಿಯನ್ನು ಸಾರ್ವಜನಿಕರ ಮುಂದೆ ಇಡಬೇಕಾಗಿದ್ದ ಮುಂಬೈ ಪೊಲೀಸರು ತಿಂಗಳಾನುಗಟ್ಟಲೇ ತನಿಖೆ ಮುಂದುವರೆಸುತ್ತಲೇ ಇದ್ದದ್ದು ಮೊದಲ ತಪ್ಪು. ಮುಂಬೈ ಪೊಲೀಸರು ಸುಶಾಂತ್‌ ಸಾವಿನ ತನಿಖೆಯನ್ನು ಬಾಲಿವುಡ್‌ನ ವಂಶವಾಹಿ ಚರ್ಚೆಗೆ ಸೀಮಿತವಾಗಿ ನೋಡುತ್ತಿದ್ದರು ಎಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ತನಿಖೆಯಿಂದ ಸ್ಪಷ್ಟವಾಗುತ್ತದೆ.

ಆದರೆ ರಿಯಾ ಚಕ್ರವರ್ತಿ ಕುರಿತಾದ ಸುಶಾಂತ್‌ ತಂದೆ ಮಾಡಿರುವ ಆರೋಪಗಳ ಬಗ್ಗೆ ಮುಂಬೈ ಪೊಲೀಸರು ತನಿಖೆ ಮಾಡಿದ್ದರಾ, ಇಲ್ಲವಾ? ಇಲ್ಲವಾದರೆ ಸುಶಾಂತ್‌ ಕುಟುಂಬ ಏಕಾಏಕಿ ಪಟನಾ ಪೊಲೀಸರ ಬಳಿ ಏಕೆ ದೂರು ಸಲ್ಲಿಸಿತು ಎಂಬ ಪ್ರಶ್ನೆಗೆ ಸಿಬಿಐ ತನಿಖೆ ನಂತರವೇ ಉತ್ತರ ಸಿಗಲಿದೆ. ಜೊತೆಗೆ ಮುಂಬೈ ಪೊಲೀಸರಿಗೆ ಉದ್ಧವ್‌ ಸರ್ಕಾರ ಅಡ್ಡಿಪಡಿಸಿತು ಎಂಬ ಆರೋಪಕ್ಕೂ ಕೂಡ ಸಿಬಿಐ ತನಿಖೆಯೇ ಬೆಳಕು ಚೆಲ್ಲಬಹುದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