ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ  ರಾಜ್ಯ ಬಿಜೆಪಿಯಿಂದ ಚುನಾವಣಾ ಉಸ್ತುವಾರಿಗಳ ನೇಮಕ

 ಬೆಂಗಳೂರು (ಆ.21): ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ರಾಜ್ಯ ಬಿಜೆಪಿಯು ಉಸ್ತುವಾರಿಗಳನ್ನು ನೇಮಕ ಮಾಡಿದ್ದು, ಸಚಿವರ ನೇತೃತ್ವದಲ್ಲಿ ಉಸ್ತುವಾರಿ ತಂಡವನ್ನು ರಚನೆ ಮಾಡಲಾಗಿದೆ.

ಸೆ.3ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪಕ್ಷವು ಗೆಲುವು ಸಾಧಿಸಲು ರಾಜಕೀಯ ತಂತ್ರಗಾರಿಕೆ ರೂಪಿಸಲು ಉಸ್ತವಾರಿ ವಹಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಉಸ್ತುವಾರಿಯಾಗಿ ಜವಳಿ ಮತ್ತು ಸಕ್ಕರೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಮಾಜಿ ಸಚಿವ ಲಕ್ಷ್ಮಣ್‌ ಸವದಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಅವರನ್ನು ನೇಮಕ ಮಾಡಲಾಗಿದೆ.

ಧಾರವಾಡ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆ; ಅರವಿಂದ್ ಬೆಲ್ಲದ್ ಫುಲ್ ಸಕ್ರಿಯ!

ಬೆಳಗಾವಿ ಮಹಾನಗರ ಪಾಲಿಕೆಗೆ ಉಸ್ತುವಾರಿಯಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಸತೀಶ್‌ ರೆಡ್ಡಿ, ಅಭಯ ಪಾಟೀಲ್‌ ಮತ್ತು ಕಲಬುರಗಿ ಮಹಾನಗರ ಪಾಲಿಕೆಗೆ ಉಸ್ತುವಾರಿಯಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ ಅವರನ್ನು ನೇಮಕ ಮಾಡಲಾಗಿದೆ.

ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಆ.24ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಆ.26ರಂದು ಉಮೇದುವಾರಿಕೆ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಸೆ.3ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯವಿದ್ದರೆ ಸೆ.5ರಂದು ನಡೆಯಲಿದೆ. ಸೆ.6ರಂದು ಮತ ಎಣಿಕೆ ಜರುಗಲಿದ್ದು, ಬೆಳಗ್ಗೆ 8 ಗಂಟೆಯಿಂದ ತಾಲೂಕಿನ ಕೇಂದ್ರ ಸ್ಥಳದಲ್ಲಿ ಮತ ಎಣಿಕೆ ನಡೆಯಲಿದೆ.