ಬೆಂಗಳೂರು [ಡಿ.29]:  ವಿಧಾನಮಂಡಲದ ಅಧಿವೇಶನಕ್ಕೂ ಮೊದಲೇ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಸಂಕ್ರಾಂತಿ ಬಳಿಕ ವಿಧಾನಮಂಡಲದ ಅಧಿವೇಶನ ಆರಂಭವಾಗುವ ಮೊದಲೇ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಆಡಳಿತಾರೂಢ ಬಿಜೆಪಿಯ ನೂತನ ಅರ್ಹ ಶಾಸಕರು ಪಟ್ಟು ಹಿಡಿದಿರುವುದರಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅದಕ್ಕೆ ಬಹುತೇಕ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ 11 ಮಂದಿ ಅರ್ಹ ಶಾಸಕರು ಸಂಪುಟ ಸೇರುವುದು ಬಹುತೇಕ ನಿಶ್ಚಿತವಾಗಿದ್ದು, ಇನ್ನುಳಿದ ಐದು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುವ ಸಂಭವವಿದೆ.

ಅಂದರೆ, ಬಿಜೆಪಿಯ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಈ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ತೀರಾ ಕಡಿಮೆಯಿದ್ದು, ಭಿನ್ನಮತ ಉಲ್ಬಣಿಸಬಹುದು ಎಂಬ ಕಾರಣಕ್ಕಾಗಿ ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಇನ್ನುಳಿದ ಸ್ಥಾನಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಸಂಪುಟ ವಿಸ್ತರಣೆ ಬಗ್ಗೆ ಶೀಘ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಜತೆ ಚರ್ಚಿಸಿ ಅಂತಿಮ ನಿರ್ಧಾರಕೈಗೊಳ್ಳಲಿದ್ದಾರೆ.

ವಿಜಯನಗರ ಜಿಲ್ಲೆ ಘೋಷಣೆಗೆ ಆನಂದ್ ಸಿಂಗ್ ಡೆಡ್‌ಲೈನ್? ಬಿಜೆಪಿಗೆ ಮತ್ತೆ ಟೆನ್ಶನ್...

ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಅರ್ಹ ಶಾಸಕರಿಗೆ ಮುಂಚೆಯೇ ಭರವಸೆ ಕೊಟ್ಟಿರುವುದರಿಂದ ಮತ್ತು ಅದನ್ನು ಬಹಿರಂಗವಾಗಿ ಹೇಳಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಬಿಜೆಪಿಯಲ್ಲಿ ಯಾರದ್ದೂ ತಕರಾರು ಇಲ್ಲ. ಹೀಗಾಗಿ, ಮೊದಲ ಹಂತದಲ್ಲಿ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ವಿಧಾನಮಂಡಲದ ಅಧಿವೇಶನವನ್ನೂ ಸುಗಮವಾಗಿ ಎದುರಿಸಬಹುದು ಎಂಬ ಅಭಿಪ್ರಾಯ ಬಿಜೆಪಿ ಪಾಳೆಯದಲ್ಲಿದೆ.

ಈ ಮೊದಲು ವಿಧಾನಮಂಡಲದ ಅಧಿವೇಶನ ಮುಂದಿಟ್ಟುಕೊಂಡು ಸಂಪುಟ ವಿಸ್ತರಣೆ ಕೈಗೆತ್ತಿಕೊಳ್ಳುವುದು ಸರಿಯಾಗಲಿಕ್ಕಿಲ್ಲ ಎಂಬ ಅಭಿಪ್ರಾಯ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಳೆಯದಲ್ಲಿ ವ್ಯಕ್ತವಾಗಿತ್ತು. ಎಲ್ಲವನ್ನೂ ಅಳೆದು ತೂಗಿ ಅಧಿವೇಶನದ ಬಳಿಕವೇ ವಿಸ್ತರಣೆ ಮಾಡುವುದು ಸೂಕ್ತ ಎಂಬ ದಿಕ್ಕಿನಲ್ಲೇ ಚಿಂತನೆ ಆರಂಭವಾಗಿತ್ತು. ಇದರ ಸುಳಿವರಿತ ಅರ್ಹ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಳಂಬ ಮಾಡುವುದು ಬೇಡ ಎಂಬ ಮನವಿ ಮಾಡಿದರು.

ತಾವು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳನ್ನು ತೊರೆದು ಬಂದಿದ್ದೇವೆ. ಅನರ್ಹ ಎಂಬ ಪಟ್ಟಕಟ್ಟಿಕೊಂಡಿದ್ದೇವೆ. ಈಗಾಗಲೇ ಧನುರ್ಮಾಸದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಇನ್ನು ಅಧಿವೇಶನದ ಹಿನ್ನೆಲೆಯಲ್ಲಿ ಮತ್ತಷ್ಟುವಿಳಂಬ ಮಾಡುವುದು ಸರಿಯಲ್ಲ. ಮೇಲಾಗಿ, ನಾವು ಸಚಿವರಾಗದೇ ಅಧಿವೇಶನದಲ್ಲಿ ಪ್ರತಿಪಕ್ಷಗಳ ಮುಖಂಡರ ವಾಗ್ದಾಳಿಯನ್ನು ಎದುರಿಸುವುದೂ ಕಷ್ಟವಾಗುತ್ತದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು ಎಂದು ಉನ್ನತ ಮೂಲಗಳು ತಿಳಿಸಿವೆ.