ಮಹಾರಾಷ್ಟ್ರ ಸರ್ಕಾರವನ್ನು ಅಲುಗಾಡಿಸಿದ ಆಟೋರಾಜ!
ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಅವರು ಹತ್ತಕ್ಕೂ ಹೆಚ್ಚು ಸೇನಾ ಶಾಸಕರೊಂದಿಗೆ ಗುಜರಾತ್‌ಗೆ ಶಿಫ್ಟ್ ಆಗಿದ್ದಾರೆ. ಅದರೊಂದಿಗೆ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಜಾರಿಯಲ್ಲಿದ್ದು, ಮಹಾರಾಷ್ಟ್ರದ ಮಹಾವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಕುಸಿಯುವ ಸಾಧ್ಯತೆ ದಟ್ಟವಾಗಿ ಕಂಡಿದೆ.
ನವದೆಹಲಿ (ಜೂನ್ 21): ಕಳೆದ ಫೆಬ್ರವರಿ 9 ರಂದು ಶಿವಸೇನಾ (Shiv Sena) ನಾಯಕ ಏಕನಾಥ್ ಶಿಂಧೆ (Eknath Shinde ) 58ನೇ ವರ್ಷಕ್ಕೆ ಕಾಲಿಟ್ಟಿದ್ದರು. ಈ ವೇಳೆ ಇಡೀ ಥಾಣೆ (Thane ) ಯಾವ ರೀತಿ ಸಂಭ್ರಮಪಟ್ಟಿತ್ತೆಂದರೆ, ಕಣ್ಣು ಹಾಯಿಸಿದಲ್ಲೆಲ್ಲಾ ಏಕನಾಥ್ ಶಿಂಧೆ ಅವರ ಫೋಟೋಗಳೇ ರಾರಾಜಿಸುತ್ತಿದ್ದವು. ಅದರ ಕೆಳಗೆ ದಪ್ಪ ಅಕ್ಷರಗಳಲ್ಲಿ ಬರೆದಿದ್ದ ಇನ್ನೊಂದು ಸಾಲುಗಳು ಕಣ್ಣು ಕುಕ್ಕಿದ್ದವು. "ಭವಿಷ್ಯದ ಮುಖ್ಯಮಂತ್ರಿ'' ಎಂದು ಅದರಲ್ಲಿ ಬರೆಯಲಾಗಿತ್ತು. 2019ರ ಚುನಾವಣೆಯ ವೇಳೆಯಲ್ಲೂ ಥಾಣೆಯ ಶಿವಸೈನಿಕರು ಇಡೀ ನಗರದಲ್ಲಿ ಹಾಕಿದ್ದ ಪೋಸ್ಟರ್‌ನಲ್ಲಿ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬರೆದಿದ್ದರು.
ಎಂವಿಎಯ (Maha Vikas Aghadi ) ನಗರಾಭಿವೃದ್ಧಿ ಸಚಿವ (Urban Development Minister) ಏಕನಾಥ್ ಶಿಂಧೆ, 12ಕ್ಕೂ ಅಧಿಕ ಶಿವಸೇನಾ ನಾಯಕರೊಂದಿಗೆ ಗುಜರಾತ್‌ನ ಸೂರತ್‌ಗೆ (Gujarat’s Surat )ಶಿಫ್ಟ್ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದ ಬಳಿಕ, ಮಹಾರಾಷ್ಟ್ರ ರಾಜಕೀಯ (Maharashtra Politics) ವಲಯ ಇಂಥದ್ದೊಂದು ಬಂಡಾಯ ಖಂಡಿತಾ ನಿರೀಕ್ಷೆ ಮಾಡಿದ್ದೆವು ಎನ್ನುವ ಮಾತನ್ನಾಡುತ್ತಿದೆ.
ಇದೆಲ್ಲವೂ ಎಷ್ಟು ಆತುರಾತುರ ಹಾಗೂ ಗುಪ್ತವಾಗಿ ನಡೆಯಿತು ಎನ್ನುವುದನ್ನು ಹೇಳಬೇಕೆಂದರೆ, ಕೇವಲ ಕಳೆದವಾರವಷ್ಟೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಜೊತೆ ಏಕನಾಥ್ ಶಿಂಧೆ ಅಯೋಧ್ಯೆಗೆ ತೆರಳಿದ್ದರು. ಈ ವೇಳೆಯೂ ಒಂಚೂರು ಗುಟ್ಟುಬಿಟ್ಟುಕೊಟ್ಟಿರಲಿಲ್ಲ.
ಮಹಾರಾಷ್ಟ್ರದ ಎಂವಿಎ ಸರ್ಕಾರ - ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಇರುವ ಮೈತ್ರಿಕೂಟವಾಗಿದೆ. ಸರ್ಕಾರವು ಒಟ್ಟು 152 (ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 169) ಬಲವನ್ನು ಹೊಂದಿದೆ. ಶಿಂಧೆಯವರ ಬಂಡಾಯದ ಸುದ್ದಿ ತಿಳಿದ ನಂತರ, ಶಿವಸೇನೆ ಅವರನ್ನು ಮಹಾರಾಷ್ಟ್ರ ವಿಧಾನಸಭೆಯ ಸದನದ ನಾಯಕ ಸ್ಥಾನದಿಂದ ಮತ್ತು ಪಕ್ಷದ ಮುಖ್ಯ ಸಚೇತಕ ಸ್ಥಾನದಿಂದ ತೆಗೆದುಹಾಕಿದೆ.
