ರಾತ್ರಿ 12ರಿಂದ 1 ಗಂಟೆ ವರೆಗೆ, ಬೆಳಗಿನ ಜಾವ 4ರಿಂದ 5 ಗಂಟೆ ಸುಮಾರಿನಲ್ಲಿ ವ್ಹೀಲಿಂಗ್‌ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ಪೊಲೀಸರು ಹೆಚ್ಚು ವ್ಹೀಲಿಂಗ್‌ ನಡೆಯುವ 35 ರಸ್ತೆಗಳನ್ನು ಗುರುತಿಸಿದ್ದಾರೆ.

ವಿಧಾನ ಪರಿಷತ್ತು (ಆ.22): ರಾತ್ರಿ ಹಾಗೂ ಮುಂಜಾನೆಯ ಸಮಯದಲ್ಲಿ ರಸ್ತೆಗಳಲ್ಲಿ ವ್ಹೀಲಿಂಗ್‌ ಮಾಡುವವರನ್ನು ನಿಯಂತ್ರಿಸುವ ಸಲುವಾಗಿ ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ. ವ್ಹೀಲಿಂಗ್‌ ಮಾಡಿ ಸಿಕ್ಕಿಬಿದ್ದ ಯುವಕರ ಪೋಷಕರ ಮೇಲೂ ಇನ್ನು ಮುಂದೆ ಪ್ರಕರಣ ದಾಖಲಾಗುವುದು ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್‌ ಸದಸ್ಯ ಗೋವಿಂದರಾಜು ಅವರು ಬೆಂಗಳೂರು ಸೇರಿ ರಾಜ್ಯದ ಇನ್ನಿತರೆ ನಗರಗಳಲ್ಲಿ ವ್ಹೀಲಿಂಗ್‌ ಹಾವಳಿಯಿಂದ ಅಪಘಾತಗಳು ಸಂಭವಿಸುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾತ್ರಿ 12ರಿಂದ 1 ಗಂಟೆ ವರೆಗೆ, ಬೆಳಗಿನ ಜಾವ 4ರಿಂದ 5 ಗಂಟೆ ಸುಮಾರಿನಲ್ಲಿ ವ್ಹೀಲಿಂಗ್‌ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ಪೊಲೀಸರು ಹೆಚ್ಚು ವ್ಹೀಲಿಂಗ್‌ ನಡೆಯುವ 35 ರಸ್ತೆಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ವ್ಹೀಲಿಂಗ್‌ ಮಾಡುವವರ ಮೇಲೆ ರಾತ್ರಿ ಹಾಗೂ ಬೆಳಗಿನ ಜಾವ ಕಣ್ಣಿಡಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅವರು ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ ಎಂದು ತಿಳಿಸಿದರು.

ಕಳೆದ ಹತ್ತು ವರ್ಷಗಳಿಂದ ವ್ಹೀಲಿಂಗ್‌ ಒಂದು ಪಿಡುಗು ರೀತಿ ಹೆಚ್ಚಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ವ್ಹೀಲಿಂಗ್‌ ಸಂಬಂಧ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಕಳೆದ ಮೂರು ವರ್ಷಗಳಲ್ಲಿ 8 ಅಪಘಾತಗಳು ಸಂಭವಿಸಿದ್ದು, ಒಂದು ಪ್ರಾಣಹಾನಿಯಾಗಿದೆ. ಇದನ್ನು ತಡೆಯಲು ಪ್ರತಿ ಶಾಲೆಗಳಿಗೂ ಪೊಲೀಸ್‌ ಅಧಿಕಾರಿಗಳು ಹೋಗಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಜೊತೆಗೆ ಈಗಾಗಲೇ ಹಲವು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವ್ಹೀಲಿಂಗ್‌ ಮಾಡಿ ಸಿಕ್ಕಿಬಿದ್ದವರ ಮೇಲೆ ಪ್ರಕರಣ ದಾಖಲಿಸುವ, ದಂಡ ವಿಧಿಸುವ ಜೊತೆಗೆ ಅವರ ವಾಹನಗಳ ವಶಪಡಿಸಿಕೊಂಡು, ವಾಹನದ ಆರ್‌.ಸಿ. ಪುಸ್ತಕ ಹಾಗೂ ಬೈಕ್‌ ಸವಾರನ ಚಾಲನಾ ಪರವಾನಗಿಯನ್ನು ಮೂರು ವರ್ಷಗಳವರೆಗೆ ಅಮಾನತು ಮಾಡುವ ಕೆಲಸ ಮಾಡಲಾಗುತ್ತಿದೆ. ವ್ಹೀಲಿಂಗ್‌ನಲ್ಲಿ ಭಾಗಿಯಾಗಲು ವಾಹನಗಳನ್ನು ಮಾರ್ಪಾಡು ಮಾಡುವ ಗ್ಯಾರೇಜ್‌ಗಳು ಮತ್ತು ಮೆಕ್ಯಾನಿಕ್‌ಗಳ ವಿವರ ಸಂಗ್ರಹಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲೂ ಸಂಚಾರ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.