ಡಿ.ಕೆ.ಶಿವಕುಮಾರ್ ವಿರುದ್ಧ ಮೊಕದ್ದಮೆಗೆ ನಿರಾಕರಿಸಿದ್ದ ಸ್ಪೀಕರ್..!
ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಅಧಿಕಾರ ತಮಗಿಲ್ಲ ಎಂದು ಅಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ನಿರ್ದೇಶಿತರಾಗಿ ವಿಧಾನಸಭೆ ಸಚಿವಾಲಯದ ಉಪಕಾರ್ಯದರ್ಶಿಗಳು ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಮನಗರ(ನ.26): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮದ ಕುರಿತು ಪರ ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸ್ಪೀಕರ್ ರವರು ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ವಿಚಾರಣೆಗೆ ಅನುಮತಿ ನೀಡುವ ಅಧಿಕಾರ ಇಲ್ಲವೆಂದು ಹಿಂಬರಹ ನೀಡಿರುವ ಸಂಗತಿಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಇಂತಹದೊಂದು ಹಿಂಬರಹ ನೀಡಿರುವುದು ಇದೇ ಡಿ.ಕೆ.ಶಿವಕುಮಾರ್ ರವರ ವಿರುದ್ಧದ ಪ್ರಕರಣದಲ್ಲಿ. ಅದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ಎಂಬುದು ಮತ್ತೊಂದು ವಿಶೇಷ.
ಬಿಎಸ್‌ವೈಗೆ ಕೊಟ್ಟ ಎಜಿ ವರದಿಯಲ್ಲೇನಿತ್ತು?: ಬಹಿರಂಗ ಮಾಡಲು ಯಡಿಯೂರಪ್ಪಗೆ ಪ್ರಿಯಾಂಕ್ ಸವಾಲು
ಏನಿದು ಪ್ರಕರಣ ?
2022ರ ಜನವರಿ 3ರಂದು ರಾಮನಗರ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾಡಳಿತ ಮುಖ್ಯಮಂತ್ರಿಗಳ ಸರ್ಕಾರಿ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಆ ಸಮಾರಂಭಕ್ಕೆ ಅಡ್ಡಿ ಪಡಿಸುವಂತೆ ಕಾರ್ಯಕರ್ತರಿಗೆ ಪ್ರಚೋದನೆ ನೀಡಿದರೆಂದು ಆರೋಪಿಸಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಎಂಎಲ್ ಸಿ ರವಿ ಮತ್ತಿತರರ ವಿರುದ್ಧ ಸಾಮಾಜಿಕ ಕಾರ್ಯಕರ್ತ ರವಿಕುಮಾರ ಕಂಚನಹಳ್ಳಿ ನ್ಯಾಯಾಲಯದಲ್ಲಿ ಐಪಿಸಿ ಕಲಂ 120(ಬಿ), 143, 353, 506, R/W 114ರ ಅಡಿ ನ್ಯಾಯಾಲದಲ್ಲಿ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲು ಸಿಆರ್ ಪಿಸಿ 197ರ ಅಡಿ ಅನುಮತಿ ಕೋರಿದ್ದರು.
ಇದಕ್ಕಾಗಿ 2022ರ ಫೆಬ್ರವರಿ 21ರಂದು ಲೋಕಸಭೆ ಸಭಾಪತಿ, ವಿಧಾನಸಭೆ ಸಭಾಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ, ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು ಹಾಗೂ ರಾಜ್ಯ ಪೊಲೀಸ್ ಪ್ರಧಾನ ಕಚೇರಿ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಯಾಗಿ 2022ರ ಮೇ 12ರಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ಉಪ ಕಾರ್ಯದರ್ಶಿ ಬಿ.ಎಸ್. ಮಹಾಲಿಂಗೇಶ್ ರವರು ಮಾನ್ಯ ಸಭಾಧ್ಯಕ್ಷರು ವಿಧಾನಸಭಾ ಸದಸ್ಯರನ್ನು ನೇಮಿಸುವ ಪ್ರಾಧಿಕಾರವಾಗಿರದೇ ಇರುವುದರಿಂದ ಶಾಸಕತ್ವವನ್ನು ಅನರ್ಹಗೊಳಿಸಲು ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿರುವುದಿಲ್ಲ ಎಂದು ತಮಗೆ ತಿಳಿಸಲು ಸಭಾಧ್ಯಕ್ಷರವರಿಂದ ನಿರ್ದೇಶಿತನಾಗಿದ್ದೇನೆ ಎಂದು ಅರ್ಜಿದಾರರಿಗೆ ಹಿಂಬರಹ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ರವಿಕುಮಾರ ಕಂಚನಹಳ್ಳಿರವರು 2022ರ ಮೇ 19ರಂದು ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಬಗ್ಗೆ ಕರ್ನಾಟಕ ವಿಧಾನಸಭೆ ಸಚಿವಾಲಯ ಉಪಕಾರ್ಯದರ್ಶಿಗಳ ಹಿಂಬರಹ ಕುರಿತು ಮತ್ತೆ ವಿಧಾನಸಭೆ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ಜನಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸುವ ಸಭಾದ್ಯಕ್ಷರು - ಸಭಾಪತಿಗಳಿಗೆ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲು ಅಧಿಕಾರ ಇರುತ್ತದೆ ಎಂದು ತಿಳಿದು ಸಭಾಧ್ಯಕ್ಷರಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೇಳಿದ್ದರು.
