ಗುದ್ದಲಿ ಪೂಜೆಗೆ ಜೆಡಿಎಸ್-ಬಿಜೆಪಿ ಗುದ್ದಾಟ: ಸಿಪಿ ಯೋಗೇಶ್ವರ್ ಕಾರಿಗೆ ಕಲ್ಲು, ಮೊಟ್ಟೆ ಎಸೆತ
CP Yogeshwar: ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಾರಿಗೆ ಜೆಡಿಎಸ್ ಕಾರ್ಯಕರ್ತರು ಕಲ್ಲು, ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದಾರೆ.
ರಾಮನಗರ (ಅ. 01): ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿರುವ 50 ಕೋಟಿ ವಿಶೇಷ ಅನುದಾನದ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ (CP Yogeshwar) ಕಾರಿಗೆ (Car) ಜೆಡಿಎಸ್ (JDS) ಕಾರ್ಯಕರ್ತರು ಕಲ್ಲು, ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಚನ್ನಪಟ್ಟಣ ತಾಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭೈರಾಪಟ್ಟಣ ಗ್ರಾಮದಲ್ಲಿ ಪೂಜೆ ನೆರವೇರಿಸಿ ಹೋಗುತ್ತಿದ್ದ ಸಿಪಿವೈ ಕಾರಿಗೆ ಕಲ್ಲು ತೂರಾಟ ನಡೆಸಿ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಸಚಿವ ಅಶ್ವಥ್ ನಾರಾಯಣ ಅನುಪಸ್ಥಿತಿಯಲ್ಲಿ ಎಂಎಲ್‌ಸಿ ಸಿಪಿ ಯೋಗೆಶ್ವರ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಸರ್ಕಾರ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಕೆಆರ್‌ಡಿಸಿಎಲ್‌ನಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 121 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಸಿಪಿ ಯೋಗೆಶ್ವರ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಸಿಎಂ ಬೊಮ್ಮಾಯಿ ಖಂಡನೆ: ಇನ್ನು ಸಿಪಿವೈ ಕಾರಿನ ಮೇಲೆ ಕಲ್ಲು ಹಾಗು ಮೊಟ್ಟೆ ತೂರಾಟ ಪ್ರಕರಣವನ್ನು ಸಿಎಂ ಬಸವಾರಾಜ ಬೊಮ್ಮಾಯಿ (CM Basvaraj Bommai) ಖಂಡಿಸಿದ್ದಾರೆ. "ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಕಾರಿನಮೇಲೆ ಕಲ್ಲು ಹಾಗು ಮೊಟ್ಟೆ ಎಸೆದಿರುವುದು ಸರಿಯಲ್ಲ. ಈ ದಾಳಿಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ವಿಷಯಗಳು ಏನೇ ಇರಲಿ ಅದನ್ನ ಕಾನೂನಾತ್ಮಕವಾಗಿ ಬಹಹರಿಸಿಕೊಳ್ಳಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು" ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಗುಂಡಾಗಳನ್ನು ಕರೆಸಿ ದಾಂಧಲೆ: ಇನ್ನು ಇದೇ ವಿಚಾರವಾಗಿ ಚನ್ನಪಟ್ಟಣದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್ " ಇವತ್ತು ಆದಂತಹ ಘಟನೆಗಳನ್ನು ನೋಡಿದ್ರೆ ಕುಮಾರಸ್ವಾಮಿ ಹತಾಶರಾದ ರೀತಿ ಇದೆ, ತಾಲ್ಲೂಕಿನ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಕುಮಾರಸ್ವಾಮಿ ಇಷ್ಟೆಲ್ಲಾ ತಲೆಕೆಡಿಸಿಕೊಳ್ಳಿತ್ತಿರಲಿಲ್ಲ, ಕುಮಾರಸ್ವಾಮಿ ಅವರಿಗೆ ಮರ್ಮಾಘಾತವಾಗಿದೆ, ಜೆಡಿಎಸ್ ನ ಮುಖಂಡರು ಪಕ್ಷಬಿಟ್ಟು ಹೊರ ಬರ್ತಿದ್ದಾರೆ. ತಂಡೋಪತಂಡವಾಗಿ ಜೆಡಿಎಸ್‌ನಿಂದ ಹೊರಗಡೆ ಬರ್ತಿದ್ದಾರೆ, ಕುಮಾರಸ್ವಾಮಿ ಅವರು ಈ ವಿಷಯವನ್ನು ಮರೆಮಾಚಲು ಈ ರೀತಿ ಮಾಡಿದ್ದಾರೆ, ಬೇರೆ ಬೇರೆ ತಾಲ್ಲೂಕಿನ ಜೆಡಿಎಸ್ ನ ಗುಂಡಾಗಳನ್ನು ಕರೆಸಿ ದಾಂಧಲೆ ಮಾಡಿದ್ದಾರೆ" ಎಂದರು.
