ವರದಿ :  ಅಪ್ಪಾರಾವ್‌ ಸೌದಿ

 ಬೀದರ್‌ (ಏ.10):  ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭೆ ಮತ್ತು ಒಂದು ಲೋಕಸಭಾ ಉಪ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಕ್ಷೇತ್ರವೆಂದರೆ ಅದು ಬಸವ ಕಲ್ಯಾಣ. ಬಂಡಾಯ, ಮತ ವಿಭಜನೆ ಜೊತೆಗೆ ‘ಸ್ವಾಭಿಮಾನ’ದ ಕಿಚ್ಚು ಬಸವಕಲ್ಯಾಣ ಉಪ ಚುನಾವಣಾ ಅಖಾಡದ ರಂಗೇರಿಸಿದೆ.

ಪ್ರಮುಖ ಮೂರೂ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಕ್ಷೇತ್ರದಲ್ಲಿ ನೇರಾ ನೇರ ಸ್ಪರ್ಧೆ ಏನಿದ್ದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ. ಕ್ಷೇತ್ರದಲ್ಲಿ ಈ ಎರಡೂ ಪಕ್ಷಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ. ಈಗಾಗಲೇ ಘಟಾನುಘಟಿ ನಾಯಕರನ್ನು ಕರೆಸಿಕೊಂಡು ಹಲವು ಸುತ್ತಿನ ಪ್ರಚಾರವನ್ನೂ ಅಭ್ಯರ್ಥಿಗಳು ನಡೆಸಿದ್ದಾರೆ. ಇಷ್ಟಾದರೂ ಕ್ಷೇತ್ರದ ಮತದಾರ ಮಾತ್ರ ಯಾರ ಪರವಾಗಿದ್ದೇನೆ ಎನ್ನುವ ಗುಟ್ಟು ಬಿಟ್ಟುಕೊಡದ ಕಾರಣ ಈ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಕಣದಲ್ಲಿ 12 ಅಭ್ಯರ್ಥಿಗಳು :  ಬಸವಕಲ್ಯಾಣದ ಶಾಸಕರಾಗಿದ್ದ ಬಿ.ನಾರಾಯಣರಾವ್‌ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ವಿಧಾನಸಭಾ ಕ್ಷೇತ್ರಕ್ಕೆ ಏ.17ರಂದು ಉಪ ಚುನಾವಣೆ ನಡೆಯುತ್ತಿದ್ದು, ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿಯಿಂದ ಶರಣು ಸಲಗರ, ಕಾಂಗ್ರೆಸ್‌ನಿಂದ ಮಾಲಾ ಬಿ.(ದಿ. ನಾರಾಯಣ ರಾವ್‌ ಅವರ ಪತ್ನಿ), ಜೆಡಿಎಸ್‌ನಿಂದ ಸೈಯದ್‌ ಯಸ್ರಾಬ ಅಲಿ ಖಾದ್ರಿ, ಎಐಎಂಐಎಂನಿಂದ ಅಬ್ದುಲ್‌ ರಜಾಕ್‌, ಶಿವಸೇನೆಯಿಂದ ಅಂಕುಶ, ಅಖಿಲ ಭಾರತೀಯ ಮುಸ್ಲಿಂ ಲೀಗ್‌ನಿಂದ ಫರ್ಜಾನಾ ಬೇಗಂ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಮಂಜುನಾಥ ಶೃಂಗೇರಿ, ಸ್ವತಂತ್ರ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡರೂ ಆದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಅಲ್ತಾಫ್‌, ಅಂಬ್ರೋಸ್‌ ಡಿ ಮೆಲ್ಲೊ, ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ, ರವಿಕಿರಣ ಎಂ.ಎನ್‌. ಕಣದಲ್ಲಿದ್ದಾರೆ.

ಭರ್ಜರಿ ಪ್ರಚಾರ:  ಉಪ ಚುನಾವಣೆಗಳನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಆಡಳಿತಾರೂಢ ಬಿಜೆಪಿಯು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನೇ ಮಾಡುತ್ತಿದೆ. ಉಪಮುಖ್ಯಮಂತ್ರಿ, ಸಚಿವ, ಸಂಸದರಾದಿಯಾಗಿ ಬಹುತೇಕ ಬಿಜೆಪಿ ಮುಖಂಡರು, ಸರ್ಕಾರದ ಒಂದು ತಂಡ ಇಲ್ಲೇ ಬಿಡಾರ ಹೂಡಿದೆ. ಈಗಾಗಲೇ ಮೂರ್ನಾಲ್ಕು ಸುತ್ತಿನ ಪ್ರಚಾರವನ್ನೂ ಪೂರ್ಣಗೊಳಿಸಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಂತೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಇತರೆ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆಗ ಬಿಜೆಪಿಗೆ, ಈಗ ಕೈಗೆ JDS ಶಾಕ್‌ : ಕಾಂಗ್ರೆಸ್ ನಾಯಕರ ಬೆವರಿಳಿಸಿದ ದಳಪತಿ ...

ಇನ್ನು ಕ್ಷೇತ್ರವನ್ನು ಬಿ.ನಾರಾಯಣರಾವ್‌ ಮೂಲಕ ದಶಕಗಳ ನಂತರ ತನ್ನ ವಶಕ್ಕೆ ಪಡೆದಿದ್ದ ಕಾಂಗ್ರೆಸ್‌ ಈ ಬಾರಿ ಅನುಕಂಪದ ಅಲೆಯ ಮೇಲೆ ವಿಶ್ವಾಸ ಇರಿಸಿದೆ. ನಾರಾಯಣ ರಾವ್‌ ಪತ್ನಿ ಮಾಲಾ ಅವರಿಗೆ ಟಿಕೆಟ್‌ ನೀಡುವ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳಲು ತಂತ್ರಗಾರಿಕೆ ನಡೆಸಿದೆ. ಸಜ್ಜನ ರಾಜಕಾರಣಿಯೆಂದೇ ಹೆಸರುವಾಸಿಯಾಗಿದ್ದ ನಾರಾಯಣ ರಾವ್‌ ಸುಲಭವಾಗಿ ಜನರ ಕೈಗೆ ಸಿಗುತ್ತಿದ್ದವರು. ಹಿಂದುಳಿದ ವರ್ಗಗಳು, ಅಲೆಮಾರಿ ಜನಾಂಗದವರ ಬೆಂಬಲವನ್ನೂ ಗಳಿಸಿದ್ದವರು. ಅವರ ಹೆಸರು ಮುಂದಿಟ್ಟುಕೊಂಡೇ ಪತ್ನಿ ಮಾಲಾ ಅವರೀಗ ಮತ ಯಾಚನೆ ಮಾಡುತ್ತಿದ್ದಾರೆ. ಸ್ಟಾರ್‌ ಪ್ರಚಾರಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜಂಟಿಯಾಗಿ ರಾರ‍ಯಲಿ ನಡೆಸಿ ಹೋಗಿದ್ದಾರೆ. ಆದರೆ, ಉಪ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳುತ್ತಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಟಿಕೆಟ್‌ ನೀಡಿರುವುದು ಕಾಂಗ್ರೆಸ್‌ಗೆ ಆತಂಕ ಮೂಡಿಸಿದೆ. ಜೆಡಿಎಸ್‌ನಿಂದಾಗಿ ಕಾಂಗ್ರೆಸ್‌ ಮತ ವಿಭಜನೆಯ ಆತಂಕ ಎದುರಿಸುತ್ತಿದೆ.

