ಇದು ಬಂಡು ಬಿದ್ದ ಸರ್ಕಾರ: ಕುಮಾರಸ್ವಾಮಿ ವಾಗ್ದಾಳಿ

ಬಿಎಂಎಸ್‌ ಹಗರಣದ ದಾಖಲೆ ಸಲ್ಲಿಸಿದರೂ ಮಾತನಾಡದ ಸಚಿವರು: ಮಾಜಿ ಸಿಎಂ ಎಚ್‌ಡಿಕೆ 

Former CM HD Kumaraswamy Slams Karnataka BJP Government grg

ಚನ್ನಪಟ್ಟಣ(ಸೆ.29):  ಬಿಎಂಎಸ್‌ ಟ್ರಸ್ಟ್‌ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಿದ್ದು, ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರೂ, ಸದನದಲ್ಲಿ ಮುಖ್ಯಮಂತ್ರಿಗಳ ಸಮೇತ ಎಲ್ಲ ಮಂತ್ರಿಗಳು ತಲೆ ಬಗ್ಗಿಸಿಕೊಂಡು ಕೂತಿದ್ದರು. ಇದು ಬಂಡು ಬಿದ್ದಿರುವ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಎಸ್‌ ಟ್ರಸ್ಟ್‌ ವಿಚಾರದಲ್ಲಿ ಸಚಿವ ಅಶ್ವಥ್‌ ನಾರಾಯಣ ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಸದನದ ಮುಂದೆ ಇಟ್ಟಿದ್ದೇನೆ. ನಾನು ದಾಖಲೆಗಳನ್ನು ಪ್ರದರ್ಶಿಸಿದಾಗ ಮುಖ್ಯಮಂತ್ರಿಗಳ ಸಮೇತ ಯಾರು ಮಾತನಾಡಲಿಲ್ಲ. ಅಶ್ವತ್ಥ ನಾರಾಯಣ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ. ನೈತಿಕತೆ ಇಲ್ಲದ ಅವರೆಲ್ಲ ತಲೆ ತಗ್ಗಿಸಿಕೊಂಡು ಕೂತಿದ್ದರು ಎಂದು ಕಿಡಿಕಾರಿದರು.

ಪಬ್ಲಿಕ್‌ ಆಸ್ತಿ ಅನ್ಯರಿಗೆ ಪರಭಾರೆ:

ಪಗಡೆ ಆಟದಲ್ಲಿ ಪಣ ಇಟ್ಟು ಧರ್ಮರಾಯ ಎಲ್ಲವನ್ನು ಸೋತ ಸಂದರ್ಭದಲ್ಲಿ ಭೀಷ್ಮ, ದ್ರೋಣಾಚಾರ್ಯ ಸೇರಿದಂತೆ ಎಲ್ಲರೂ ಮೂಕವಿಸ್ಮಿತವಾಗಿ ಕೂತಿದ್ದರಲ್ಲ. ಅದೇ ಪರಿಸ್ಥಿತಿ ನಾನು ದಾಖಲೆ ಬಿಡುಗಡೆ ಮಾಡಿದ್ದಾಗ ಸದನದಲ್ಲಿ ಕಂಡಿತ್ತು. ಪಬ್ಲಿಕ್‌ ಟ್ರಸ್ಟ್‌ ಅನ್ನು ಸರ್ಕಾರದ ಆಸ್ತಿಯನ್ನು ಯಾರೊ ಒಬ್ಬರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ. ಈ ವಿಚಾರದಲ್ಲಿ ಅದೆಷ್ಟುಕೋಟಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ ತನಿಖೆ ಮಾಡಿದರೆ ಗೊತ್ತಾಗುತ್ತದೆ. ನಾನು ಇಟ್ಟಂತಹ ಯಾವುದೇ ದಾಖಲೆಗಳಿಗೂ ಸರ್ಕಾರ ಸಮಜಾಯಿಷಿ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಭಾರತ್‌ ಜೋಡೋ ಯಾತ್ರೆ ವೇಳೆ ಡಿಕೆಶಿಗೆ ಸಿಬಿಐ ಶಾಕ್‌..!

ಏನು ಉತ್ತರ ಕೊಟ್ಟರು:

ಬಿಎಂಎಸ್‌ ಟ್ರಸ್ಟ್‌ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದಕ್ಕೂ ಹೆದರುವುದಿಲ್ಲ. ಸದನದಲ್ಲಿ ಸಮರ್ಥವಾಗಿ ಉತ್ತರ ಕೊಟ್ಟಿದ್ದೇನೆ ಎಂಬ ಅಶ್ವಥ್‌ ನಾರಾಯಣ್‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಅವರು ಸದನದಲ್ಲಿ ಏನು ಉತ್ತರ ಕೊಟ್ಟರು. ಈ ವಿಚಾರಕ್ಕೆ ಮುಖ್ಯಮಂತ್ರಿಗಳಿಂದ ಏನಾದರೂ ಉತ್ತರ ಬಂತಾ ಎಂದು ಮರುಪ್ರಶ್ನಿಸಿದರು.