ಸಭಾಧ್ಯಕ್ಷರಿಗೆ ಕಾನೂನು ಸಲಹೆಗಾರರನ್ನು ನೇಮಿಸಿದ್ದು, ಅಗತ್ಯವಿದ್ದಲ್ಲಿ ಅಡ್ವೋಕೇಟ್ ಜನರಲ್ ರವರ ಸಲಹೆ ಪಡೆದು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲು ಅಧಿಕಾರವಿರುವ ಪ್ರಾಧಿಕಾರಕ್ಕೆ ಅರ್ಜಿಯನ್ನು ವರ್ಗಾವಣೆ ಮಾಡಬಹುದಾಗಿದೆ. ಆದ್ದರಿಂದ ಸಭಾಧ್ಯಕ್ಷರಿಗೆ ಲಭ್ಯವಿರುವ ಕಾನೂನು ಸಲಹೆಗಾರರಿಂದ ಸಲಹೆ ಪಡೆದು ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಲು ಅಧಿಕಾರ ಇರುವ ಪ್ರಾಧಿಕಾರಕ್ಕೆ - ಅಧಿಕಾರ ವ್ಯಾಪ್ತಿವುಳ್ಳ ಅಧಿಕಾರಿಗಳಿಗೆ ಅರ್ಜಿ ಮತ್ತು ದಾಖಲೆಗಳನ್ನು ವರ್ಗಾಹಿಸಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅರ್ಜಿ ಸಲ್ಲಿಸಿರುವ ದಿನಾಂಕದಿಂದ 90 ದಿನಗಳ ಒಳಗಾಗಿ ಅನುಮತಿ ನೀಡಲುಆದೇಶ ಮಾಡಿ ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಕ್ಷೆಗೊಳಪಡಿಸಲು ಅನುವು ಮಾಡಿಕೊಡುವಂತೆ ರವಿಕುಮಾರ ಅರ್ಜಿಯಲ್ಲಿ ಕೋರಿದ್ದರು. ಇದಕ್ಕೆ ಪ್ರತಿಯಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಯಾವುದೇ ಪ್ರತ್ಯುತ್ತರ ನೀಡಲಿಲ್ಲ.
ಡಿಕೆಶಿ ಅಕ್ರಮ ಆಸ್ತಿ ಗಳಿಕೆ: ಸಿದ್ದುಗೆ ಎಲ್ಲ ಸತ್ಯ ಗೊತ್ತಿದೆ, ಆದರೂ ಸುಳ್ಳು ಹೇಳ್ತಿದ್ದಾರೆ, ಬಿಎಸ್‌ವೈ
ಆದರೀಗ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸ್ಪೀಕರ್ ಅವರ ಪೂರ್ವಾನುಮತಿ ಇಲ್ಲದೆ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇರೆಗೆ ಕಾನೂನು ಬಾಹಿರವಾಗಿ ಸಿಬಿಐ ತನಿಖೆಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಸಮರ್ಥನೆ ಮಾಡಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಅದೇ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಅಧಿಕಾರ ತಮಗಿಲ್ಲ ಎಂದು ಅಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ನಿರ್ದೇಶಿತರಾಗಿ ವಿಧಾನಸಭೆ ಸಚಿವಾಲಯದ ಉಪಕಾರ್ಯದರ್ಶಿಗಳು ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಡಿ.ಕೆ.ಶಿವಕುಮಾರ್ ಶಾಸಕರಾಗಿದ್ದ ಅವಧಿಯಲ್ಲಿ ಕ್ರಿಮಿನಲ್ ಕೇಸ್ ಫೈಲ್ ಮಾಡಲು ಅನುಮತಿ ನೀಡುವ ವಿಷಯವಾಗಿ ಸ್ಪೀಕರ್ ರವರು ವಿಧಾನಸಭೆ ಸದಸ್ಯರನ್ನು ನೇಮಕ ಮಾಡುವುದು ಪ್ರಾಧಿಕಾರ ಅಲ್ಲ, ಹೀಗಾಗಿ ಅನುಮತಿ ನೀಡುವ ಅಧಿಕಾರ ಇಲ್ಲವೆಂದು ನನಗೆ ಹಿಂಬರಹ ಕೊಡುತ್ತಾರೆ. ಆದರೆ, ಅದೇ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐಗೆ ಪ್ರಕರಣ ವರ್ಗಾಯಿಸುವಾಗ ಸ್ಪೀಕರ್ ಅನುಮತಿ ಪಡೆದಿಲ್ಲ ಎನ್ನುವ ಕಾರಣ ನೀಡಿ ವಾಪಸ್ ಪಡೆಯುತ್ತಿದ್ದಾರೆ. ಹಿಂಪಡೆಯುವುದರ ವಿರುದ್ಧ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿ ಪ್ರಶ್ನಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ ಕಂಚನಹಳ್ಳಿ ತಿಳಿಸಿದ್ದಾರೆ.