ಬಿಜೆಪಿಗೆ ಬಂಡಾಯದ ಬಿಸಿ

ಬಸವಕಲ್ಯಾಣದಲ್ಲಿ ಕಮಲ ಅರಳಿಸಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿರುವ ಆಡಳಿತಾರೂಢ ಬಿಜೆಪಿ, ತನ್ನ ಸಾಂಪ್ರದಾಯಿಕ ಲಿಂಗಾಯತ ಮತದಾರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬಹುತೇಕ ಯಶಸ್ವಿ ಆಗಿರುವಂತೆ ಕಂಡುಬರುತ್ತಿದೆ. ಆದರೆ ಬೀದರ್‌ ಬಿಟ್ಟು ಕಲಬುರಗಿ ಮೂಲದವರಿಗೆ ಟಿಕೆಟ್‌ ನೀಡಿದ್ದು ಪಕ್ಷದಲ್ಲೇ ಕೆಲ ಮುಖಂಡರ ವಿರೋಧಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಿಜೆಪಿಯಿಂದ ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಪಕ್ಷದ ಪಾಲಿಗೆ ತಲೆನೋವಾಗಿದ್ದಾರೆ.

2018ರಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿದ್ದ ಖೂಬಾ ಅವರು ನಾರಾಯಣರಾವ್‌ ಎದುರು ಸೋತಿದ್ದರು. ಈಗ ಉಪ ಚುನಾವಣೆಯಲ್ಲಿ ಕಲಬುರಗಿ ಮೂಲದ ಸಲಗರ ಅವರನ್ನು ಬಿಜೆಪಿ ಕಣಕ್ಕಿಳಿಸಿರುವುದು ಸಹಜವಾಗಿಯೇ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಖೂಬಾ ಅವರಲ್ಲಿ ಆಕ್ರೋಶ ಮೂಡಿಸಿದೆ. ಸ್ವತಂತ್ರವಾಗಿ ಕಣಕ್ಕಿಳಿದಿರುವ ಅವರು ಸ್ವಾಭಿಮಾನದ ಹೆಸರಲ್ಲಿ ಜನರ ಮನ, ಮತ ಗೆಲ್ಲಲು ಹೊರಟಿದ್ದಾರೆ. ಭರ್ಜರಿ ಪ್ರಚಾರವನ್ನೇ ನಡೆಸುತ್ತಿದ್ದಾರೆ.

ಇನ್ನು ಬಿಜೆಪಿಯ ಮರಾಠಾ ಮತಬುಟ್ಟಿಗೆ ಕೈಹಾಕಬಹುದಾಗಿದ್ದ, ಎನ್‌ಸಿಪಿಯಿಂದ ಕಣಕ್ಕಿಳಿದಿದ್ದ ಮಾಜಿ ಶಾಸಕ ಎಂ.ಜಿ ಮೂಳೆ ಅವರ ಮನವೊಲಿಸಿ ನಾಮಪತ್ರ ಹಿಂತೆಗೆಸುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾಗಿದ್ದು, ಸದ್ಯದ ಮಟ್ಟಿಗೆ ನೆಮ್ಮದಿಯ ವಿಚಾರ.

ಬಿಜೆಪಿ ಭರ್ಜರಿ ಪ್ರಚಾರವನ್ನೇನೋ ನಡೆಸುತ್ತಿದ್ದರೂ ಎರಡು ಬಾರಿ ಶಾಸಕರಾಗಿದ್ದ ಖೂಬಾ ಬಂಡಾಯವನ್ನು ಹೇಗೆ ನಿಭಾಯಿಸುತ್ತದೆ ಮತ್ತು ಪಕ್ಷದ ಕಾರ್ಯಕರ್ತರನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದರ ಮೇಲೆ ಅದರ ಗೆಲುವಿನ ಲೆಕ್ಕಾಚಾರ ಅಡಗಿದೆ. ಅನುಕಂಪ ಯಾವ ಮಟ್ಟಿಗೆ ಫಲ ನೀಡುತ್ತದೆ ಎಂಬುದರ ಮೇಲೆ ಕಾಂಗ್ರೆಸ್‌ ಭವಿಷ್ಯವಿದೆ.

ಆಗ ಬಿಜೆಪಿಗೆ, ಈಗ ಕಾಂಗ್ರೆಸ್ಸಿಗೆ ದಳ ಶಾಕ್‌