ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸೌಮ್ಯಾರೆಡ್ಡಿ ಅವರಿಗೆ ಟಿಕೆಟ್‌ ಕೇಳಿಲ್ಲ. ಇನ್ನೂ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದು ಅವರಿಗೆ ಟಿಕೆಟ್‌ ನೀಡಲಿ. ಯಾರೇ ಸ್ಪರ್ಧಿಸಿದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು. 

ಬೆಂಗಳೂರು (ಮಾ.11): ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸೌಮ್ಯಾರೆಡ್ಡಿ ಅವರಿಗೆ ಟಿಕೆಟ್‌ ಕೇಳಿಲ್ಲ. ಇನ್ನೂ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದು ಅವರಿಗೆ ಟಿಕೆಟ್‌ ನೀಡಲಿ. ಯಾರೇ ಸ್ಪರ್ಧಿಸಿದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ದಿನಾಂಕ ಯಾವಾಗ ಘೋಷಣೆಯಾಗುತ್ತದೆ ಎಂಬುದು ಗೊತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಟೂರ್ ಹೊಡೆಯಬೇಕು. ಅವರ ಟೂರ್‌ ಮುಗಿದ ಮೇಲೆ ಚುನಾವಣೆ ಘೋಷಣೆಯಾಗುತ್ತದೆ. ಚುನಾವಣಾ ಆಯೋಗವೂ ಅದೇ ರೀತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಈಗಾಗಲೇ ಏಳು ಅಭ್ಯರ್ಥಿ ಘೋಷಿಸಿದ್ದು ಅವರು ಅದನ್ನೂ ಮಾಡಿಲ್ಲ. ನಾವು ಘೋಷಿಸಿರುವ ಏಳು ಕ್ಷೇತ್ರಗಳಲ್ಲಿ ಅಷ್ಟೂ ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದರು. ‘ರಾಜ್ಯದಲ್ಲಿ ಈ ಪ್ರಮಾಣದಲ್ಲಿ ಬರಗಾಲ ಉಂಟಾಗಿದ್ದರೂ ಬಿಜೆಪಿಯವರು ನಯಾಪೈಸೆ ಪರಿಹಾರ ನೀಡಿಲ್ಲ. ಹೀಗಾಗಿ ಬಿಜೆಪಿಯವರು ಬರ ಪರಿಹಾರಕ್ಕಾಗಿ ಪ್ರತಿಭಟನೆ ಮಾಡುವುದಾದರೆ ದೆಹಲಿಯಲ್ಲಿ ಧರಣಿ ಕೂರಬೇಕು. ಆದರೆ ಇವರಿಗೆ ಕುರ್ಚಿ, ಅಧಿಕಾರ ಬಿಟ್ಟು ಜನರ ಹಿತ ಬೇಕಾಗಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನೀರು ಬಿಟ್ಟಿದೆ. ನೀರು ಬಿಡದಿರಲು ಕೇಂದ್ರಕ್ಕೆ ಅಧಿಕಾರ ಇದೆ. ಇವರು ಕೇಂದ್ರ ಸರ್ಕಾರಕ್ಕೆ ಹೇಳಿ ನೀರು ಬಿಡುವುದನ್ನು ನಿಲ್ಲಿಸಬಹುದಿತ್ತು. ಬಿಜೆಪಿಯ 25 ಸಂಸದರು ಯಾಕೆ ತುಟಿ ಬಿಚ್ಚಿಲ್ಲ ಎಂದು ಕಿಡಿ ಕಾರಿದರು. ಬರ ಹಾಗೂ ಕಾವೇರಿ ಬಿಜೆಪಿಯವರು ರಾಜಕೀಯ ಅಸ್ತ್ರ. ಬಿ.ಎಸ್‌. ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ ಸೇರಿ ಎಲ್ಲರೂ ಅಮಿತ್‌ ಶಾ ಹಾಗೂ ನರೇಂದ್ರ ಮೋದಿ ಎಂದರೆ ನಡಗುತ್ತಾರೆ. ಹೀಗಾಗಿ ರಾಜ್ಯಕ್ಕೆ ಇಷ್ಟು ಅನ್ಯಾಯವಾಗುತ್ತಿದ್ದರೂ ಯಾರೂ ತುಟಿಕ್‌ ಪಿಟಿಕ್ ಎನ್ನುತ್ತಿಲ್ಲ ಎಂದರು.

ವರಿಷ್ಠರು ಸೂಚನೆ ನೀಡಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಜಗದೀಶ್ ಶೆಟ್ಟರ್‌

ಬೆಂಗಳೂರಿನ ನೀರಿನ ಹಾಹಾಕಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವಾಗಿರುವುದಕ್ಕೆ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಿದ್ದರೆ ಓಡಿ ಹೋಗುತ್ತಿದ್ದರು. ಹಿಂದೆ ಬಿಜೆಪಿ ಅವಧಿಯಲ್ಲಿ ಹತ್ತತ್ತು ಅಡಿ ಕಸದ ರಾಶಿ ಬಿದ್ದಿತ್ತು. ಲಕ್ಷಾಂತರ ರಸ್ತೆ ಗುಂಡಿ ಬಿದ್ದು ವಿಶ್ವ ಮಟ್ಟದಲ್ಲಿ ನಗರದ ಮಾನ ಹರಾಜು ಆಗಿತ್ತು. ಹೈಕೋರ್ಟ್‌ ಮಧ್ಯಪ್ರವೇಶ ಮಾಡಿ ನಗರದ ಗುಂಡಿಗಳನ್ನು ಮುಚ್ಚಿಸಿತ್ತು. ಇವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.