Lok Sabha Election: 15 ದಿನದಲ್ಲಿ ಕಾಂಗ್ರೆಸ್ ಸಂಭಾವ್ಯರ ಪಟ್ಟಿ ಸಲ್ಲಿಸಿ: ರಣದೀಪ್ ಸಿಂಗ್ ಸುರ್ಜೇವಾಲಾ
ಲೋಕಸಭೆ ಚುನಾವಣೆಗೆ ಆಯಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ವರದಿ (ಪಟ್ಟಿ) ಸಲ್ಲಿಸುವಂತೆ ವೀಕ್ಷಕರನ್ನು ನೇಮಿಸಿ ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ ವರದಿ ನೀಡದ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.02): ಲೋಕಸಭೆ ಚುನಾವಣೆಗೆ ಆಯಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ವರದಿ (ಪಟ್ಟಿ) ಸಲ್ಲಿಸುವಂತೆ ವೀಕ್ಷಕರನ್ನು ನೇಮಿಸಿ ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ ವರದಿ ನೀಡದ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ 15 ದಿನಗಳೊಳಗಾಗಿ ಲೋಕಸಭೆ ಚುನಾವಣೆ ಸಂಭಾವ್ಯ ಅಭ್ಯರ್ಥಿಗಳ ಕುರಿತು ವರದಿ ನೀಡುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂಡಿ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕುರಿತು ಸುರ್ಜೇವಾಲಾ ಅವರು ಸುದೀರ್ಘ ಸಭೆ ನಡೆಸಿದರು.
ಈ ವೇಳೆ ಲೋಕಸಭೆ ಚುನಾವಣೆಗೆ ಆದಷ್ಟು ಬೇಗ ಅಭ್ಯರ್ಥಿಗಳನ್ನು ಘೋಷಿಸಿದರೆ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಅನುವಾಗುತ್ತದೆ. ಈ ನಿಟ್ಟಿನಲ್ಲಿ ವೀಕ್ಷಕರನ್ನು ನೇಮಿಸಿ ಆಯಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಸೂಚನೆ ನೀಡಿ ಒಂದೂವರೆ ತಿಂಗಳು ಕಳೆದರೂ ವರದಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸೆ.23 ರಂದು 28 ಕ್ಷೇತ್ರಗಳಿಗೂ ವೀಕ್ಷಕರನ್ನು ನೇಮಿಸಿ ಆದೇಶಿಸಲಾಗಿದೆ.
ಸರ್ಕಾರಿ ಶಾಲೆಗಳಿಗಿನ್ನು ಉಚಿತ ವಿದ್ಯುತ್, ನೀರು: ಸಿದ್ದರಾಮಯ್ಯ ಘೋಷಣೆ
ಬಹುತೇಕ ಸಚಿವರಿಗೆ ವೀಕ್ಷಕರ ಜವಾಬ್ದಾರಿ ವಹಿಸಿದ್ದು, ಆಯಾ ಕ್ಷೇತ್ರಗಳ ಪ್ರವಾಸ ಮಾಡಿ ಎಲ್ಲಾ ಹಂತದ ಮುಖಂಡರನ್ನು ಸಂಪರ್ಕಿಸಿ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿ ನೀಡುವಂತೆ ಸೂಚಿಸಲಾಗಿತ್ತು. ಈವರೆಗೆ ವರದಿ ಅಂತಿಮವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಹೀಗಾಗಿ ಇನ್ನು ತಡ ಮಾಡದೆ 15 ದಿನಗಳೊಳಗಾಗಿ ಸಂಭಾವ್ಯರ ವರದಿ ಸಿದ್ಧಪಡಿಸಬೇಕು. ನ.17ರಂದು ಮಧ್ಯಪ್ರದೇಶ ಚುನಾವಣೆ ನಡೆಯಲಿದ್ದು, ತಕ್ಷಣ ರಾಜ್ಯಕ್ಕೆ ಬರುತ್ತೇನೆ. ಕೂಡಲೇ ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗುತ್ತದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಪಟ್ಟಿಗೆ ಸೂಚಿಸಿದ್ದೇನೆ- ಸುರ್ಜೇವಾಲಾ: ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ವಿಳಂಬ ಧೋರಣೆ ಅನುಸರಿಸದೆ ಮುಂದಿನ 15 ದಿನಗಳಲ್ಲಿ ಸಂಸತ್ ಚುನಾವಣೆಗೆ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಹೆಸರು ಸೂಚಿಸಿ, ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ನಡೆಸಲು ತಿಳಿಸಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿ ಜಾರಿ ಮಾಡಿ ಜನರಿಗೆ ತಲುಪಿಸಲು ನಿರಂತರವಾಗಿ ಗ್ಯಾರಂಟಿ ಯೋಜನೆಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಈ ಯೋಜನೆಗಳ ಜಾರಿಗೆ ಎಲ್ಲೇ ತೊಂದರೆ ಆದರೂ ಅದಕ್ಕೆ ಸಂಬಂಧಿಸಿದ ಸಚಿವರುಗಳು ಸಮಸ್ಯೆ ಬಗೆಹರಿಸಲಿದ್ದಾರೆ. ಇದು ಲೋಕಸಭೆ ಚುನಾವಣೆಗೆ ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆದಿದ್ದು ಸರಿಯಲ್ಲ: ಗಾಯಕ ಮುದ್ದುಕೃಷ್ಣ
25ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುವ ಭರವಸೆ: ಕರ್ನಾಟಕ ರಾಜ್ಯವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯ ಕೇಂದ್ರವಾಗಿದೆ. ಸಂಸತ್ ಚುನಾವಣೆಯಲ್ಲಿ ರಾಜ್ಯದ ಜನ 20ಕ್ಕೂ ಹೆಚ್ಚು ಸಂಸದರನ್ನು ಆಯ್ಕೆ ಮಾಡುವ ವಿಶ್ವಾಸ ನಮಗಿದೆ. ನಾವು 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮಿಸುವುದಾಗಿ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ನಮಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಜನರು ಸಂತೋಷವಾಗಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ನಮಗೆ ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.