sonia gandhi instagram : ಸೋನಿಯಾ ಗಾಂಧಿ ಸೋಶಿಯಲ್‌ ಮೀಡಿಯಾಕ್ಕೆ ಎಂಟ್ರಿಯಾಗಿದ್ದಾರೆ. ಇನ್ಸ್ಟಾಗ್ರಾಮ್‌ ನಲ್ಲಿ ಮೊದಲ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ವಿಡಿಯೋದಲ್ಲಿ ಏನಿದೆ ಎಂಬ ಮಾಹಿತಿ ಇಲ್ಲಿದೆ.

ಕಾಂಗ್ರೆಸ್‌ ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಗುರುವಾರ ಅವರು ಇನ್ಸ್ಟಾಗ್ರಾಮ್ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮುಂಬರುವ ಪುಸ್ತಕದ ಮೊದಲ ಲುಕ್ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್‌ ನಲ್ಲಿ ಸೋನಿಯಾ ಮೊದಲ ವಿಡಿಯೋ

ಸೋನಿಯಾ ಗಾಂಧಿ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆದ್ರೆ ಸೋನಿಯಾ ಗಾಂಧಿ ಅಕೌಂಟ್‌ ಇರಲಿಲ್ಲ. ಈಗ ಇನ್ಸ್ಟಾಗ್ರಾಮ್‌ ಗೆ ಬಂದಿರುವ ಸೋನಿಯಾ ಗಾಂಧಿ, ತಮ್ಮ ಮೊದಲ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪುಸ್ತಕದೊಂದಿಗೆ ಅವರು ಕಾಣಿಸಿಕೊಂಡಿದ್ದಾರೆ. 'Belonging: A Journey of Love' ಎಂಬ ಶೀರ್ಷಿಕೆಯ ಈ ಪುಸ್ತಕ ನವೆಂಬರ್ನಲ್ಲಿ ಬಿಡುಗಡೆಯಾಗಲಿದೆ.

ತಮ್ಮ ಮೊದಲ ಪೋಸ್ಟ್ನಲ್ಲಿ ಸೋನಿಯಾ ಗಾಂಧಿ, ಎಲ್ಲರಿಗೂ ನಮಸ್ಕಾರ. ಈ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಪುಸ್ತಕ 'Belonging: A Journey of Love'ನ ಮೊದಲ ಲುಕ್ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಈ ಪುಸ್ತಕ ಪ್ರೀತಿ, ಕರ್ತವ್ಯ, ನಷ್ಟ ಮತ್ತು ಬದುಕಿನಲ್ಲಿ ನಮ್ಮದೇ ಆದ ನೆಲೆಯನ್ನು ಕಂಡುಕೊಳ್ಳುವ ಕಥೆಯನ್ನು ಒಳಗೊಂಡಿದೆ. ತಮ್ಮ ಜೀವನದ ಈ ಕಥೆಯನ್ನು ಓದುಗರೊಂದಿಗೆ ಹಂಚಿಕೊಳ್ಳಲು ಕಾತರದಿಂದ ಕಾಯುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಜೀವನದ ಕಥೆ

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯಲ್ಲಿ ಇಟಲಿಯಲ್ಲಿ ಕಳೆದ ಬಾಲ್ಯದಿಂದ ಹಿಡಿದು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮಕಥೆ ಹಾಗೂ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಕಷ್ಟದ ಕ್ಷಣಗಳವರೆಗೆ ಹಲವು ವಿಚಾರಗಳನ್ನು ವಿವರಿಸಲಾಗಿದೆ. ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ, 1965ರಲ್ಲಿ ಇಂಗ್ಲೆಂಡ್ನ ಕೇಂಬ್ರಿಡ್ಜ್ನಲ್ಲಿ 19 ವರ್ಷದ ವಿದ್ಯಾರ್ಥಿನಿಯಾಗಿದ್ದಾಗ ರಾಜೀವ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಬಳಿಕ ಈ ಜೋಡಿ 1968ರ ಫೆಬ್ರವರಿ 25ರಂದು ವಿವಾಹವಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸೊಸೆಯಾಗಿ ಭಾರತಕ್ಕೆ ಬಂದ ಸೋನಿಯಾ, ನಂತರ ಭಾರತೀಯ ರಾಜಕೀಯದಲ್ಲಿ ಪ್ರಮುಖ ನಾಯಕಿಯಾಗಿ ಬೆಳೆದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯಂತಹ ವೈಯಕ್ತಿಕ ದುರಂತಗಳು ಅವರ ಬದುಕಿನ ಮೇಲೆ ಆಳವಾದ ಪರಿಣಾಮ ಬೀರಿದ್ದವು. ಈ ಘಟನೆಗಳ ಬಗ್ಗೆಯೂ ಪುಸ್ತಕದಲ್ಲಿ ವಿವರಗಳಿರುವ ನಿರೀಕ್ಷೆಯಿದೆ.

ತಾಯಿಯ ಪುಸ್ತಕದ ಬಗ್ಗೆ ರಾಹುಲ್ ಗಾಂಧಿ ಹೆಮ್ಮೆ

ಇತ್ತೀಚೆಗೆ ತಮ್ಮ ತಂದೆ ರಾಜೀವ್ ಗಾಂಧಿ ಅವರ 82ನೇ ಜನ್ಮದಿನದ ಸಂದರ್ಭದಲ್ಲಿ ರಾಹುಲ್ ಗಾಂಧಿ, ತಾಯಿಯ ಪುಸ್ತಕದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು. ನಿಮ್ಮನ್ನು ಪ್ರೀತಿಸುವ ಲಕ್ಷಾಂತರ ಜನರು ನಿಮ್ಮ ಕಥೆಯನ್ನು ಓದಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡದ ನಿಮ್ಮಂತಹ ವ್ಯಕ್ತಿಗೆ ಈ ಸುಂದರ ಕಥೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದು ಎಷ್ಟು ಕಷ್ಟವಾಗಿರಬಹುದು ಎಂಬುದು ನನಗೆ ಗೊತ್ತು ಎಂದು ರಾಹುಲ್ ಹೇಳಿದ್ದರು.

ನವೆಂಬರ್ 10ರಂದು ಪುಸ್ತಕ ಬಿಡುಗಡೆ

ಸೋನಿಯಾ ಗಾಂಧಿ ಅವರ 'Belonging: A Journey of Love' ಪುಸ್ತಕವು ನವೆಂಬರ್ 10ರಂದು ಬಿಡುಗಡೆಯಾಗಲಿದೆ. ಭಾರತದಲ್ಲಿ ಹಾರ್ಪರ್ಕಾಲಿನ್ಸ್ ಇಂಡಿಯಾ ಮತ್ತು ಜಾಗತಿಕವಾಗಿ ಪೆಂಗ್ವಿನ್ ರ್ಯಾಂಡಮ್ ಹೌಸ್ನ ನಾಫ್ ಪ್ರಕಾಶನ ಸಂಸ್ಥೆಗಳು ಈ ಪುಸ್ತಕವನ್ನು ಪ್ರಕಟಿಸಲಿವೆ.