ಬೆಂಗಳೂರು, (ಸೆ.23): ಕೊರೋನಾ ಭೀತಿಯ ನಡುವೆಯೂ ವಿಧಾನಮಂಡಲ ಅಧಿವೇಶನ ಸೆ.21ರಿಂದ ಆರಂಭಗೊಂಡಿದ್ದು, ಕಾಂಗ್ರೆಸ್ ಹಾಗೂ ಆಡಳಿತರೂಢ ಬಿಜೆಪಿ  ನಡುವೆ ಸದನದಲ್ಲಿ ವಾಕ್ಸಮರ ನಡೆಯುತ್ತಿದೆ.

ಇಂದು (ಬುಧವಾರ) 3ನೇ ದಿನದ ಕಲಾಪದಲ್ಲಿ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ, ವರುಣ ಕ್ಷೇತ್ರದ ಶಾಸಕ ಯತೀಂದ್ರ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಾರ್ನ್‌ ಮಾಡಿರುವ ಪ್ರಸಂಗವೂ ನಡೆಯಿತು.

ಮಾಸ್ಕ್‌ ಹಾಕಿ​ಕೊಂಡೇ ಮಾತಾ​ಡಿ: ಸದಸ್ಯರಿಗೆ ಸ್ಪೀಕರ್‌ ಕಾಗೇರಿ ತಾಕೀ​ತು

 ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಉತ್ತರ ನೀಡುವ ವೇಳೆ ಯತೀಂದ್ರ ಅವರು ಎದ್ದು ನಿಂತು ಮಾತನಾಡಿದ್ದಾರೆ. ಇದರಿಂದ ಕೋಪಗೊಂಡ  ಸ್ಪೀಕರ್ ವಿಶ್ವೇಶ್ವರ ಹೆಗಡೆ,  ಹರಟೆ ಹೊಡೆದುಕೊಂಡು ಎದ್ದು  ನಿಂತರೆ ಸರಿ ಇರಲ್ಲ ಎಂದು ಎಚ್ಚರಿಸಿದರು.

ನಾನು ಅವಾಗ್ಲಿಂದಲೂ ನಿಮ್ಮನ್ನು ನೋಡ್ತಾ ಇದ್ದೇನೆ.  ಒಂದು ಸಾರಿ ಅಲ್ಲಾ, ಎರಡ್ಮೂರು ಬಾರಿ ನಿಮ್ಮನ್ನು ನೋಡ್ತಿದ್ದೇನೆ. ಸದನ ನಡೆಸಲು ಅವಕಾಶ ಮಾಡಿಕೊಡಿ ಎಂದರು. 

ಬಳಿಕ ಯತೀಂದ್ರ ಅವರು  ಎದ್ದು ನಿಂತು ಆ ರೀತಿ ನಾನು ಮಾಡಿಲ್ಲ ಕ್ಷಮೆ ಕೋರುತ್ತೇನೆ ಸರ್ ಎಂದು ಕುಳಿತುಕೊಂಡರು.