ಕಾಂಗ್ರೆಸ್ಸಿಗೆ ರಾಜ್ಯ ಸರ್ಕಾರವೇ ಎಟಿಎಂ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಹಣ ಕಳಿಸೋದು ಬಿಟ್ರೆ ರಾಜ್ಯ ಸರ್ಕಾರದಿಂದ ನಾಡಿನ ಪ್ರಗತಿಗೆ ಯಾವ ಕೆಲಸವೂ ಆಗಿಲ್ಲ. ಕಾಂಗ್ರೆಸ್ಸಿಗೆ ರಾಜ್ಯ ಸರ್ಕಾರ ಎಟಿಎಂ ಇದ್ದಂತೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಬಳ್ಳಾರಿ (ಮೇ.26): ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಹಣ ಕಳಿಸೋದು ಬಿಟ್ರೆ ರಾಜ್ಯ ಸರ್ಕಾರದಿಂದ ನಾಡಿನ ಪ್ರಗತಿಗೆ ಯಾವ ಕೆಲಸವೂ ಆಗಿಲ್ಲ. ಕಾಂಗ್ರೆಸ್ಸಿಗೆ ರಾಜ್ಯ ಸರ್ಕಾರ ಎಟಿಎಂ ಇದ್ದಂತೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಎಲ್ಲೂ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಬಸ್‌ಗಳಿಗೆ ಡೀಸೆಲ್ ಹಾಕಿಸಲು ಸರ್ಕಾರದಲ್ಲಿ ಹಣವಿಲ್ಲ. ಕಳೆದ ಒಂದು ವರ್ಷದಲ್ಲಿ ಸರ್ಕಾರದ ಸಾಧನೆ ಶೂನ್ಯವಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮಹಿಳೆಯರ ಕೊಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊಲೆ, ಸುಲಿಗೆ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಬಾಂಬ್ ಸ್ಫೋಟವನ್ನು ಸಿಲೆಂಡರ್ ಸ್ಫೋಟ ಎನ್ನುತ್ತಾರೆ. ಕೇಂದ್ರ ತನಿಖಾ ದಳದಿಂದ ಬಾಂಬ್ ಸ್ಫೋಟಕರನ್ನು ಬಂಧಿಸಿದ ಬಳಿಕ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಹುಬಳ್ಳಿಯ ನೇಹಾ ಕೊಲೆ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡರು. ಹೀಗಾಗಿ ಅಂಜಲಿ ಕೊಲೆಯಾಯ್ತು. ಘಟನೆ ವಿರುದ್ಧ ಯಾರೂ ಧ್ವನಿ ಎತ್ತದಂತೆ ಕೇಸ್‌ಗಳನ್ನು ಹಾಕಿ ಬೆದರಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಶಿಕ್ಷಣಮಂತ್ರಿಗೆ ಕನ್ನಡ ಬರುವುದಿಲ್ಲ. ಕರ್ನಾಟಕದಲ್ಲಿದ್ದು ಕನ್ನಡ ಬರೋದಿಲ್ಲ ಎಂದು ಪ್ರಶ್ನಿಸಿದರೆ, ನರೆಂದ್ರ ಮೋದಿಗೆ ಕನ್ನಡ ಬರುತ್ತಾ ಎಂದು ಪ್ರಶ್ನಿಸುತ್ತಾರೆ. ಅಹಂಕಾರಿ, ಅಜ್ಞಾನಿ, ಮೂರ್ಖ ಶಿಕ್ಷಣ ಮಂತ್ರಿಯನ್ನು ರಾಜ್ಯದ ಶಿಕ್ಷಕರು ನೋಡುವಂತಾಗಿದೆ ಎಂದು ಸಚಿವ ಜೋಶಿ ಟೀಕಿಸಿದರು.
ಲೋಕಸಭೆಯಲ್ಲಿ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನಾಯಕರೇ ಸೋಲಿಸುತ್ತಾರೆ: ಪ್ರಲ್ಹಾದ್ ಜೋಶಿ
ಕರ್ನಾಟಕ ಸರ್ಕಾರ ಪತನ ಕುರಿತು ಮಹಾರಾಷ್ಟ್ರ ಸಿಎಂ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಏಕನಾಥ ಶಿಂಧೆ ಯಾವ ಅರ್ಥದಲ್ಲಿ ಹೇಳಿದ್ದಾರೆಯೋ ನನಗೆ ಗೊತ್ತಿಲ್ಲ. ರಾಜ್ಯ ಸರ್ಕಾರದಲ್ಲಿ ಆಂತರಿಕ ಗೊಂದಲಗಳು ಸಾಕಷ್ಟಿವೆ. ಅಧ್ಯಕ್ಷರ ಬದಲಾವಣೆ, ಮೂವರು ಡಿಸಿಎಂ ಆಗಬೇಕು ಎಂಬಿತ್ಯಾದಿ ಬೇಗುದಿ ಕಾಂಗ್ರೆಸ್ಸಿನಲ್ಲಿದೆ. ರಾಜ್ಯ ಸರ್ಕಾರ ಐದು ವರ್ಷ ಮುಂದುವರಿಯಲಿ ಎಂದು ಅಪೇಕ್ಷಿಸುತ್ತೇವೆ. ಕಾಂಗ್ರೆಸ್‌ನ ಆಂತರಿಕ ಭಿನ್ನಮತದಿಂದ ಸರ್ಕಾರ ಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಅವರು ಹೇಳಿದರು.