ಮಂಡ್ಯ, [ಫೆ.10]: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ಕರೆನಾಡು ಮಂಡ್ಯ ಟಿಕೆಟ್ ಯಾರಿಗೆ? ಎನ್ನುವುದು ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಭಾರೀ ಕುತೂಹಲ ಕೆರಳಿಸಿದೆ. 

ಸುಮಲತಾ ಅವರಿಗೆ ಟಿಕೆಟ್ ಕೊಡಲು ಅಂಬರೀಶ್ ಅಭಿಮಾನಿಗಳ ಒತ್ತಾಯ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಬೇಕು ಎಂದು ಜೆಡಿಎಸ್‌ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. 

ಕಾರ್ಯಕರ್ತರ ಅಭಿಪ್ರಾಯದಂತೆ ನಡೆದುಕೊಳ್ಳುವುದು ನಮ್ಮ ಆಸೆ ಎನ್ನುವ ಮೂಲಕ ಜೆಡಿಎಸ್ ನಾಯಕರು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ತಪ್ಪಿಸಿ ಮಂಡ್ಯವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುವುದು ನಾಯಕರ ಪ್ಲಾನ್ ಆಗಿದೆ,

’ಸುಮಲತಾ ಸಹೋದರಿ ಇದ್ದ ಹಾಗೆ; ಮಂಡ್ಯದಿಂದ ಸ್ಪರ್ಧಿಸಿದ್ರೆ ಬೆಂಬಲ’

ಇದ್ರಿಂದ ಮಂಡ್ಯ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕಾಂಗ್ರೆಸ್ ನಿಂದ ಸ್ಪರ್ಧಿಸಲು ಸುಮಲತಾ ಇಂಗಿತ:
 ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದು, ಈ ಮೂಲಕಿ ಜೆಡಿಎಸ್ ಗೆ ಶಾಕ್ ಕೊಟ್ಟಿದ್ದಾರೆ. ನಾಗಮಂಗಲ ತಾಲೂಕಿನ‌ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸುಮಲತಾ ಅಂಬರೀಶ್, ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. 

ಮಂಡ್ಯ ಲೋಕ ಸಮರ: ದೋಸ್ತಿ ಮಣಿಸಲು ಬಿಜೆಪಿಗೆ ಈ ವ್ಯಕ್ತಿಯೇ ಅಂತಿಮ ಆಯ್ಕೆ

ನಂತರ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದಲೂ ಸ್ವಾಮೀಜಿಯವರನ್ನ ಭೇಟಿ ಮಾಡಿ ಆಶೀರ್ವಾದ ಪಡೆಯಬೇಕೆಂದುಕೊಂಡಿದ್ದೆ. ಈಗ ನೆರವೇರಿದೆ. ನಾನು ಪಳಗಿದ ರಾಜಕಾರಣಿ ಅಲ್ಲ, ರಾಜಕೀಯ ಕುರಿತ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ. ಸದ್ಯ ರಾಜಕೀಯದ ಬಗ್ಗೆ ಇನ್ನೂ ನಾನು ನಿರ್ಧಾರ ಮಾಡಿಲ್ಲ. 

ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರ್ತಿಸಿಕೊಂಡಿಲ್ಲ. ಅಂಬರೀಶ್​ ಅವರು ಕಾಂಗ್ರೆಸ್​ನಿಂದಲೇ ಗುರುತಿಸಿಕೊಂಡಿದ್ದರು, ಆದ್ದರಿಂದ ಕಾಂಗ್ರೆಸ್​ ಪಕ್ಷದಿಂದಲೇ ಟಿಕೆಟ್​ ಎದುರು ನೋಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. 

ಮಂಡ್ಯ ಬಿಟ್ಟು ಬೇರೆ ಕಡೆಯಿಂದ ನಾನು ಸ್ಪರ್ಧಿಸಲ್ಲ ಎಂದು ಹೇಳಿದರು. ಈ ಕುರಿತು ಎಲ್ಲಾ ನಾಯಕರನ್ನ  ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧರಿಸಬೇಕಿದೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಈಗಲೂ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿಸಿದರು.