ಲೋಕಸಭೆ ಚುನಾವಣೆ 2024: ಕಾಂಗ್ರೆಸ್‌ಗೆ ಬಿಜೆಪಿ ಭರ್ಜರಿ ಶಾಕ್..!
ಶಾಸಕ ಎಸ್.ಆರ್.ವಿಶ್ವನಾಥ್ ಅವರು ಡಾ। ಕೆ.ಸುಧಾಕರ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಂದಿದ್ದ ದೊಡ್ಡ ತಡೆಯೊಂದು ನಿವಾರಣೆಯಾಗಿದೆ.
ಚಿಕ್ಕಬಳ್ಳಾಪುರ(ಏ.04): ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ। ಕೆ.ಸುಧಾಕರ್ ಅವರ ಬಗ್ಗೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗಿದ್ದ ಮುನಿಸು ಶಮನವಾಗಿದೆ. ಹಿರಿಯ ನಾಯಕರ ಸಮ್ಮುಖದಲ್ಲಿ ವಿವಾದ ಅಂತ್ಯಗೊಂಡಿದ್ದು, ಈ ಒಳಬೇಗುದಿಯನ್ನೇ ನೆಚ್ಚಿಕೊಂಡಿದ್ದ ಕಾಂಗ್ರೆಸ್ ನಾಯಕರಿಗೆ ಮಹಾ ಶಾಕ್ ಆಗಿದೆ.
ಶಾಸಕ ಎಸ್.ಆರ್.ವಿಶ್ವನಾಥ್ ಈವರೆಗೆ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ಗೆ ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ತಿಳಿಸಿ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಪುತ್ರನಿಗೆ ಟಿಕೆಟ್ ನೀಡದ ಕಾರಣ ಸಹಜವಾಗಿಯೇ ಶಾಸಕ ವಿಶ್ವನಾಥ್ ಮುನಿಸಿಕೊಂಡಿದ್ದರು. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಪರಿಸ್ಥಿತಿ ಬದಲಾಗಿದೆ. ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಅವರ ಸಮ್ಮುಖದಲ್ಲಿ ಸಂಧಾನ ಸಭೆ ನಡೆದು, ಕೊನೆಗೆ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಡಾ। ಕೆ.ಸುಧಾಕರ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಂದಿದ್ದ ದೊಡ್ಡ ತಡೆಯೊಂದು ನಿವಾರಣೆಯಾಗಿದೆ.
ಇಷ್ಟು ದಿನ ಸೈಲೆಂಟ್ ಆಗಿದ್ದೆ ಇನ್ನು ವೈಲೆಂಟ್ ಆಗುವೆ: ಎಂಟಿಬಿ ನಾಗರಾಜ್
ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬಿಜೆಪಿಯ ಈ ಸಣ್ಣ ಒಡಕನ್ನೇ ತಮ್ಮ ಲಾಭವಾಗಿಸಿಕೊಂಡು ಮತಗಳಾಗಿ ಪರಿವರ್ತಿಸಿಕೊಳ್ಳಲು ತಂತ್ರ ಹೂಡಿದ್ದರು. ಬಿಜೆಪಿ ನಾಯಕರ ನಡುವಿನ ಸಮಸ್ಯೆ ಇನ್ನಷ್ಟು ಬೆಳೆಯಲಿದ್ದು, ಇದರಿಂದ ಕಾಂಗ್ರೆಸ್‌ಗೆ ಒಂದಷ್ಟು ಮತಗಳು ಬರಬಹುದೆಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದರು. ಆದರೆ ಈಗ ಕಾಂಗ್ರೆಸ್ ನಾಯಕರಿಗೆ ಮುಖಭಂಗವಾಗಿ ಎಲ್ಲ ನಿರೀಕ್ಷೆ ಹುಸಿಯಾಗಿದೆ.
