ಮಂಡ್ಯ ಟಿಕೆಟ್ ಜೆಡಿಎಸ್‌ಗೆ ಬಿಟ್ಟುಕೊಡದೆ ಬಿಜೆಪಿಗೆ ಕೊಡಿ: ಮೋದಿಗೆ ಸುಮಾ ಮೊರೆ
ಯಾವುದೇ ಕಾರಣಕ್ಕೂ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಸರಿಯಲ್ಲ. ಇದರಿಂದ ಭವಿಷ್ಯದಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ನೆಲೆಯೂರಬೇಕು ಎಂಬ ಆಶಯಕ್ಕೆ ಧಕ್ಕೆ ಉಂಟಾಗಲಿದೆ. ಮಂಡ್ಯ ಒಕ್ಕಲಿಗ ಸಮುದಾಯದ ಹೃದಯ ಭಾಗ. ಇಲ್ಲಿನ ಜನರ ವಿಶ್ವಾಸ ಗಳಿಸಲು ಬಿಜೆಪಿಗೆ ಅವಕಾಶ ಬಂದೊದಗಿದೆ. ಅದನ್ನು ಕಳೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿದರು ಎನ್ನಲಾಗಿದೆ.
ಬೆಂಗಳೂರು(ಫೆ.10): ‘ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡದೆ ಬಿಜೆಪಿಯೇ ಉಳಿಸಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿರುವ ಸಂಸದೆ ಸುಮಲತಾ ಅಂಬರೀಷ್ ಅವರು, ‘ನಾನು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಮಂಡ್ಯದಲ್ಲಿ ಮೊದಲ ಗೆಲುವು ತಂದು ಕೊಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಅವರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸಕ್ತ ವಿದ್ಯಮಾನಗಳನ್ನು ವಿವರಿಸಿದರು.
ಯಾವುದೇ ಕಾರಣಕ್ಕೂ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಸರಿಯಲ್ಲ. ಇದರಿಂದ ಭವಿಷ್ಯದಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ನೆಲೆಯೂರಬೇಕು ಎಂಬ ಆಶಯಕ್ಕೆ ಧಕ್ಕೆ ಉಂಟಾಗಲಿದೆ. ಮಂಡ್ಯ ಒಕ್ಕಲಿಗ ಸಮುದಾಯದ ಹೃದಯ ಭಾಗ. ಇಲ್ಲಿನ ಜನರ ವಿಶ್ವಾಸ ಗಳಿಸಲು ಬಿಜೆಪಿಗೆ ಅವಕಾಶ ಬಂದೊದಗಿದೆ. ಅದನ್ನು ಕಳೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿದರು ಎನ್ನಲಾಗಿದೆ.
ಮಂಡ್ಯ ರಣರಂಗದಲ್ಲಿ ದೋಸ್ತಿ ದಂಗಲ್, ನನ್ನ ಕೋಟೆ ನಾನ್ಯಾಕೇ ಬೇರೆಯವ್ರಿಗೆ ಬಿಟ್ಟು ಕೊಡ್ಲಿ ಅಂತಿದ್ದಾರೆ ಸುಮಲತಾ!
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾವು ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಪಕ್ಷದ ವಿಧಾನಸಭಾವಾರು ಮತ ಗಳಿಕೆ ಪ್ರಮಾಣ ಹೆಚ್ಚಾಗಿದೆ. ಇದುವರೆಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈಗ ಅಂಥದೊಂದು ಸಂದರ್ಭ ಎದುರಾಗಿದೆ. ತಮಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದರು.
ಇದಕ್ಕೂ ಮೊದಲು ಸುಮಲತಾ ಅವರು ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಶುಕ್ರವಾರ ಮೋದಿ ಭೇಟಿ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ವಿವರವಾಗಿ ತಿಳಿಸಿರುವ ಸುಮಲತಾ ಅವರು, ‘ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಹಾಗೂ ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕಾಗಿ ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಧನ್ಯವಾದಗಳು’ ಎಂದು ಹೇಳಿದ್ದಾರೆ.
