ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗವು ನಡೆಸಲು ಮುಂದಾಗಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕಾನೂನು ಇಲಾಖೆಗೆ ಸೂಚಿಸಲು ಗುರುವಾರ ನಡೆದ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

ಬೆಂಗಳೂರು : ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗವು ನಡೆಸಲು ಮುಂದಾಗಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕಾನೂನು ಇಲಾಖೆಗೆ ಸೂಚಿಸಲು ಗುರುವಾರ ನಡೆದ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

2002ರ ಬಳಿಕ ಮೊದಲ ಬಾರಿಗೆ ಎಸ್ಐಆರ್‌

ರಾಜ್ಯದಲ್ಲಿ 2002ರ ಬಳಿಕ ಮೊದಲ ಬಾರಿಗೆ ಎಸ್ಐಆರ್‌ ನಡೆಸಲು ಚುನಾವಣಾ ಆಯೋಗವು ಮುಂದಾಗಿದೆ.

ಆದರೆ, ರಾಜ್ಯ ಸರ್ಕಾರವು ರಾಜ್ಯ ಚುನಾವಣಾ ಆಯೋಗದ ಮೂಲಕ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿದೆ. ಜತೆಗೆ ಪ್ರತಿ ವರ್ಷವು ವಿಶೇಷ ಸಮಗ್ರ ಷ್ಕರಣೆ (ಎಸ್‌ಎಸ್‌ಆರ್) ನಡೆಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಎಸ್ಐಆರ್‌ ಆಗತ್ಯವಿಲ್ಲ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಗಿದೆ.

ಹೀಗಾಗಿ ರಾಜ್ಯದಲ್ಲಿ ಎಸ್‌ಐಆರ್‌ ಅನ್ನು ತಿರಸ್ಕರಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ್ದು, ಇದರ ಸಾಧಕ-ಬಾಧಕಗಳ ಬಗ್ಗೆ ಹಾಗೂ ಕಾನೂನಿನಲ್ಲಿ ಇರುವ ಅವಕಾಶಗಳ ಬಗ್ಗೆ ಅಧ್ಯಯನ ನಡೆಸಲು ಕಾನೂನು ಇಲಾಖೆಗೆ ಜವಾಬ್ದಾರಿ ವಹಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್‌, ಎಸ್‌ಐಆರ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ. ಎಸ್ಐಆರ್‌ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಹೀಗಾಗಿ ಕಾನೂನು ಇಲಾಖೆ ಎಲ್ಲಾ ಸಾಧಕ-ಬಾಧಕದ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡಲಿದೆ. ಬಳಿಕ ಸಂಪುಟ ಸಭೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.

ಎಸ್ಐಆರ್‌ ಬಗ್ಗೆ ಗಂಭೀರ ಚರ್ಚೆ:

ಮೂಲಗಳ ಪ್ರಕಾರ ಸಚಿವ ಸಂಪುಟ ಸಭೆಯಲ್ಲಿ ಎಸ್‌ಐಆರ್‌ ವಿರೋಧಿಸಿ ಗಂಭೀರ ಚರ್ಚೆ ನಡೆಸಿದೆ. ವಿಶೇಷ ಸಮಗ್ರ ಪರಿಷ್ಕರಣೆಯು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತೆಗೆದು ಹಾಕುವ ಎರಡೂ ಪ್ರಕ್ರಿಯೆ ಹೊಂದಿರುವುದಿಲ್ಲ.

ಬದಲಿಗೆ ಪಟ್ಟಿಯಿಂದ ತೆಗೆಯುವುದಕ್ಕೆ ಮಾತ್ರ ಆದ್ಯತೆ ನೀಡಲಿದೆ. ಇದರಿಂದ ಅಲೆಮಾರಿ, ಸ್ವಂತ ಸೂರು ಇಲ್ಲದ ಮತದಾರರು ಪಟ್ಟಿಯಿಂದ ಹೊರಗೆ ಉಳಿಯಲಿದ್ದಾರೆ ಎಂಬ ಆತಂಕವನ್ನು ಸಂಪುಟ ಸಭೆ ವ್ಯಕ್ತಪಡಿಸಿದೆ.

