ಬೃಹತ್ ಕಾರ್ಯಕ್ರಮ ಆಯೋಜಿಸುವವರಿಗೆ ಗರಿಷ್ಠ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಪ್ರಾಣಹಾನಿಗೆ ಕಾರಣರಾದರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕವನ್ನು ಪರಮೇಶ್ವರ್ ಮಂಡಿಸಿದರು.
ವಿಧಾನಸಭೆ (ಆ.21): ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ ರಾಜ್ಯದಲ್ಲಿ ಮರುಕಳಿಸದಂತೆ ಮಾಡಲು ಅನುಮತಿಯಿಲ್ಲದೆ ಬೃಹತ್ ಕಾರ್ಯಕ್ರಮ ಆಯೋಜಿಸುವವರಿಗೆ ಗರಿಷ್ಠ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರು.ವರೆಗೆ ದಂಡ ವಿಧಿಸುವುದು ಹಾಗೂ ಪ್ರಾಣಹಾನಿಗೆ ಕಾರಣರಾದರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕವನ್ನು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಮಂಡಿಸಿದರು. ರಾಜ್ಯದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆಗೂ ಮುನ್ನ ಅದರ ಪೂರ್ಣ ವಿವರವನ್ನು ಸಕ್ಷಮ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಬೇಕು. ಅದರಲ್ಲಿ 7 ಸಾವಿರಕ್ಕಿಂತ ಕಡಿಮೆ ಜನ ಸೇರುವ ಕಾರ್ಯಕ್ರಮಕ್ಕೆ ಪೊಲೀಸ್ ಠಾಣೆ ಉಸ್ತುವಾರಿ ಅಧಿಕಾರಿ ಅನುಮತಿಸಬೇಕು ಎಂದು ತಿಳಿಸಿದರು.
ಅದೇ 7ರಿಂದ 50 ಸಾವಿರ ಜನಸಂಖ್ಯೆಯ ಕಾರ್ಯಕ್ರಮಕ್ಕೆ ಡಿವೈಎಸ್ಪಿ ಹಾಗೂ 50 ಸಾವಿರಕ್ಕಿಂತ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳ ಅರ್ಜಿಯನ್ನು ಎಸ್‌ಪಿ ಅಥವಾ ಪೊಲೀಸ್ ಆಯುಕ್ತರು ಪರಿಶೀಲಿಸಿ ಅನುಮತಿ ನೀಡಬೇಕು. ಅಲ್ಲದೆ, ಈ ಅರ್ಜಿಗಳು ಸಲ್ಲಿಕೆಯಾದ 4 ದಿನಗಳಲ್ಲಿ ಅನುಮತಿಸುವ ಅಥವಾ ತಿರಸ್ಕರಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗುತ್ತಿದೆ, ಅದರ ಜತೆ ಯಾವುದೇ ಅನುಮತಿ ಪಡೆಯದೆ ಕಾರ್ಯಕ್ರಮ ಅಥವಾ ಸಮಾರಂಭಗಳನ್ನು ಆಯೋಜಿಸಿದಲ್ಲಿ ಅಥವಾ ಆಯೋಜಿಸಲು ಯತ್ನಿಸಿದಲ್ಲಿ ಕನಿಷ್ಠ 3 ವರ್ಷಗಳಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಕೋಟಿ ರು.ವರೆಗೆ ದಂಡ ವಿಧಿಸಬಹುದಾಗಿದೆ.
ಇನ್ನು, ಸಾರ್ವಜನಿಕರಿಗೆ ಸಮಸ್ಯೆಯನ್ನುಂಟು ಮಾಡಲು ಸುಳ್ಳು ವದಂತಿ, ಹೇಳಿಕೆ, ಬೆದರಿಕೆ ಹಾಕಿದರೆ, ಶಾಂತಿ ಭಂಗವನ್ನುಂಟು ಮಾಡಿದರೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 50 ಸಾವಿರ ರು. ದಂಡ ವಿಧಿಸುವುದು. ಜತೆಗೆ, ಜನಸಂದಣಿ ಸೇರಿಸಿ ಜನರಿಗೆ ದೈಹಿಕ ಗಾಯಗಳಾದಲ್ಲಿ ಆಯೋಜಕರಿಗೆ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಪ್ರಾಣ ಹಾನಿ ಪ್ರಕರಣದಲ್ಲಿ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆ ಗುರಿಪಡಿಸಬಹುದು.
ಸಿಬಲ್ ಸೇರಿದಂತೆ ವಕೀಲರ ಸಂಭಾವನೆ 2.30 ಕೋಟಿ: ರಾಜ್ಯ ಸರ್ಕಾರದ 2025-26ನೇ ಸಾಲಿನ ಪೂರಕ ಅಂದಾಜಿನಲ್ಲಿ (ಮೊದಲ ಕಂತು) ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರೂ ಆಗಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಇತರೆ ಹಿರಿಯ ವಕೀಲರ ಸಂಭಾವನೆ ಬಿಲ್ಲುಗಳ ಪಾವತಿಗಾಗಿ ₹2.30 ಕೋಟಿ ನೀಡಲಾಗಿದೆ. ಅಂತೆಯೇ 2019ರ ಲೋಕಸಭಾ ಚುನಾವಣೆ ಸಂಬಂಧ ಹೈಕೋರ್ಟ್‌ನಲ್ಲಿನ ಮೂರು ಪ್ರಕರಣಗಳ ಸಂಬಂಧ ಬಾಕಿ ಬಿಲ್ಲುಗಳ ಪಾವತಿಗಾಗಿ ₹4.99 ಕೋಟಿ ಒದಗಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಹಿರಿಯ ವಕೀಲ ಕಪಿಲ್ ಸಿಬಲ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಿದ್ದರಾಮಯ್ಯ ಪರ ವಾದ ಮಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