ಡಾ। ಕೆ.ಸುಧಾಕರ್‌ಗೆ ಆನೆ ಬಲ:
ಈ ದಿಢೀರ್ ಬದಲಾವಣೆಯಿಂದಾಗಿ ಅಭ್ಯರ್ಥಿ ಡಾ। ಕೆ.ಸುಧಾಕರ್ ಅವರಿಗೆ ಆನೆ ಬಲ ಬಂದಂತಾಗಿದೆ. ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಉತ್ತಮ ಹೊಂದಾಣಿಕೆ ಬೆಳೆದಿದ್ದು, ಡಾ। ಕೆ.ಸುಧಾಕರ್ ನಿರಂತರವಾಗಿ ಸಮನ್ವಯ ಸಭೆಗಳನ್ನು ನಡೆಸಿ ಎಲ್ಲರ ವಿಶ್ವಾಸ ಗಳಿಸಿದ್ದಾರೆ. ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಮುಖಂಡರ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಯಲಹಂಕ ಕ್ಷೇತ್ರದಲ್ಲಿ ಸ್ವಪಕ್ಷೀಯರ ಸಂಪೂರ್ಣ ಬೆಂಬಲ ದೊರೆತಿದೆ. ಈ ಮೂಲಕ ಡಾ। ಕೆ.ಸುಧಾಕರ್ ಅವರಿಗೆ ವಿಜಯಲಕ್ಷ್ಮಿ ಒಲಿಯುವ ಹಾದಿ ಇನ್ನಷ್ಟು ಸುಗಮವಾಗಿದೆ. ಈ ಬಾರಿಯೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬೀಳಲಿದೆ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಗಿದೆ.
ಅತ್ಯಧಿಕ ಮತದಾರರು, ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ:ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಪೈಕಿ, ಯಲಹಂಕ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಲೋಕಸಭಾ ಕ್ಷೇತ್ರದಲ್ಲಿ 19.50 ಲಕ್ಷ ಮತದಾರರಿದ್ದು, ಯಲಹಂಕ ವಿಧಾನಸಭಾ ಕ್ಷೇತ್ರವೊಂದರಲ್ಲೇ 4.45 ಲಕ್ಷ ಮತದಾರರಿದ್ದಾರೆ. ಹೀಗಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕರ ನಡುವಿನ ಮನಸ್ತಾಪವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಬಹುದೆಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿತ್ತು. ಉಳಿದ ಎಲ್ಲ ಕ್ಷೇತ್ರಗಳಲ್ಲಿ ಮೋದಿ ಅಲೆ ಹಾಗೂ ಡಾ। ಕೆ.ಸುಧಾಕರ್ ಪರ ಒಲವು ಇರುವುದರಿಂದ ತಮಗೆ ಉಳಿದಿರುವುದು ಇದೊಂದೇ ಕ್ಷೇತ್ರ ಎಂಬ ಅಲ್ಪ ಆಸೆ ಕಾಂಗ್ರೆಸ್ ನಾಯಕರಲ್ಲಿ ಉಳಿದಿತ್ತು. ಜೊತೆಗೆ ಇಲ್ಲಿ ಹೆಚ್ಚು ಮತ ಪಡೆದರೆ ಒಟ್ಟು ಮತ ಗಳಿಕೆಯ ಮೇಲೆ ನಿರ್ಣಾಯಕ ಪರಿಣಾಮ ಬೀರಬಹುದು ಎಂಬ ಅಂದಾಜು ಇತ್ತು. ಆದರೀಗ ಕಾಂಗ್ರೆಸ್‌ಗೆ ಆ ಗರಿಕೆ ಹುಲ್ಲಿನ ಆಸರೆಯೂ ಇಲ್ಲವಾಗಿದೆ. ಜೆಡಿಎಸ್ ಮೈತ್ರಿಯೂ ಇರುವುದರಿಂದ ಡಾ। ಕೆ.ಸುಧಾಕರ್ ಪರವಾದ ಬೆಂಬಲ ಇನ್ನಷ್ಟು ಅಧಿಕವಾಗಿದೆ. ಈ ಮೂಲಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಮಲ-ದಳದ ಅಧಿಪತ್ಯ ಸ್ಥಾಪನೆಯಾಗಲಿರುವುದು ಖಚಿತವಾಗಿದೆ.