ಬಂಡಾಯದ ಸುದ್ದಿ ಹೊರಬಿದ್ದ ಬಳಿಕ ನೀಡಿದ ಮೊದಲ ಪ್ರತಿಕ್ರಿಯೆಯನ್ನು ಏಕನಾಥ್ ಶಿಂಧೆ ಮರಾಠಿಯಲ್ಲಿ ಟ್ವೀಟ್ ಮಾಡಿದ್ದು, ತಾನು ಮತ್ತು ಅವರ ಬೆಂಬಲಿಗರು ಸೇನೆಯ ಸಂಸ್ಥಾಪಕರಾದ ಬಾಳ್ ಠಾಕ್ರೆ ಮತ್ತು ದಿವಂಗತ ಶಿವಸೇನಾ ಫೈರ್‌ಬ್ರಾಂಡ್ ಆನಂದ್ ದಿಘೆ ಅವರ "ಬೋಧನೆಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ" ಎಂದು ಹೇಳಿದ್ದಾರೆ. “ನಾವು ಶಿವಸೈನಿಕರು ಮತ್ತು ಬಾಳಾಸಾಹೇಬರು ನಮಗೆ ಹಿಂದುತ್ವವನ್ನು ಕಲಿಸಿದ್ದಾರೆ. ಅಧಿಕಾರಕ್ಕಾಗಿ, ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ನಮಗೆ ಕಲಿಸಿದ್ದನ್ನು ನಾವು ಮರೆಯೋದಿಲ್ಲ' ಎಂದು ಬರೆದುಕೊಂಡಿದ್ದಾರೆ.
ಆಟೋರಿಕ್ಷಾ ಡ್ರೈವರ್ ಆಗಿದ್ದ ಶಿಂಧೆ: ಆನಂದ್ ದಿಘೆ ಅವರ ಶಿಷ್ಯನಾಗಿದ್ದ ಏಕನಾಥ್ ಶಿಂಧೆ ಒಂದು ಕಾಲದಲ್ಲಿ ಆಟೋ ಡ್ರೈವರ್ ಆಗಿದ್ದವರು. 1980 ರ ದಶಕದಲ್ಲಿ ಥಾಣೆಯಲ್ಲಿ ಶಾಖಾ ಮುಖ್ಯಸ್ಥರಾಗಿದ್ದ ಏಕನಾಥ್ ಶಿಂಧೆ 2004 ರಲ್ಲಿ ಶಾಸಕರಾಗುವ ಮೊದಲು ಥಾಣೆ ಮುನ್ಸಿಪಲ್ ಕಾರ್ಪೊರೇಟರ್ ಆಗಿದ್ದರು. ಶಿಂಧೆ ಅವರು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ ಮತ್ತು ಮೂರು ವರ್ಷಗಳಿಂದ ನಾಗರಿಕ ಸಂಸ್ಥೆ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ. ಅವರು ನಾಲ್ಕು ವರ್ಷಗಳ ಕಾಲ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸದನದ ನಾಯಕರಾಗಿ ಸೇವೆ ಸಲ್ಲಿಸಿದರು.
"ಅಧಿಕಾರಕ್ಕಾಗಿ ಭಾಳಾ ಠಾಕ್ರೆ ತತ್ವಗಳಿಗೆ ಮೋಸ ಮಾಡುವುದಿಲ್ಲ": ಬಂಡಾಯ ನಾಯಕ ಏಕನಾಥ ಶಿಂಧೆ
2004 ರಿಂದ, ಅವರು ಸತತ ನಾಲ್ಕು ಚುನಾವಣೆಗಳನ್ನು ಗೆದ್ದಿದ್ದಾರೆ, ಅವರ ಮಗ ಶ್ರೀಕಾಂತ್ ಶಿಂಧೆ ಕಲ್ಯಾಣ್‌ನಿಂದ ಸೇನಾ ಸಂಸದರಾಗಿದ್ದಾರೆ. ಶಿವಸೇನೆಯ ಮೂಲಗಳ ಪ್ರಕಾರ, ಕೆಲವು ಸಮಯದಿಂದ ಪಕ್ಷದ ಹೈಕಮಾಂಡ್‌ನಿಂದ ಅಸಡ್ಡೆಗೆ ಒಳಗಾಗಿರುವ ಬಗ್ಗೆ ಶಿಂಧೆ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ತನಗಿಂತ ರಾಜಕೀಯದಲ್ಲಿ ಭಾರೀ ಕಿರಿಯರಾದ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹಾಗೂ ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್, ಪಕ್ಷದ ಹಾಗೂ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದ ಬಳಿಕ ಇನ್ನಷ್ಟು ಕುಗ್ಗಿಹೋಗಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ, ಪತನದ ಅಂಚಿಗೆ ಉದ್ಧವ್ ಠಾಕ್ರೆ ಸರ್ಕಾರ?
ಶಿಂಧೆ ಅವರು ಮುಂಬೈನ ದೊಡ್ಡ ಉಪನಗರ ಮತ್ತು ಪಕ್ಷದ ಭದ್ರಕೋಟೆಯಾದ ಥಾಣೆಯಲ್ಲಿ ಶಿವಸೇನೆಯ ಅತ್ಯಂತ ಹಿರಿಯ ನಾಯಕರಾಗಿದ್ದಾರೆ. 2014 ರಲ್ಲಿ, ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಪಕ್ಷಗಳು ಅಂತಿಮವಾಗಿ ಮತ್ತೆ ಒಗ್ಗೂಡುವ ಮೊದಲು ಅವರನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಯಿತು. ಅವರು ಸರ್ಕಾರ ರಚಿಸಿದ ನಂತರ ಅವರು ಸಚಿವರಾದರು. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವು ತಯಾರಿ ನಡೆಸುತ್ತಿರುವಾಗ ಬಂಡಾಯ ಎದ್ದಿದೆ. ಇದು 2024 ರ ವಿಧಾನಸಭಾ ಚುನಾವಣೆಗೆ ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿದೆ.