ಎಚ್‌ಡಿಕೆ ಯಾವತ್ತು ಸತ್ಯ ಹೇಳಿದ್ದಾರೆ, ಬರಿ ಸುಳ್ಳೆ: ಸಿಎಂ ಸಿದ್ದರಾಮಯ್ಯ ಲೇವಡಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಾವತ್ತು ಸತ್ಯ ಹೇಳಿದ್ದಾರೆ. ಬರಿ ಸುಳ್ಳಿನ ಹೇಳಿಕೆ ಕೊಡುತ್ತಾರೆ. ಅದು ಬಿಟ್ಟರೆ ಅವರಿಗೆ ಬೇರೆ ಕೆಲಸವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.
ಹಾಸನ (ನ.09): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯಾವತ್ತು ಸತ್ಯ ಹೇಳಿದ್ದಾರೆ. ಬರಿ ಸುಳ್ಳಿನ ಹೇಳಿಕೆ ಕೊಡುತ್ತಾರೆ. ಅದು ಬಿಟ್ಟರೆ ಅವರಿಗೆ ಬೇರೆ ಕೆಲಸವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು. ನಗರದ ಪ್ರವಾಸಿಮಂದಿರದಲ್ಲಿ ಹಾಲಿ ರಾಜ್ಯ ಸರ್ಕಾರ ಕೇವಲ ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯೋ ಕೆಲಸ ಮಾಡುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ? ಎಲ್ಲ ಬರಿ ಸುಳ್ಳೆ ಹೇಳೋದು! ಅದು ಬಿಟ್ರೆ ಅವರಿಗೆ ಬೇರೆ ಕೆಲಸ ಇಲ್ಲ.
ಬರದ ವಿಚಾರದಲ್ಲಿ ನಾವು ಕೇಂದ್ರದ ಮೇಲೆ ಬೆಟ್ಟು ಮಾಡುತ್ತಿಲ್ಲ. ದುಡ್ಡು ಕೇಳುತ್ತಿದ್ದೇವೆ, ಕೇಳಬೇಕಾ ಬೇಡ್ವಾ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಕೇಂದ್ರ ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಬರ ಬಂದಾಗ ಅದರ ನಿರ್ವಹಣೆಯಲ್ಲಿ ಕೇಂದ್ರದ ಜವಾಬ್ದಾರಿಯೂ ಇರುತ್ತದೆ. ಕೇಂದ್ರಕ್ಕೆ ತೆರಿಗೆ ಮೂಲಕ ಹಣ ಕೊಡೋದು ರಾಜ್ಯಗಳು. ನಮಗೆ ಸಂಕಷ್ಟ ಎದುರಾದಾಗ ನೆರವಾಗಬೇಕಾಗಿದ್ದು ಕೇಂದ್ರದ ಜವಾಬ್ದಾರಿ’ ಎಂದು ಹೇಳಿದರು. ಕಾಂಗ್ರೆಸ್ ಶೇಮ್ ಲೆಸ್ ಪಾರ್ಟಿ ಎಂಬ ವಿಚಾರವಾಗಿ ಮಾತನಾಡಿ, ‘ಯತ್ನಾಳ್ ಹಿಮ್ ಸೆಲ್ಫ್ ಈಸ್ ಎ ಶೇಮ್ ಲೆಸ್’ ಎಂದು ಲೇವಡಿ ಮಾಡಿದರು.
ಸಿಎಂ ಸೂಚನೆ ಹಿನ್ನೆಲೆಯಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭ: ಮೂರು ಆನೆಗಳು ಭಾಗಿ!
