ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಆ.02): ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮಾನ್ಯ ಸಂಸದ ನಳೀನ್‌ಕುಮಾರ್ ಕಟೀಲ್ ಅವರೇ ಹಿಂದೆ ಆಡಳಿತದಲ್ಲಿದ್ದ ನಿಮ್ಮ ಸರ್ಕಾರವೇ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಳಿಸಿತ್ತು.
ಈಗ ಹೇಳಿ, ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ? ಅಥವಾ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮಾತ್ರ ಹಿಂದೂ ವಿರೋಧಿಯೋ? ಎಂದು ಪ್ರಶ್ನಿಸಿದ್ದಾರೆ. ನಮಗೆ ಜನರ ಧಾರ್ಮಿಕ ನಂಬಿಕೆಯ ಜೊತೆಗೆ ಹೈನುಗಾರರ ಬದುಕು ಮುಖ್ಯ. ಹೀಗಾಗಿ ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದವರು ಒಪ್ಪುವುದಾದರೆ ತುಪ್ಪ ಪೂರೈಸಲು ನಮಗೆ ಯಾವ ಸಮಸ್ಯೆಗಳಿಲ್ಲ. ಇಂತಹ ವಿಚಾರವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುವ ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಆನ್‌ಲೈನ್ ಗೇಮ್, ಬೆಟ್ಟಿಂಗ್ ನಿಷೇಧ ಚಿಂತನೆ: ಸಿಎಂ ಸಿದ್ದರಾಮಯ್ಯ
ಕೆಎಂಎಫ್ ಟೆಂಡರ್‌ನಲ್ಲೇ ಭಾಗವಹಿಸಿಲ್ಲ: ಇಲ್ಲಿನ ಪ್ರಸಿದ್ಧ ತಿರುಪತಿ ದೇಗುಲದಲ್ಲಿ ತಯಾರಿಸುವ ಲಡ್ಡು ತಯಾರಿಕೆಗೆ ತುಪ್ಪ ಪೂರೈಸಲು ಕರ್ನಾಟಕದ ನಂದಿನಿ ಬದಲಾಗಿ ಕಡಿಮೆ ದರ ನಮೂದಿಸಿ ಬೇರೊಂದು ಕಂಪನಿಯೊಂದನ್ನು ಆಯ್ಕೆ ಮಾಡಲಾಗಿದೆ ಎಂದು ತಿರುಪತಿ ದೇಗುಲದ ಉಸ್ತುವಾರಿ ಹೊತ್ತಿರುವ ಟಿಟಿಡಿ ಸ್ಪಷ್ಟಪಡಿಸಿದೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ, ‘ನಮ್ಮದು ಸರ್ಕಾರಿ ಸಂಸ್ಥೆ. ಹೀಗಾಗಿ ದೇಗುಲಕ್ಕೆ ಬೇಕಾದ ಎಲ್ಲಾ ವಸ್ತುಗಳ ಖರೀದಿಗೂ ಟೆಂಡರ್ ಮಾರ್ಗ ಅನುಸರಿಸಲಾಗುತ್ತದೆ.
ಅದರಲ್ಲಿ ನಮ್ಮ ಮಾನದಂಡ ಪೂರೈಸಿ, ಅತ್ಯಂತ ಕಡಿಮೆ ದರ ನಮೂದು ಮಾಡಿದವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಹೀಗಾಗಿ ಕರ್ನಾಟಕದ ಕೆಎಂಎಫ್‌ಗೆ ಅವಕಾಶ ನೀಡಿಲ್ಲ ಎಂಬುದು ಸರಿಯಲ್ಲ. ಮೇಲಾಗಿ ಈ ಹಿಂದೆ 2023ರ ಮಾಚ್‌ರ್‍ನಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಕೆಎಂಎಫ್ ಭಾಗವಹಿಸಿರಲಿಲ್ಲ’ ಎಂದು ಹೇಳಿದ್ದಾರೆ. ಇದೆ ವೇಳೆ ಸತತವಾಗಿ ಕಳೆದ 20 ವರ್ಷಗಳಿಂದ ಕೆಎಂಎಫ್, ಟಿಟಿಡಿಗೆ ತುಪ್ಪ ಪೂರೈಕೆ ಮಾಡುತ್ತಿತ್ತು ಎಂಬ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿಕೆಯನ್ನೂ ಅವರು ತಳ್ಳಿಹಾಕಿದ್ದಾರೆ.
ಅ.15ಕ್ಕೆ ಮೈಸೂರು ದಸರಾ; ಏರ್ ಶೋ ನಡೆಸಲು ಚಿಂತನೆ: ಸಿಎಂ ಸಿದ್ದು
ಗುಣಮಟ್ಟರಾಜಿ ಇಲ್ಲ: ‘ಇದೇ ವೇಳೆ ಕಡಿಮೆ ದರಕ್ಕಾಗಿ ಟಿಟಿಡಿ ಗುಣಮಟ್ಟದಲ್ಲಿ ರಾಜೀ ಮಾಡಿಕೊಂಡಿದೆ ಎಂಬ ಕಳವಳವನ್ನು ಧರ್ಮಾರೆಡ್ಡಿ ತಳ್ಳಿಹಾಕಿದ್ದಾರೆ. ನಾವು ತುಪ್ಪು ಖರೀದಿಗೆ ನಮ್ಮದೇ ಆದ ಮಾನದಂಡ ಹೊಂದಿದ್ದೇವೆ. ಕಡಿಮೆ ದರ ನಮೂದಿಸಿದವರ ತುಪ್ಪವನ್ನು ನಾವು ನಮ್ಮ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುತ್ತೇವೆ. ನಂತರವಷ್ಟೇ ಅದನ್ನು ಬಳಸುತ್ತೇವೆ. ಹೀಗಾಗಿ ಗುಣಮಟ್ಟದಲ್ಲಿ ರಾಜೀ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.
