ಬಿಎಸ್‌ವೈಗೆ ಕೊಟ್ಟ ಎಜಿ ವರದಿಯಲ್ಲೇನಿತ್ತು?: ಬಹಿರಂಗ ಮಾಡಲು ಯಡಿಯೂರಪ್ಪಗೆ ಪ್ರಿಯಾಂಕ್ ಸವಾಲು
ಇಂತಹ ಎಷ್ಟು ಪ್ರಕರಣಗಳನ್ನು ಈವರೆಗೆ ತನಿಖೆಗೆ ಕೊಟ್ಟಿದ್ದರು ಎಂಬುದರ ವಿವರ ನೀಡಲಿ. ಸ್ಥಳೀಯ ತನಿಖಾ ಸಂಸ್ಥೆಗಳು ತನಿಖೆ ಮಾಡಲು ವಿಫಲವಾದಾಗ ಮಾತ್ರ ಸಿಬಿಐ ತನಿಖೆಗೆ ನೀಡಬೇಕು. ಹೀಗಿದ್ದರೂ ಅವಸರ ಮಾಡಿದ್ದು ಯಾಕೆ? ಎಂದು ಕಿಡಿಕಾರಿದ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು(ನ.26): ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡುವ ಮೊದಲು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಡ್ವೋಕೇಟ್ ಜನರಲ್ ವರದಿ ಕೇಳಿದ್ದು ಸತ್ಯ. ಆದರೆ ವರದಿಯಲ್ಲಿ ಏನೆಂದು ಹೇಳಿದ್ದರು ಎಂಬುದನ್ನು ಹೇಳಲಿ. ವರದಿಯ ದಾಖಲೆಗಳನ್ನು ಬಿಜೆಪಿಯವರು ಸದನದ ಮುಂದಿಡಲಿ. ಇಲ್ಲದಿದ್ದರೆ ನಾನೇ ದಾಖಲೆ ಬಿಡುಗಡೆ ಮಾಡುತ್ತೇನೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿಯವರಿಗೆ ಮಾತ್ರವಲ್ಲ ನಮಗೂ ರಾಜಕಾರಣ ಮಾಡಲು ಬರುತ್ತದೆ. ಒಂದೇ ದಿನದಲ್ಲಿ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಆದೇಶ ಮಾಡಿದ್ದರು. ಈ ಪ್ರಕರಣದಲ್ಲಿ ಅವಸರದ ತೀರ್ಮಾನ ಕೈಗೊಳ್ಳುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ.
ಡಿಕೆಶಿ ಪ್ರಾಮಾಣಿಕರಾಗಿದ್ದರೆ ಸಂಪುಟ ನಿರ್ಧಾರ ವಿರೋಧಿಸಬೇಕಿತ್ತು: ವಿಜಯೇಂದ್ರ
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂತಹ ಎಷ್ಟು ಪ್ರಕರಣಗಳನ್ನು ಈವರೆಗೆ ತನಿಖೆಗೆ ಕೊಟ್ಟಿದ್ದರು ಎಂಬುದರ ವಿವರ ನೀಡಲಿ. ಸ್ಥಳೀಯ ತನಿಖಾ ಸಂಸ್ಥೆಗಳು ತನಿಖೆ ಮಾಡಲು ವಿಫಲವಾದಾಗ ಮಾತ್ರ ಸಿಬಿಐ ತನಿಖೆಗೆ ನೀಡಬೇಕು. ಹೀಗಿದ್ದರೂ ಅವಸರ ಮಾಡಿದ್ದು ಯಾಕೆ? ಎಂದು ಕಿಡಿಕಾರಿದರು.
ಸಿಬಿಐ ತನಿಖೆ ಆದೇಶ ಹಿಂಪಡೆಯುವ ವೇಳೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಾಗ ಎಲ್ಲಾ ಸಾಧಕ-ಬಾಧಕ ಚರ್ಚೆ ಮಾಡಿದ್ದೇವೆ. ಸಾರ್ವಜನಿಕರ ಅಭಿಪ್ರಾಯ, ಮಾಧ್ಯಮ ಹಾಗೂ ಕಾನೂನು ಸಮಸ್ಯೆ ಹೀಗೆ ಎಲ್ಲವುಗಳ ಕುರಿತೂ ಚರ್ಚೆ ಆಗಿದೆ ಎಂದರು.