"ತಾಲ್ಲೂಕಿನಲ್ಲಿ ಹಲವು ಸಮಸ್ಯೆಗಳಿದ್ದು, ರೈತರು ನನ್ನ ಬಳಿ ಹೇಳಿಕೊಂಡಿದ್ದಾರೆ. ಬೆಂಗಳೂರಿನ ನರಸಿಂಹಮೂರ್ತಿ ಎಂಬಾತ ನಾಲ್ಕೈದು ಗೂಂಡಾಗಳನ್ನು ಕರೆಸಿ ಕಲ್ಲು ಎಸೆದಿದ್ದಾರೆ. ಇದು ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ, ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಇಲ್ಲಿನ ಜನರು ಬೆಂಬಲ ಕೊಟ್ಟಿದ್ದರು. ನಾಲ್ಕೈದು ಜನ ಪ್ರಮುಖ ಜೆಡಿಎಸ್ ನ ಮುಖಂಡರು ಇವತ್ತು ಪ್ರತಿಭಟನೆ ಮಾಡಿದ್ರು, ಕುಮಾರಸ್ವಾಮಿ ಅವರ ಹತಾಶ ಮನೋಭಾವನೆಯಿಂದ ಇಷ್ಟೆಲ್ಲಾ ಆಗಿದೆ ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಿದ್ದಾರೆ" ಎಂದು ಸಿಪಿವೈ ಕಿಡಿಕಾರಿದರು.
ರಾಮನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಅಗತ್ಯ: ಎಚ್.ಡಿ.ಕುಮಾರಸ್ವಾಮಿ
ನಾಲ್ಕೈದು ಚೇಲಾಗಳನ್ನು ಬಿಟ್ಟರೆ ಬೇರೆ ಯಾರಿಲ್ಲ: ಕುಮಾರಸ್ವಾಮಿ ಶಾಸಕರಾದ ಮೇಲೆ ಯಾವತ್ತು ಶಿಷ್ಟಾಚಾರ ಪಾಲಿಸಿದ್ದಾರೆ. ಕುಮಾರಸ್ವಾಮಿ ಶಾಸಕರಾದ ಮೇಲೆ ಯಾವುದೇ ನಾಡಹಬ್ಬಗಳಿಗೂ ಇಲ್ಲಿ ಭಾಗವಹಿಸಲಿಲ್ಲ, ಕುಮಾರಸ್ವಾಮಿ ಅವರಿಗೆ ನಾಲ್ಕೈದು ಚೇಲಾಗಳನ್ನು ಬಿಟ್ಟರೆ ಬೇರೆ ಯಾರು ಇಲ್ಲ, ತಾಲ್ಲೂಕಿನಲ್ಲಿ ಜೆಡಿಎಸ್ ದಿನೇ ದಿನೇ ವೀಕ್ ಆಗ್ತಿದೆ, ಇವತ್ತಿನ ಘಟನೆಗೆ ಕುಮಾರಸ್ವಾಮಿ ಅವರ ಪ್ರಚೋದನೆಯೇ ಕಾರಣ, ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ನಾನು ಸಿಎಂ ಬಳಿ ಮನವಿ ಮಾಡಿ ಅನುದಾನ ತಂದಿದ್ದೇನೆ" ಎಂದು ಸಿಪಿ ಯೋಗೆಶ್ವರ್ ಹೇಳಿದರು.
ಕುಮಾರಸ್ವಾಮಿ ಓರ್ವ ಬ್ಲಾಕ್ ಮೇಲರ್: ಗೂಂಡಾ ಸಂಸ್ಕೃತಿಗೆ ಕುಮಾರಸ್ವಾಮಿ ಮುನ್ನುಡಿ ಬರೆದಿದ್ದಾರೆ ಎಂದ ಸಿಪಿವೈ ಕುಮಾರಸ್ವಾಮಿ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. "ತಾಲ್ಲೂಕಿನ ಜನರು ಕುಮಾರಸ್ವಾಮಿ ಅವರ ವಿರುದ್ದ ಸಿಟ್ಟಿಗೆದ್ದಿದ್ದಾರೆ. ಕುಮಾರಸ್ವಾಮಿ ಓರ್ವ ಬ್ಲಾಕ್ ಮೇಲರ್, ನಮ್ಮವರು ಕೂಡ ಕೆಲವರು ಇವರಿಗೆ ಹೆದರುತ್ತಾರೆ. ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ನಾವು ಹೋರಾಟ ಮಾಡಲೆಬೇಕು" ಎಂದರು
ಇದು ಬಂಡು ಬಿದ್ದ ಸರ್ಕಾರ: ಕುಮಾರಸ್ವಾಮಿ ವಾಗ್ದಾಳಿ
ಪ್ರತಿಷ್ಟೆಗೆ ಬಿದ್ರಾ ಸಿಪಿ ಯೋಗೆಶ್ವರ್?: ಇನ್ನು ಇಂದಿನ ಕಾರ್ಯಕ್ರಮಗಳನ್ನು ಮುಂದೂಡಿರುವ ಬಗ್ಗೆ ಮಾಹಿತಿ ಇದ್ದರೂ ಸಿಪಿವೈ ಪೂಜೆ ನೆರವೇರಿಸಿದ್ದಾರೆ ಎನ್ನಲಾಗಿದೆ. ಇಂದಿನ ಎಲ್ಲಾ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮಗಳನ್ನು ಮುಂದೂಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆದರೆ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ಸಹಕಾರದೊಂದಿಗೆ ಬೈರಾಪಟ್ಟಣ, ಅಕ್ಕೂರು ಗ್ರಾಮಗಳಲ್ಲಿ ಸಿಪಿವೈ ಪೂಜೆ ನೆರವೇರಿಸಿದ್ದಾರೆ. ಇದರಿಂದ ಜೆಡಿಎಸ್ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ.