ನವದೆಹಲಿ (ಅ.07):  ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಈಗ ಉಪಚುನಾವಣೆಗೆ ತಡೆ ನೀಡಬೇಕೆಂಬ ಪರಾಜಿತ ಅಭ್ಯರ್ಥಿಯ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದ್ದು ಪ್ರಕರಣದ ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಈಗಾಗಲೇ ಘೋಷಿಸಲ್ಪಟ್ಟಿರುವ ಆರ್‌.ಆರ್‌.ನಗರ ಉಪಚುನಾವಣೆ ನಡೆಯುವುದೋ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ.

ಈ ಹಿಂದಿನ ಚುನಾವಣೆ ವೇಳೆ ಅಕ್ರಮ ನಡೆದಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಮಂಗಳವಾರ ಆನ್‌ಲೈನ್‌ ಮೂಲಕ ವಿಚಾರಣೆ ನಡೆಯಿತು.

ಶಿರಾ ಬೈ ಎಲೆಕ್ಷನ್‌ಗೆ ಅಭ್ಯರ್ಥಿ ​ಹೆಸ್ರು ಘೋಷಿಸಿದ ಕೆಲವೇ ಗಂಟೆಗಳಲ್ಲಿ JDSಗೆ ಬಿಗ್ ಶಾಕ್ ...

ವಿಚಾರಣೆ ವೇಳೆ ನೀವೇ ಗೆಲುವಿನ ಅಭ್ಯರ್ಥಿ ಎಂದು ತೀರ್ಮಾನ ಮಾಡುವುದು ಹೇಗೆ ಎಂದು ಪೀಠ ಮುನಿರಾಜು ಅವರನ್ನು ಪ್ರಶ್ನಿಸಿತು. ಕಳೆದ ಬಾರಿಯ ಚುನಾವಣೆಯಲ್ಲಿ ನಿಮಗೂ ಮುನಿರತ್ನ ಅವರಿಗೂ ಸುಮಾರು 25 ಸಾವಿರ ಮತಗಳ ಅಂತರ ಇದೆ. ಜೊತೆಗೆ ಉಳಿದ 13 ಅಭ್ಯರ್ಥಿಗಳಿಗೂ ಮತ ಹಂಚಿಕೆಯಾಗಿದೆ. ಹೀಗಿರುವಾಗ ನೀವೇ ಗೆಲುವಿನ ಅಭ್ಯರ್ಥಿ ಅಂಥ ಘೋಷಣೆ ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನಿರಿಸಿತು. ಚುನಾವಣೆ ಘೋಷಣೆಯಾದ ಬಳಿಕ ಹೇಗೆ ತಡೆ ನೀಡುವುದು ಎಂದ ಪ್ರಶ್ನಿಸಿದ ಪೀಠ ಆದೇಶ ಕಾಯ್ದಿರಿಸಿತು. ಮುನಿರಾಜು ಪರ ಹಿರಿಯ ವಕೀಲ ಶೇಖರ್‌ ನಾಫ್ಡೆ ವಾದ ಮಂಡಿಸಿದರೆ, ಮುನಿರತ್ನ ಪರ ಹಿರಿಯ ವಕೀಲ ಮುಕುಲ… ರೋಹಟಗಿ ವಾದ ಮಾಡಿದರು.