ದಶಕಗಳಿಂದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿದ್ದ ಭಾರತ ದೇಶ ನಮ್ಮ ಸರ್ಕಾರದ ಅವಧಿಯಲ್ಲಿ ವೇಗದ ಅಭಿವೃದ್ಧಿ ಕಾಣುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

ಬೆಂಗಳೂರು (ಏ.09): ದಶಕಗಳಿಂದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿದ್ದ ಭಾರತ ದೇಶ ನಮ್ಮ ಸರ್ಕಾರದ ಅವಧಿಯಲ್ಲಿ ವೇಗದ ಅಭಿವೃದ್ಧಿ ಕಾಣುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಮಹಿಳಾ ಉದ್ಯಮಿಗಳು, ವೃತ್ತಿಪರರು, ಲೆಕ್ಕಪರಿಶೋಧಕರು, ಬ್ಯಾಂಕಿಂಗ್‌ ಕ್ಷೇತ್ರದವರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ನಡೆದ ಸಮಾಲೋಚನೆ ಸಭೆಯಲ್ಲಿ ಸಲಹೆ-ಅಭಿಪ್ರಾಯ ಆಲಿಸಿ ಬಳಿಕ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ರಸ್ತೆ, ಮನೆ, ವಿಮಾನ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಕ್ಕಿದೆ. ಇಡೀ ದೇಶವನ್ನು ಸುಲಭವಾಗಿ ಸಂಪರ್ಕಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಮೌಲ್ಯಾಧಾರಿತ ಶಿಕ್ಷಣವನ್ನು ತಂತ್ರಜ್ಞಾನದಿಂದ ಬೋಧಿಸಲು ಆಗದು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

ಕರ್ನಾಟಕದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬೆಂಗಳೂರು-ಮೈಸೂರು ಆರು ಪಥದ ಎಕ್ಸ್‌ಪ್ರೆಸ್‌ ವೇ, ಹೊರವರ್ತುಲ ರಸ್ತೆ, ವಿಮಾನ ನಿಲ್ದಾಣ, ಮೆಟ್ರೋ ಮಾರ್ಗ, ಮೇಲ್ಸೇತುವೆಗಳು, ಸೂಪರ್‌ ಫಾಸ್ಟ್‌ ರೈಲುಗಳ ಸಂಚಾರ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ. ದೇಶದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಸಮಸ್ಯೆಗಳು ಭಿನ್ನವಾಗಿರುತ್ತವೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದೆ. ನಗರಾಭಿವೃದ್ಧಿ, ಹಣಕಾಸು ನಿರ್ವಹಣೆ, ಲೆಕ್ಕಪರಿಶೋಧನೆ, ತೆರಿಗೆ ಸೇರಿದಂತೆ ಇತರೆ ಕ್ಷೇತ್ರಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸುಧಾರಣೆಗಳನ್ನು ತರುತ್ತಿದೆ. 

ಜನರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದರು. ಬಿಜೆಪಿ ಪ್ರಣಾಳಿಕೆ ಅಭಿಯಾನದ ಸಂಚಾಲಕ ಹಾಗೂ ಆರೋಗ್ಯ ಸಚಿವರೂ ಆದ ಡಾ.ಕೆ.ಸುಧಾಕರ್‌ ಮಾತನಾಡಿ, ಭಾರತೀಯ ಜನತಾ ಪಕ್ಷವು ಜನರ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯ ಸಾಧ್ಯತೆಯ ವಾಸ್ತವಿಕ ನೆಲೆಯಲ್ಲಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಿದೆ. ಆರ್ಥಿಕ ಶಕ್ತಿ, ಪ್ರಾಯೋಗಿಕ, ಸಾಧ್ಯತೆಯ, ವಾಸ್ತವಿಕ ಪ್ರಣಾಳಿಕೆ ರೂಪಿಸುವುದಾಗಿ ತಿಳಿಸಿದರು.

ಭರವಸೆ ಈಡೇರಿಸಿದ ಇತಿಹಾಸ ಕಾಂಗ್ರೆಸ್ಸಿಗಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

ಕರ್ನಾಟಕ ರಾಜ್ಯ ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಕೈಗಾರಿಕೆಗಳಿಗೆ ಅನುಮತಿ ನೀಡುವ ಸಂಬಂಧ ಸಿಂಗಲ್‌ ವಿಂಡೊ ವ್ಯವಸ್ಥೆ ಜಾರಿಗೊಳಿಸಿದೆ. ಭೂ ದಾಖಲೆಗಳನ್ನು ಪಡೆಯಲು ಆನ್‌ಲೈನ್‌ ವ್ಯವಸ್ಥೆ ಸೇರಿದಂತೆ ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಬಿಲ್ಡ​ರ್‍ಸ್ ಸಂಘಗಳು ಪ್ರಸ್ತಾಪಿಸಿರುವ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರ ಗಮನ ಸೆಳೆಯುವುದಾಗಿ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.