ವಿಧಾನಸಭೆ (ಸೆ.23): ಸಚಿವರು, ಪ್ರತಿಪಕ್ಷದ ಮುಖಂಡರು ಸೇರಿದಂತೆ ಸದನದೊಳಗೆ ಪ್ರತಿ ಸದಸ್ಯರೂ ಕಡ್ಡಾಯವಾಗಿ ಮಾಸ್ಕ್‌ ಹಾಕಬೇಕು ಮತ್ತು ಮಾಸ್ಕ್‌ ಹಾಕಿಕೊಂಡೇ ಮಾತನಾಡಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಾಕೀತು ಮಾಡಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ಸದಸ್ಯರಿಗೆ ಕೊರೋನಾ ಸೋಂಕಿನ ಗಂಭೀರತೆ ಕುರಿತು ತಿಳಿ ಹೇಳಿದರು.

ಕಲಾಪದ ಒಂದ ಹಂತದಲ್ಲ ಮಾಸ್ಕ್‌ ಕೆಳಗಿಳಿಸಿ ಮಾತನಾಡುತ್ತಿದ್ದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಕಾಂಗ್ರೆಸ್‌ ಹಿರಿಯ ಸದಸ್ಯ ಡಿ.ಕೆ.ಶಿವಕುಮಾರ್‌ ಅವರಿಗೆ ಸ್ಪೀಕರ್‌ ಕಾಗೇರಿ ಅವರು ಮಾಸ್ಕ್‌ ಧರಿಸುವಂತೆ ತಾಕೀತು ಮಾಡಿದರು. ಪ್ರತಿ ಸದಸ್ಯರಿಗೆ ಮಾಸ್ಕ್‌, ಕೈಗೆ ಗ್ಲೌಸ್‌ ಮತ್ತು ಫೇಸ್‌ ಶೀಲ್ಡ್‌ ಸಹ ನೀಡಲಾಗಿದೆ. ಆದರೂ ಕೆಲವರು ಮಾಸ್ಕ್‌ ಧರಿಸದೆ ಮಾತನಾಡುವುದು ಕಂಡು ಬಂದಿದೆ. ಪ್ರತಿಯೊಬ್ಬ ಸದಸ್ಯರು ನಿರ್ಲಕ್ಷ್ಯ ಮಾಡಬಾರದು ಎಂದರು.

ನಿರ್ಲಕ್ಷ್ಯ ಮಾಡಿದರೆ ಅದರ ಗಂಭೀರ ಸ್ವರೂಪ ಏನೆಂಬುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಹೀಗಾಗಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಮಾಸ್ಕ್‌ ಹಾಕಿಕೊಂಡೇ ಮಾತನಾಡಬೇಕು ಎಂದು ಹೇಳಿದರು.

ಸದಸ್ಯರು, ಸಚಿವಾಲಯದ ಸಿಬ್ಬಂದಿ, ಮಾಧ್ಯಮದವರು ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ವಿಧಾನಸೌಧದಲ್ಲಿಯೇ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಸೋಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಲಾಪ ಮುಗಿದ ಬಳಿಕ ಇಡೀ ಸದನವನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಇನ್ನು, ನಿಯೋಗಗಳು, ಸಂಘಟನಾ ಸದಸ್ಯರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು ಸಹಜ. ಹೀಗಾಗಿ ಅವರನ್ನು ಸಚಿವರು ತಮ್ಮ ನಿವಾಸ, ಕಚೇರಿ ಅಥವಾ ಶಾಸಕರ ಭವನದಲ್ಲಿನ ಸಮಿತಿ ಕೊಠಡಿಯಲ್ಲಿ ಭೇಟಿ ಮಾಡಿ ಮನವಿಯನ್ನು ಪಡೆದುಕೊಳ್ಳಬೇಕು. ವಿಧಾನಸೌಧಕ್ಕೆ ಆಗಮಿಸದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.