ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಮಾಡಿದ್ದಾರೆಂದರೆ, ನಮ್ಮ ರಾಜ್ಯ ಸರ್ಕಾರದ ಬೇಜವಾಬ್ದಾರಿ ಎಷ್ಟಿರಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರು (ಡಿ.28): ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾವನ್ನು ಹತ್ತಿಕ್ಕುವಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಸೋತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ಇತ್ತೀಚೆಗೆ ನಡೆಸಿದ ಬೃಹತ್ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಸರ್ಕಾರದ ಅಸಮರ್ಥತೆಯಿಂದಾಗಿ ರಾಜ್ಯದ ಯುವಜನತೆಯ ಭವಿಷ್ಯ ಅಧೋಗತಿಗೆ ತಲುಪುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ
ನಮ್ಮವರು ಏನು ಮಾಡುತ್ತಿದ್ದಾರೆ? ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮೂರು ಡ್ರಗ್ಸ್ ಫ್ಯಾಕ್ಟರಿಗಳ ಮೇಲಿನ ದಾಳಿಯನ್ನು ಉಲ್ಲೇಖಿಸಿದ ಅಶೋಕ್, 'ಮೈಸೂರಿನಲ್ಲಿ ಈ ಹಿಂದೆ 390 ಕೋಟಿ ರೂ. ಮೌಲ್ಯದ ಮೆಫೆಡ್ರೋನ್ ಡ್ರಗ್ಸ್ ಪತ್ತೆ ಹಚ್ಚಿದ್ದ ಮಹಾರಾಷ್ಟ್ರ ಪೊಲೀಸರು, ಈಗ ಬೆಂಗಳೂರಿನಲ್ಲೂ 56 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಕರ್ನಾಟಕದ ಶೌರ್ಯ ಮತ್ತು ದಕ್ಷತೆಗೆ ಹೆಸರಾಗಿದ್ದ ಪೊಲೀಸ್ ಇಲಾಖೆ ಈಗ ನಿತ್ರಾಣವಾಗಿದೆ. ಹೊರರಾಜ್ಯದ ಪೊಲೀಸರು ಬಂದು ಇಲ್ಲಿ ಕಾರ್ಯಾಚರಣೆ ನಡೆಸಬೇಕಾದ ಸ್ಥಿತಿ ಬಂದಿದೆ ಎಂದರೆ, ರಾಜ್ಯದ ಗುಪ್ತಚರ ಇಲಾಖೆ ನಿದ್ದೆ ಮಾಡುತ್ತಿದೆಯೇ?' ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವರ ವಿರುದ್ಧ ಆಕ್ರೋಶ
ಬೆಳಗಾವಿ ಅಧಿವೇಶನದಲ್ಲಿ ಡ್ರಗ್ಸ್ ದಂಧೆಯ ಗಂಭೀರತೆಯ ಬಗ್ಗೆ ಪ್ರಶ್ನಿಸಿದಾಗ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು 'ಡ್ರಗ್ಸ್ ದಂಧೆ ಎಲ್ಲಾ ರಾಜ್ಯಗಳಲ್ಲೂ ಇದೆ' ಎಂಬ ಉಡಾಫೆಯ ಉತ್ತರ ನೀಡಿದ್ದರು. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಗೃಹ ಇಲಾಖೆಯ ಈ ಉದಾಸೀನ ಮನೋಭಾವವೇ ಡ್ರಗ್ಸ್ ದಂಧೆಕೋರರಿಗೆ ವರದಾನವಾಗಿದೆ ಎಂದು ಕಿಡಿಕಾರಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ
ಯುವ ಜನಾಂಗವನ್ನು ಹೈಜಾಕ್ ಮಾಡುತ್ತಿರುವ ಈ ದಂಧೆಯನ್ನು ಕೂಡಲೇ ಹತ್ತಿಕ್ಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸದಿದ್ದರೆ, ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.