ಪಿಎಂಗೆ ದಾಖಲೆ ಕಳಿಸ್ತೇನೆ:

ಸರ್ಕಾರ ಆಸ್ತಿ ಖಾಸಗಿ ವ್ಯಕ್ತಿಗೆ ಹೋಗುತ್ತಿದೆ. ಕೋಟ್ಯಂತರ ರು. ಲೂಟಿಯಾಗಿದೆ. ಈ ವಿಚಾರವನ್ನು ನಾನು ಅಷ್ಟುಸುಲಭವಾಗಿ ಇಲ್ಲಿಗೆ ಬಿಡುವುದಿಲ್ಲ. ಕಾನೂನಾತ್ಮಕವಾಗಿ ಏನು ಕ್ರಮ ತೆಗದುಕೊಳ್ಳಬೇಕೋ ತೆಗೆದುಕೊಳ್ಳುತ್ತೇನೆ. ಪ್ರಧಾನ ಮಂತ್ರಿಗಳು ಹೋದಲ್ಲಿ ಬಂದಲ್ಲಿ ಭ್ರಷ್ಟಾಚಾರ ನಿಲ್ಲಿಸ್ತೇನೆ ಅಂತ ಹೇಳುತ್ತಾರಲ್ಲ. ಈ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅವರಿಗೆ ಈಗ ದಾಖಲೆ ಕಳುಹಿಸುತ್ತೇನೆ. ಪ್ರಧಾನಿಗಳು ಈ ವಿಚಾರಕ್ಕೆ ಏನು ಉತ್ತರ ಕೊಡುತ್ತಾರೋ ನೋಡೋಣ ಎಂದರು.

ಕುಟುಂಬ ರಾಜ​ಕಾ​ರಣ, ಗುಂಪು​ಗಾ​ರಿಕೆಯಿಂದ ಬೇಸತ್ತು ಜೆಡಿ​ಎಸ್‌ ತೊರೆ​ದೆ: ಸಿಂಗ​ರಾಜ​ಪುರ ರಾಜಣ್ಣ

ಮನೆ ಬಿಟ್ಟು ಕೊಡದ ಕಾರಣ ವೆಸ್ಟ್‌ಎಂಡ್‌ನಲ್ಲಿದ್ದೆ: ಸಿಎಂ ಅಗಿದ್ದಾಗ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಕಾಲ ಕಳೆದ ಕುಮಾರಸ್ವಾಮಿಗೆ ಈಗ ಕ್ಷೇತ್ರದ ನೆನಪಾಗಿದೆ ಎಂಬ ಡಿ.ಕೆ.ಸುರೇಶ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಿಎಂ ಅಗುವುದಕ್ಕಿಂತ ಮುಂಚೆಯೂ ಸಿಎಂ ಆದ ಮೇಲು ಸಹ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್‌ನವರು ಮನೆ ಬಿಟ್ಟುಕೊಡದ ಕಾರಣ ಅಲ್ಲಿದ್ದೆ. ಮನೆ ಇಲ್ಲದ ನಾನು ಬೀದಿಯಲ್ಲಿ ನಿಂತು ಕೆಲಸ ಮಾಡಬೇಕಿತ್ತೆ? ಇವರ ರೀತಿ ಮನೆ, ತಲೆ ಹೊಡೆದು ನಾನು ಬದುಕಿಲ್ಲ. ಇವರಿಂದ ನಾನು ಬದುಕುವುದು ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.

ಅಡಚಣೆಗಳಿಂದ ಕಾಮಗಾರಿಗಳ ವಿಳಂಬ:

ಕೆಲವು ಅಡಚಣೆಗಳಿಂದ ಚನ್ನಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿದೆ. ಕಣ್ವ ರಸ್ತೆಯ ಅಭಿವೃದ್ಧಿಗೆ 38 ಕೋಟಿ ಮಂಜೂರಾಗಿದ್ದರೂ ಕಾಮಗಾರಿ ವಿಳಂಬವಾಗಿದೆ. ಹೊರಜಿಲ್ಲೆಯವರು ಮಾಡಿರುವ ಕೆಲಸಗಳನ್ನು ಮರೆಮಾಚಿ ಇಲ್ಲಿಯ ಇಬ್ಬರು ಗುತ್ತಿಗೆದಾರರಿಗೆ ಕೆಲಸ ನೀಡಿರುವುದನ್ನು ದೊಡ್ಡದು ಮಾಡಲಾಗುತ್ತಿದೆ. ಯಾರು ಎಷ್ಟುಕೆಲಸ ಮಾಡಿದ್ದಾರೆ ಎಂಬುದನ್ನು ಬೇಕಿದ್ದರೆ ದಾಖಲೆ ತೆಗೆದು ನೋಡಲಿ. ಅದು ಬಿಟ್ಟು ಹೆಸರು ಕೆಡಿಸಲು ಅಪಪ್ರಚಾರದ ತಂತ್ರ ನಡೆಸುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ಹೆಸರೇಳದೇ ಪರೋಕ್ಷವಾಗಿ ಟಾಂಗ್‌ ನೀಡಿದರು.

ಮಾಗಡಿ ಶಾಸಕ ಎ.ಮಂಜುನಾಥ್‌, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ನಗರಸಭೆ ಅಧ್ಯಕ್ಷ ಪ್ರಶಾಂತ್‌, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌, ಜೆಡಿಎಸ್‌ ಮುಖಂಡ ಎಂ.ಸಿ.ಕರಿಯಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್‌ ದೇವರಾಜು, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ದೇವರಾಜು, ನಗರಸಭೆ ಸದಸ್ಯ ನಾಗೇಶ್‌ ಮತ್ತಿತರರು ಇದ್ದರು.
 

Latest Videos
Follow Us:
Download App:
  • android
  • ios