ಜತೆಗೆ ಸುಪ್ರೀಂಕೋರ್ಟ್ ಎಸ್ಐಆರ್‌ ತಿರಸ್ಕರಿಸುವ ಹಕ್ಕು ರಾಜ್ಯಕ್ಕಿಲ್ಲ ಎಂದಿರುವ ಬಗ್ಗೆಯೂ ಚರ್ಚೆಯಾಗಿದೆ. ಆದರೆ ಸುಪ್ರೀಂ ಕೋರ್ಟ್‌ ಈ ಮಾತನ್ನು ಬೇರೆ ರಾಜ್ಯಗಳಿಗೆ ಹೇಳುವಂತೆ ಕರ್ನಾಟಕಕ್ಕೆ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪ್ರತಿ ವರ್ಷವೂ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿದೆ.

ಜತೆಗೆ ರಾಜ್ಯವು ಯಾವುದೇ ವಿದೇಶದ ಜತೆ ಗಡಿ ಹಂಚಿಕೊಂಡಿಲ್ಲ. ಹೀಗಾಗಿ ರಾಜ್ಯವು ಎಸ್ಐಆರ್‌ನ್ನು ತಿರಸ್ಕರಿಸಲು ಅವಕಾಶವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆಗೆ ವರದಿ ನೀಡಲು ತಿಳಿಸಿರುವುದಾಗಿ ಹೇಳಲಾಗಿದೆ.

ಮ್ಯಾಪಿಂಗ್ ಶೇ.62.59 ರಷ್ಟು ಪೂರ್ಣ:

ಸಚಿವ ಸಂಪುಟ ಸಭೆಯಲ್ಲಿ ಅಂಕಿ-ಅಂಶಗಳ ಬಗ್ಗೆ ಚರ್ಚೆಯಾಗಿದ್ದು, 2002ರಲ್ಲಿ ಕರ್ನಾಟಕದಲ್ಲಿ ಎಸ್ಐಆರ್‌ ನಡೆಸಲಾಗಿತ್ತು. ಆಗ 3,55,92,524 ಮತದಾರರು ಇದ್ದರು.

2025ರ ವೇಳೆಗೆ ರಾಜ್ಯದಲ್ಲಿ 5,57,36,561 ಮಂದಿ ಮತದಾರರು ಇದ್ದಾರೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗವು ಮ್ಯಾಪಿಂಗ್‌ ಶುರು ಮಾಡಿದೆ.

ಜ.28ರ ವೇಳೆಗೆ 40 ವರ್ಷ ಮೇಲ್ಪಟ್ಟ 3.12 ಕೋಟಿ ಮತದಾರರ ಪೈಕಿ ಶೇ.62.59 ರಷ್ಟು ಮತದಾರರ ಮ್ಯಾಪಿಂಗ್‌ ಪೂರ್ಣಗೊಂಡಿದೆ.

ಮ್ಯಾಪಿಂಗ್‌ ಪೂರ್ಣಗೊಂಡ ಬಳಿಕ ಬಿಎಲ್‌ಒಗಳು ಪ್ರತಿ ಮನೆಗೆ ಕನಿಷ್ಠ ಮೂರು ಬಾರಿಗೆ ಭೇಟಿ ನೀಡಿ ನಮೂನೆ ವಿತರಿಸಿ ಭರ್ತಿ ಮಾಡಲು ಅವಕಾಶ ನೀಡುತ್ತಾರೆ. ಭರ್ತಿ ಮಾಡಿದ ನಮೂನೆ ಸಂಗ್ರಹಿಸಿ ಮಾಹಿತಿ ಆಧಾರದ ಮೇಲೆ ಚುನಾವಣಾ ಅಧಿಕಾರಿಘಳು ಕರಡು ಮತದಾರರ ಪಟ್ಟಿ ಪ್ರಕಟಿಸುತ್ತಾರೆ ಎಂದು ತಿಳಿದುಬಂದಿದೆ.