ಅವರಿಗೆ ನೋಟಿಸ್ ಕೊಟ್ಟವರು ಯಾರು? ಯತ್ನಾಳ್ ಏನು ಬಹಳಾ ಸದ್ಗುಣ ಇರೋ ವ್ಯಕ್ತೀನಾ! ಬಿಜೆಪಿಯವರೇ ನಡವಳಿಕೆ ಸರಿ ಇಲ್ಲ ಎಂದು ತಿರುಗೇಟು ನೀಡಿದರು. ಮೌಢ್ಯ ವಿರೋಧಿ ಕಾನೂನು ಬಗ್ಗೆ ಪ್ರತಿಕ್ರಿಯಿಸಿ, ‘ಹಾಸನಾಂಬೆ ದರ್ಶನವನ್ನು ಹಿಂದಿನಿಂದಲೂ ಆಚರಣೆ ಮಾಡಿದ್ದಾರೆ. ನಾನು ಮೌಢ್ಯಗಳನ್ನು ಆಚರಿಸುವುದು ರೂಢಿಯಿಲ್ಲ. ದೇವರ ಬಗ್ಗೆ ನನಗೆ ನಂಬಿಕೆ ಇದೆ. ಬಹುತೇಕ ಜನರೂ ದೇವರನ್ನು ನಂಬುತ್ತಾರೆ. ೯೯.೯೯% ಜನ ದೇವರನ್ನ ನಂಬುತ್ತಾರೆ’ ಎಂದರು. ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ವಿಚಾರವಾಗಿ ಮಾತನಾಡಿ, ‘ನಾವು ಯಾರನ್ನೂ ಕರೆದುಕೊಂಡು ಬರೋದಿಲ್ಲ.
ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಬಂದರೆ ಬೇಡ ಎನ್ನುವುದಿಲ್ಲ. ರಾಜ್ಯದಲ್ಲಿ ವಿದ್ಯುತ್ ಸ್ಥಿತಿ ಉತ್ತಮವಾಗುತ್ತಿದೆ. ೭ ಗಂಟೆ ತ್ರೀ ಫೇಸ್ ಕರೆಂಟ್ ನೀಡಲು ನೆನ್ನೆ ತೀರ್ಮಾನಿಸಲಾಗಿದೆ. ಲೋಕಸಭಾ ಚುನಾವಣೆಗೆ ಎಲ್ಲರನ್ನೂ ಒಟ್ಟುಗೂಡಿ ಚರ್ಚಿಸಿ ಅಭ್ಯರ್ಥಿ ಹಾಕುತ್ತೇವೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಉತ್ತಮವಾಗಿ ಆಗಲಿ ಎಂದು ಹಾಸನಾಂಬೆಗೂ ಪ್ರಾರ್ಥನೆ ಮಾಡಲಾಗಿದೆ’ ಎಂದು ಹೇಳಿದರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ, ಶಾಸಕ ಕೆ.ಎಂ. ಶಿವಲಿಂಗೇಗೌಡ, ವಿಧಾನಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಹೆಚ್.ಕೆ. ಮಹೇಶ್, ಬಿ. ಶಿವರಾಂ, ಗೌಡಗೆರೆ ಪ್ರಕಾಶ್, ರಘು ಇದ್ದರು.
ಬರದ ಬರೆಯ ನಡುವೆ ದ್ರಾಕ್ಷಿ ಬೆಳೆದ ರೈತರಿಗೆ ಇನ್ಸುರೆನ್ಸ್ ಶಾಕ್: ವಿಮಾ ಕಂಪನಿಯ ಮಹಾ ದೋಖಾ, ರೈತರೇ ಕಂಗಾಲು!
ಮೋದಿಯವರಿಗೆ ನಮ್ಮ ಭಯ: ಸಿದ್ದರಾಮಯ್ಯ ಮೋದಿ ವಿರುದ್ಧ ದುರಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ಮೋದಿಯವರು ನನ್ನ ಬಗ್ಗೆ ಮಾತನಾಡಬಹುದಾ? ಮಧ್ಯಪ್ರದೇಶದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡುವ ಅಗತ್ಯ ಏನಿತ್ತು? ಚುನಾವಣಾ ಪ್ರಚಾರ ಮಾಡಬೇಕು ಅಷ್ಟೇ. ಮೊದಿಯವರಿಗೆ ನಮ್ಮ ಬಗ್ಗೆ ಭಯ ಇರಬೇಕು ಅದಕ್ಕೆ ಹಾಗೆಲ್ಲಾ ಮಾತನಾಡುತ್ತಿದ್ದಾರೆ’ ಎಂದು ದೂರಿದರು.