ಫಲಿತಾಂಶ ಹೊರಬಿದ್ದ ಎಂಟು ದಿನಗಳ ಬಳಿಕ ಭಾನುವಾರ ಪಕ್ಷ ಕಚೇರಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಮತ್ತು ಜಿಲ್ಲಾಧ್ಯಕ್ಷರು-ವಿಭಾಗೀಯ ಪ್ರಭಾರಿಗಳ ಸುದೀರ್ಘ ಸಭೆ ನಡೆಯಿತು.
ಬೆಂಗಳೂರು (ಮೇ.22): ಕಾಂಗ್ರೆಸ್ಸಿನ ಗ್ಯಾರಂಟಿ ಭರವಸೆಗಳಿಗೆ ಪ್ರತಿಯಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ವಿಳಂಬವಾಗಿದ್ದು, ಮೀಸಲಾತಿ ಪ್ರಮಾಣ ಹೆಚ್ಚಳ-ಒಳಮೀಸಲಾತಿ ಕುರಿತು ಆತುರಾತುರವಾಗಿ ನಿರ್ಧಾರ ಕೈಗೊಂಡಿದ್ದು ಮತ್ತು 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರ ಕುರಿತ ಆರೋಪಕ್ಕೆ ತಕ್ಕ ಎದಿರೇಟು ನೀಡುವಲ್ಲಿ ವಿಫಲವಾಗಿದ್ದು ಪಕ್ಷದ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳು ಎಂದು ಬಿಜೆಪಿಯ ಹಿರಿಯ ನಾಯಕರ ಚುನಾವಣಾ ಫಲಿತಾಂಶದ ಪರಾಮರ್ಶೆ ಸಭೆಯಲ್ಲಿ ವ್ಯಕ್ತವಾಗಿದೆ.
ಫಲಿತಾಂಶ ಹೊರಬಿದ್ದ ಎಂಟು ದಿನಗಳ ಬಳಿಕ ಭಾನುವಾರ ಪಕ್ಷ ಕಚೇರಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಮತ್ತು ಜಿಲ್ಲಾಧ್ಯಕ್ಷರು-ವಿಭಾಗೀಯ ಪ್ರಭಾರಿಗಳ ಸುದೀರ್ಘ ಸಭೆ ನಡೆಯಿತು. ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.
ಡಿ.ಕೆ.ಶಿವಕುಮಾರ್ ಡಿಸಿಎಂ: ರಾಮನಗರ ಜಿಲ್ಲೆಯಲ್ಲಿ ಮೂಡಿದ ಅಭಿವೃದ್ಧಿ ನಿರೀಕ್ಷೆಗಳು
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯ ಭಾಗವಾಗಿ ಐದು ಗ್ಯಾರಂಟಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಜನರಿಗೆ ತಲುಪಿಸುವಲ್ಲಿ ಸಫಲವಾಯಿತು. ಅದನ್ನು ಜನರು ಕೂಡ ನಂಬಿದರು. ಜನರ ಮನಸ್ಸಿನಲ್ಲಿ ಗ್ಯಾರಂಟಿಗಳು ಅಚ್ಚೊತ್ತಿದವು. ಆದರೆ, ಬಿಜೆಪಿ ತನ್ನ ಪ್ರಣಾಳಿಕೆಯನ್ನು ತೀರಾ ತಡವಾಗಿ ಬಿಡುಗಡೆ ಮಾಡಿತು. ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದಕ್ಕೇ ಆಗಲಿಲ್ಲ. ಮತದಾನದ ದಿನ ಸಮೀಪಿಸಿದ ಹೊತ್ತಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವ ಬದಲು ಚುನಾವಣೆಯ ಪ್ರಚಾರದ ಕಾವು ಏರುತ್ತಿರುವ ಹೊತ್ತಿನಲ್ಲೇ ಸಿದ್ಧಪಡಿಸಿ ಬಿಡುಗಡೆ ಮಾಡಿದ್ದರೆ ಜನರ ಮನಸ್ಸು ಗೆಲ್ಲಬಹುದಿತ್ತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೆ, ಮೀಸಲಾತಿ ಪ್ರಮಾಣ ಹೆಚ್ಚಳ ಮತ್ತು ಒಳಮೀಸಲಾತಿ ನೀಡುವ ಐತಿಹಾಸಿಕ ನಿರ್ಧಾರವನ್ನು ಕೆಲವು ತಿಂಗಳುಗಳ ಮುಂಚೆಯೇ ಕೈಗೊಂಡಿದ್ದರೆ ಆಯಾ ಸಮುದಾಯಗಳಲ್ಲಿನ ಜನರಲ್ಲಿ ಗೊಂದಲ ಉಂಟಾಗುತ್ತಿರಲಿಲ್ಲ. ಒಳಮೀಸಲಾತಿಯಿಂದ ಕೆಲವು ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂಬ ವದಂತಿಯನ್ನು ತಡೆಗಟ್ಟಲು ಸಮಯವೇ ಇರಲಿಲ್ಲ. ಅನೇಕ ಕ್ಷೇತ್ರಗಳಲ್ಲಿ ಬಂಜಾರ, ಬೋವಿ ಸಮುದಾಯದ ಮತಗಳು ಬಿಜೆಪಿಗೆ ಬರಲಿಲ್ಲ. ಇದು ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಕಾರಣವಾಯಿತು ಎಂಬ ಅಂಶವೂ ಹಲವರು ಪ್ರಸ್ತಾಪಿಸಿದರು ಎನ್ನಲಾಗಿದೆ.
ಇದೇ ವೇಳೆ ಕಾಂಗ್ರೆಸ್ ಪಕ್ಷ ಸತತವಾಗಿ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿತು. 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರ ಆರೋಪಕ್ಕೆ ಸರ್ಕಾರದಲ್ಲಿನ ಕೆಲವೊಬ್ಬರನ್ನು ಹೊರತುಪಡಿಸಿ ಬಹುತೇಕ ಸಚಿವರು ಪರಿಣಾಮಕಾರಿಯಾದ ಎದಿರೇಟು ನೀಡುವಲ್ಲಿ ವಿಫಲರಾದರು. ಇದರಿಂದಾಗಿ ಜನರಿಗೂ ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶ ಇರಬಹುದು ಎಂಬ ಅನುಮಾನ ಮೂಡುವಂತಾಯಿತು. ಆರೋಪ ಕೇಳಿಬಂದ ಬಳಿಕ ಅದನ್ನು ನಿರಾಕರಿಸಿ ಅದಕ್ಕೆ ಪ್ರತಿಯಾಗಿ ರಣತಂತ್ರ ರೂಪಿಸಿದ್ದರೆ ಭ್ರಷ್ಟಾಚಾರ ಆರೋಪ ಇಷ್ಟುದೊಡ್ಡದಾಗಿ ಬೆಳೆಯತ್ತಿರಲಿಲ್ಲ ಎಂದು ಹಲವು ಮುಖಂಡರು ಸಭೆಯಲ್ಲಿ ಬೇಸರದಿಂದಲೇ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಆರು ಬಾರಿ ಗೆದ್ದರೂ ಸಚಿವ ಸ್ಥಾನಕ್ಕಾಗಿ ಕಾಯಬೇಕು ಮೈಸೂರು ಜಿಲ್ಲೆಯ ಮೂವರು ಶಾಸಕರು!
ಏನೇನು ಕಾರಣ?
1. ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಪ್ರತಿಯಾಗಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ವಿಳಂಬ
2. ಮೀಸಲಾತಿ ಹೆಚ್ಚಳ, ಒಳಮೀಸಲಾತಿಯಲ್ಲಿ ಆತುರದ ನಿರ್ಧಾರ: ಇದರಿಂದ ಕೆಲ ಸಮುದಾಯಗಳಿಗೆ ಬೇಸರ
3. ಶೇ.40 ಕಮೀಷನ್ ಆರೋಪಕ್ಕೆ ಸರಿಯಾಗಿ ತಿರುಗೇಟು ನೀಡುವಲ್ಲಿ ವಿಫಲ