‘ನರೇಂದ್ರ ಮೋದಿ ಅವರು ವಿಶ್ವದ ಮಹಾನ್ ನಾಯಕರಾಗಿದ್ದು, ಭಾರತದಂತಹ ಬೃಹತ್ ದೇಶವನ್ನು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಾ, ಭಾರತವನ್ನು ಮುಂದುವರೆದ ರಾಷ್ಟ್ರಗಳ ಸಾಲಿಗೆ ಸೇರಿಸಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ದೇಶದ ಅಭಿವೃದ್ಧಿ ಹಾಗೂ ದೇಶದ ಭವಿಷ್ಯದ ಬಗ್ಗೆ ನಿಮಗಿರುವ ದೂರದೃಷ್ಟಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಭಾರತ ದೇಶವು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸನ್ಮಾನ್ಯ ಪ್ರಧಾನ ಮಂತ್ರಿಗಳ ಸಮರ್ಥ ನಾಯಕತ್ವವೇ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರಣದಿಂದಲೇ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ’ ಎಂದಿದ್ದಾರೆ.
ಲೋಕಸಭಾ ಚುನಾವಣೆ: ಸುಮಲತಾರಿಗೆ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನು? ಮಾಜಿ ಸಚಿವ ಕೆ.ಸಿ. ನಾರಾಯಣಗೌಡ
‘ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ತಾವು ನೀಡಿದ ಪ್ರೋತ್ಸಾಹದಾಯಕ ಮಾತುಗಳು, ನಮ್ರತೆ ಮತ್ತು ಗೌರವಕ್ಕೆ ನಾನು ಕೃತಜ್ಞಳಾಗಿದ್ದೇನೆ. ತಮ್ಮನ್ನು ಭೇಟಿ ಮಾಡಿದ ಆ ಕ್ಷಣಗಳು ನನ್ನನ್ನು ಸಾರ್ವಜನಿಕರ ಸೇವೆಯಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದು, ನಿಮ್ಮ ಸಹಕಾರ ಮತ್ತು ಮಾರ್ಗದರ್ಶನಕ್ಕೆ ನಾನು ಹೃದಯಪೂರ್ವಕವಾಗಿ ಆಭಾರಿಯಾಗಿದ್ದೇನೆ. ಈ ಬಾರಿಯ ತಮ್ಮ ಭೇಟಿ ಸಂಧರ್ಭದಲ್ಲಿ ‘ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ’ ಎಂಬ ನಿಮ್ಮ ಮಾತುಗಳು ನನಗೆ ಸ್ಫೂರ್ತಿದಾಯಕವಾಗಿದ್ದು, ವಿಶ್ವದ ಹೆಮ್ಮೆಯ ನಾಯಕರಾದ ತಮ್ಮ ಅಮೂಲ್ಯ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡಲು ಮತ್ತು ಭಾರತವನ್ನು ಮುಂದುವರೆದ ದೇಶಗಳ ಸಾಲಿನಲ್ಲಿ ನೋಡಲು ನಾನು ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಆಸಕ್ತಿ ವಹಿಸಿ, ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುದಾನವನ್ನು ಒದಗಿಸಿದ್ದಕ್ಕಾಗಿ ನನ್ನ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾಭಿಮಾನಿ ಮತದಾರರು, ಕಾರ್ಯಕರ್ತರು, ನನ್ನ ಬೆಂಬಲಿಗರು ಮತ್ತು ಸಮಸ್ತ ಸಾರ್ವಜನಿಕರ ಪರವಾಗಿ ಪ್ರಧಾನ ಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ಅವಧಿಯಲ್ಲಿಯೂ ಸಹ, ನಮ್ಮ ರಾಜ್ಯ ಮತ್ತು ರಾಷ್ಟ್ರದ ಸೇವೆಯಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ.