ಕ್ಷೇತ್ರ ತ್ಯಾಗ ಮಾಡಿ ರಾಜಕೀಯ ಭಾರ ಇಳಿಸಿಕೊಂಡ ಬಿಎಸ್‌ವೈಗೆ ಮತ್ತಷ್ಟು ರಿಲೀಫ್ ಕೊಟ್ಟ ಕೋರ್ಟ್
ಕ್ಷೇತ್ರ ತ್ಯಾಗ ಮಾಡಿ ರಾಜಕೀಯ ಭಾರ ಇಳಿಸಿಕೊಂಡ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್ ಮತ್ತಷ್ಟು ರಿಲೀಫ್ ನೀಡಿದೆ.
ನವದೆಹಲಿ, (ಜುಲೈ.22): ಒಂದೆಡೆ ಪುತ್ರ ಬಿವೈ ವಿಜಯೇಂದ್ರಗೆ ಯಡಿಯೂರಪ್ಪನವರು ತಮ್ಮ ಶಿಕಾರಿಪುರ ಕ್ಷೇತ್ರವನ್ನು ತ್ಯಾಗ ಮಾಡುವ ಮೂಲಕ ರಾಜಕೀಯ ಭಾರವನ್ನು ಕೊಂಚ ಕಡಿಮೆ ಮಾಡಿಕೊಂಡು ಹಗುರವಾಗಿದ್ದಾರೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್ ಬಿಎಸ್ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ಹೌದು...ದೇವರಬೀಸನಹಳ್ಳಿ ಡಿನೋಟಿಫೈ ಪ್ರಕರಣದ ವಿಚಾರಣೆ ಸೇರಿ ಮುಂದಿನ ಎಲ್ಲಾ ಪ್ರಕ್ರಿಯೆಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆದು ಮುಂದಿನ ವಿಚಾರಣೆ ಗೆ ತಡೆ ನೀಡಿ, ಪ್ರತಿವಾದಿಗಳಿಗೆ ಸಮನ್ಸ್ ನೀಡಿದೆ. ಇನ್ನು ಮುಂದಿನ ಆದೇಶದವರೆಗೂ ಜನಪ್ರತಿನಿಧಿಗಳ ವಿಶೇಷ ಕೋಟ್೯ ಯಾವುದೇ ವಿಚಾರಣೆ ನಡೆಸುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ. ಈ ಮೂಲಕ ಯಡಿಯೂರಪ್ಪಗೆ ರಿಲೀಫ್ ಮೇಲೆ ಮತ್ತೊಂದು ರಿಲೀಫ್ ಸಿಕ್ಕಿದ್ದು ಮತ್ತಷ್ಟು ನಿರಾಳರಾದಂತಾಗಿದ್ದಾರೆ.
ಪುತ್ರಿನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಯತೀಂದ್ರ ಸಿದ್ದರಾಮಯ್ಯ ಹಾದಿ ಸುಗಮ, ಕಾಂಗ್ರೆಸ್‌ಗೆ ಪ್ಲಸ್
ಇದೇ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ನೋಟೀಸ್ ಜಾರಿ ಮಾಡಿತ್ತು.ವಿಶೇಷ ನ್ಯಾಯಾಲಯದ ಆದೇಶವನ್ನು ಬಿಎಸ್ ವೈ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. ಜೊತೆಗೆ ಪ್ರಕರಣವನ್ನು ರದ್ದುಪಡಿಸುವಂತೆಯೂ ಕೋರಿದ್ದರು.
ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಿ.ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಉಳಿದ 10 ಆರೋಪಿಗಳ ವಿರುದ್ದವೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ರದ್ದಾಗಿದೆ. ಹಾಗಾಗಿ ತಮ್ಮ ವಿರುದ್ದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು.
ಬಿಎಸ್ ವೈ ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ನ್ಯಾ.ಮೈಕಲ್ ಡಿ ಕುನ್ಹಾ ನೇತೃತ್ವದ ಪೀಠ ವಿಚಾರಣೆ ಗೆ ತಡೆ ನೀಡಲು ಮತ್ತು ರದ್ದುಪಡಿಸಲು ನಿರಾಕರಿಸಿತ್ತು. ಹೈಕೋರ್ಟ್ ಆದೇಶವನ್ನು ಬಿಎಸ್ ವೈ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
ಬಿಎಸ್‌ವೈ ಫುಲ್ ನಿರಾಳ
ಜುಲೈ 22,2022 ಯಡಿಯೂರಪ್ಪಗೆ ಮಹತ್ವದ ದಿನ ಅಂತಾನೇ ಹೇಳಬಹುದು. ಯಾಕಂದ್ರೆ ಒಂದು ಕಡೆ ಇಂದೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಶಿಕಾರಿಪುರವನ್ನು ಪುತ್ರ ಬಿವೈ ವಿಜಯೇಂದ್ರಗೆ ಧಾರೆ ಎರೆದುಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ರಾಜಕೀಯ ಜಂಜಾಟದಿಂದ ದೂರ ಉಳಿಯುವ ಸೂಚನೆ ಕೊಟ್ಟಿದ್ದಾರೆ. ಮತ್ತೊಂದೆಡೆ ಇಂದೇ ಸುಪ್ರೀಂ ಕೋರ್ಟ್ ಯಡಿಯೂರಪ್ಪನವರ ಮೇಲಿನ ಡಿನೋಟಿಫೈ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಇದರೊಂದಿಗೆ ಬಿಎಸ್‌ವೈ ಫುಲ್ ರಿಲೀಫ್ ಆದಂತಿದೆ.