20 ರಂದು ಬಳ್ಳಾರಿಯಲ್ಲಿ ಎಸ್‌ಟಿ ಮೋರ್ಚಾದ ರಾಜ್ಯ ಸಮಾವೇಶ
- ನ.20 ರಂದು ಬಳ್ಳಾರಿಯಲ್ಲಿ ಎಸ್ಟಿಮೋರ್ಚಾದ ರಾಜ್ಯ ಸಮಾವೇಶ
- ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಬಳ್ಳಾರಿ (ಅ.23) : ನ.20 ರಂದು ಎಸ್ಟಿಮೋರ್ಚಾದ ರಾಜ್ಯಮಟ್ಟದ ಸಮಾವೇಶವನ್ನು ನಗರದಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಇಲ್ಲಿನ ಕೆಆರ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರಾದ ಬಿ.ಶ್ರೀರಾಮುಲು, ಆನಂದ ಸಿಂಗ್ ಸೇರಿದಂತೆ ಪಕ್ಷದ ಮುಖಂಡರು ಸಮಾವೇಶವನ್ನು ನಗರದಲ್ಲಿ ಅದ್ಧೂರಿಯಾಗಿ ಆಚರಿಸುವ ನಿರ್ಣಯ ಕೈಗೊಂಡರು.
ಎಸ್ಸಿ, ಎಸ್ಟಿ ಮೀಸಲು ಹೆಚ್ಚಳಕ್ಕೆ ಸುಗ್ರೀವಾಜ್ಞೆ; ಸಚಿವ ಶ್ರೀರಾಮುಲು
ಎಸ್ಸಿ-ಎಸ್ಟಿಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ನಿರ್ಧಾರವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ಈ ವಿಚಾರವನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವಂತಾಗಬೇಕು. ನಾಡಿನ ಜನರಿಗೆ ಸಮಾವೇಶದ ಮೂಲಕ ಸರ್ಕಾರದ ಜನಪರ ನಿರ್ಧಾರಗಳನ್ನು ತಿಳಿಸುವಂತಾಗಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ನಾಯಕರು ತಿಳಿಸಿದರು.
ಈ ಹಿಂದಿನ ಸರ್ಕಾರಗಳು ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಲಿಲ್ಲ. ಸಚಿವ ಬಿ.ಶ್ರೀರಾಮುಲು ಅವರು ನಿರಂತರ ಪರಿಶ್ರಮದಿಂದ ಸಾಧ್ಯವಾಗಿದೆ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಕಾರಣವಾಗಿದ್ದು, ಈ ಹಿಂದಿನ ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡಲಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಆನಂದ ಸಿಂಗ್ ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಎಸ್ಟಿಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬಳ್ಳಾರಿಯಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಮಾವೇಶದಿಂದ ರಾಜಕೀಯವಾಗಿ ಪಕ್ಷಕ್ಕೆ ಲಾಭವಾಗಲಿದೆ. ಮುಖ್ಯಮಂತ್ರಿ ಸೇರಿದಂತೆ ರಾಷ್ಟ್ರೀಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.
SC ST ಮೀಸಲಾತಿ ಹೆಚ್ಚಳ: ಬಿಜೆಪಿಗೆ ಸಿಗುತ್ತಾ ಒಂದೂವರೆ ಕೋಟಿಯ ಜಾಕ್‌ಪಾಟ್?
ಇದೇ ವೇಳೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ಫಿಟ್ನೆಸ್ ಇಲ್ಲದ ಪಕ್ಷ ಎಂದು ವ್ಯಂಗ್ಯವಾಡಿದರು. ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಮುರಹರಿಗೌಡ ಗೋನಾಳ್, ಕೊಪ್ಪಳ ಸಂಸದ ಕರಡಿ ಸಂಗಣ್ಣ, ವಿಜಯನಗರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಾಜಿ ಶಾಸಕ ಸುರೇಶ್‌ಬಾಬು, ಮಾಜಿ ಸಂಸದೆ ಜೆ.ಶಾಂತಾ, ಬಳ್ಳಾರಿ ವಿಭಾಗದ ಪ್ರಭಾರಿ ಸಿದ್ದೇಶ್ ಯಾದವ, ಮಾಧ್ಯಮ ವಿಭಾಗದ ರಾಜೀವ್ ತೊಗರಿ ಮತ್ತಿತರರಿದ್ದರು.