ವರಿಷ್ಠರು ಸೂಚನೆ ನೀಡಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಜಗದೀಶ್ ಶೆಟ್ಟರ್
ಲೋಕಸಭೆ ಟಿಕೆಟ್ ವಿಚಾರವಾಗಿ ಹೈಕಮಾಂಡ್ ನನ್ನೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಒಂದು ವೇಳೆ ವರಿಷ್ಠರು ಸೂಚನೆ ನೀಡಿದರೆ ಸ್ಪರ್ಧಿಸಲು ನಾನು ಸಿದ್ಧ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ಹುಬ್ಬಳ್ಳಿ (ಮಾ.11): ಲೋಕಸಭೆ ಟಿಕೆಟ್ ವಿಚಾರವಾಗಿ ಹೈಕಮಾಂಡ್ ನನ್ನೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಒಂದು ವೇಳೆ ವರಿಷ್ಠರು ಸೂಚನೆ ನೀಡಿದರೆ ಸ್ಪರ್ಧಿಸಲು ನಾನು ಸಿದ್ಧ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧಾರವಾಡ, ಬೆಳಗಾವಿ ಲೋಕಸಭಾ ಕ್ಷೇತ್ರಗಳ ಬಗ್ಗೆ ಪಕ್ಷದ ನಾಯಕರ ಜತೆ ಯಾವುದೇ ಚರ್ಚೆಗಳಾಗಿಲ್ಲ. ಎಲ್ಲಿಯೇ ಸ್ಪರ್ಧೆ ಮಾಡುವಂತೆ ಸೂಚನೆ ಬಂದರೆ ಸ್ಪರ್ಧಿಸಲು ನಾನು ಸಿದ್ಧ. ಅಥವಾ ಪಕ್ಷದ ಸಂಘಟನೆ ಮಾಡಲು ಸೂಚನೆ ನೀಡಿದರೆ ಅದಕ್ಕೂ ನಾನು ಸಿದ್ಧನಿದ್ದೇನೆ. ಇದರ ಬಗ್ಗೆ ಪಕ್ಷದ ವರಿಷ್ಠರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಹಿರಿಯ ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಉತ್ತರಿಸಿದ ಶೆಟ್ಟರ್, ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತಿವೆ. ಆದರೆ, ದೆಹಲಿ ಮಟ್ಟದಲ್ಲಿ ಯಾವ ನಿರ್ಣಯಗಳಾಗುತ್ತಿವೆ ಎನ್ನುವುದು ಈ ವರೆಗೂ ಯಾರಿಗೂ ಗೊತ್ತಿಲ್ಲ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಸ್ಪಷ್ಟಪಡಿಸಿದರು.
ಮೌನವೇ ಉತ್ತರ!: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಸ್ಥಳೀಯವಾಗಿಯೇ ಶೆಟ್ಟರ್ ಇದ್ದರೂ ಸಹ ಭಾನುವಾರ ಹುಬ್ಬಳ್ಳಿಯಲ್ಲಿ ನಡೆದ ವಿಕಸಿತ ಭಾರತ ಅಭಿಯಾನ ಹಾಗೂ ವಿಮಾನ ನಿಲ್ದಾಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಬಿಜೆಪಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡದ ವಿಚಾರಕ್ಕೆ ಮೌನದಿಂದಲೇ ಉತ್ತರಿಸಿದ ಜಗದೀಶ ಶೆಟ್ಟರ್, ಆಹ್ವಾನದ ವಿಚಾರವಾಗಿ ನಾನು ಏನನ್ನೂ ಮಾತನಾಡುವುದಿಲ್ಲ, ಮೌನವೇ ಅದಕ್ಕೆ ಉತ್ತರ ಎಂದರು.