ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾರ ಛಾಯಾಚಿತ್ರ ಪ್ರದರ್ಶನದಿಂದ 74 ಫೋಟೋಗಳನ್ನು ಬಲವಂತವಾಗಿ ತೆರವುಗೊಳಿಸಲಾಗಿದೆ. ಪ್ರತಿಭಟನೆಗಳು ಹಾಗೂ ರಾಷ್ಟ್ರಧ್ವಜದ ಚಿತ್ರಗಳಿದ್ದ ಈ ಫೋಟೋಗಳ ತೆರವು ಕ್ರಮವನ್ನು ಪ್ರಿಯಾಂಕಾ ಗಾಂಧಿ , ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ತಿಕ್ಕುವಿಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕಿ, ಲೋಕಸಭಾ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ, ಛಾಯಾಗ್ರಾಹಕ ರೈಹಾನ್ ವಾದ್ರಾ ಅವರ ಕಲಾ ಪ್ರದರ್ಶನ ದೆಹಲಿಯಲ್ಲಿ ದೊಡ್ಡ ರಾಜಕೀಯ ಹಾಗೂ ಸಾಂಸ್ಕೃತಿಕ ವಿವಾದಕ್ಕೆ ಕಾರಣವಾಗಿದೆ. ದೆಹಲಿಯಲ್ಲಿರುವ ರಾಜಸ್ಥಾನ ಸರ್ಕಾರದ ಆಡಳಿತಕ್ಕೊಳಪಟ್ಟ ಬಿಕಾನೇರ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ತಮ್ಮ 'ನೋ ಐಡಿಯಾ ಈಸ್ ಫೈನಲ್' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದಿಂದ ಸುಮಾರು 74 ಫೋಟೋಗಳನ್ನು ಬಲವಂತವಾಗಿ ತೆರವುಗೊಳಿಸಲಾಗಿದೆ ಎಂದು ರೈಹಾನ್ ವಾದ್ರಾ ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಯುವಕರ ಹಾಗೂ ವಿಪಕ್ಷಗಳ ಪ್ರತಿಭಟನೆಗಳನ್ನು ಕಲಾತ್ಮಕವಾಗಿ ದಾಖಲಿಸಿದ್ದ ಈ ಫೋಟೋಗಳು ಆಕ್ಷೇಪಾರ್ಹ ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಬಹುದು ಎಂಬ ನೆಪವೊಡ್ಡಿ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ.

105 ಫೋಟೋಗಳಲ್ಲಿ 75 ಚಿತ್ರಗಳಿಗೆ ವಿರೋಧ, ರಾಷ್ಟ್ರಧ್ವಜದ ಫೋಟೋಗೂ ಕತ್ತರಿ!

ಘಟನೆಯ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ರೈಹಾನ್ ವಾದ್ರಾ, ನಮ್ಮ ದೇಶದಲ್ಲಿ ನಮ್ಮ ಕಣ್ಣೆದುರೇ ನಡೆಯುತ್ತಿರುವ ಸಮಾಜಮುಖಿ ಚಳುವಳಿಗಳು, ಜನರು ಒಂದೆಡೆ ಸೇರಿದಾಗ ಮೂಡುವ ಕಾವ್ಯಮಯ ಕ್ಷಣಗಳನ್ನು ಕಲಾತ್ಮಕವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ನನ್ನ ಉದ್ದೇಶವಾಗಿತ್ತು. ಪ್ರದರ್ಶನಕ್ಕೆ ಸಿದ್ಧಗೊಳಿಸಿದ್ದ 105 ಛಾಯಾಚಿತ್ರಗಳಲ್ಲಿ 75 ಚಿತ್ರಗಳನ್ನು ತೆಗೆದುಹಾಕುವಂತೆ ಅಥವಾ ರದ್ದುಪಡಿಸುವಂತೆ ಪ್ರದರ್ಶನ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಲಿಖಿತ ನೋಟಿಸ್ ನೀಡಲಾಯಿತು ಎಂದು ತಿಳಿಸಿದ್ದಾರೆ.

ವಿಶೇಷವೆಂದರೆ, ತೆರವುಗೊಳಿಸಲು ಸೂಚಿಸಿದ ಚಿತ್ರಗಳಲ್ಲಿ ಭಾರತದ ತ್ರಿವರ್ಣ ರಾಷ್ಟ್ರಧ್ವಜವನ್ನು ಹೊಂದಿದ್ದ ಎರಡು ಪ್ರಮುಖ ಛಾಯಾಚಿತ್ರಗಳೂ ಸೇರಿದ್ದವು. ಆರಂಭದಲ್ಲಿ ಅವುಗಳನ್ನು ಕೆಳಗಿಳಿಸಲು ರೈಹಾನ್ ನಿರಾಕರಿಸಿದರೂ, ಕೊನೆಗೆ ಸಿಬ್ಬಂದಿ ಅಧಿಕಾರ ಬಳಸಿ ಚಿತ್ರಗಳನ್ನು ತೆರವುಗೊಳಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಅವರು, ಸಾರ್ವಜನಿಕ ಸ್ಥಳಗಳು ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕೇ ಹೊರತು ಸೆನ್ಸಾರ್‌ಶಿಪ್ ಹೇರಬಾರದು ಎಂದಿದ್ದಾರೆ.

ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ: ಪ್ರಿಯಾಂಕಾ ಗಾಂಧಿ ಖಂಡನೆ

ತಮ್ಮ ಪುತ್ರನ ಕಲಾಕೃತಿಗಳ ಮೇಲಿನ ಈ ನಿರ್ಬಂಧವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಖಂಡಿಸಿದ್ದು, ಬಿಕಾನೇರ್ ಹೌಸ್ ಆಡಳಿತದ ನಡೆಯನ್ನು ಹಾಸ್ಯಾಸ್ಪದ ಎಂದು ಬಣ್ಣಿಸಿದ್ದಾರೆ. ಇವು ಕೇವಲ ಪ್ರತಿಭಟನೆಗಳ ದೃಶ್ಯ ದಾಖಲಾತಿಗಳಾಗಿದ್ದವು. ಯಾರನ್ನೂ ಅವಹೇಳನ ಮಾಡುವ ಉದ್ದೇಶ ಇದರಲ್ಲಿರಲಿಲ್ಲ. ಯುವಕರ ಧ್ವನಿಯನ್ನು ಅಡಗಿಸಲು ಆಡಳಿತಾರೂಢ ಸರ್ಕಾರ ಯತ್ನಿಸುತ್ತಿದೆ. ಇಂದು ಒಬ್ಬ ಕಲಾವಿದನಿಗೆ ಹೀಗಾಗಿದೆ, ನಾಳೆ ಮತ್ತೊಬ್ಬ ಕಲಾವಿದನಿಗೆ ಈ ಸ್ಥಿತಿ ಬರಬಹುದು. ಅಧಿಕಾರದಲ್ಲಿರುವವರು ಜನರ ಅಭಿವ್ಯಕ್ತಿಗೆ ಭಯಪಡುತ್ತಿದ್ದಾರೆ ಎಂದರೆ, ಅವರು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವ ಅಧಿಕಾರವನ್ನು ಈಗಾಗಲೇ ಕಳೆದುಕೊಂಡಿದ್ದಾರೆ ಎಂದರ್ಥ ಎಂದು ಅವರು ಕಿಡಿಕಾರಿದ್ದಾರೆ.

ರಾಜಕೀಯ ವಾಕ್ಸಮರ ಹಾಗೂ ಕಾಂಗ್ರೆಸ್ ಆಕ್ರೋಶ:

ಇತ್ತೀಚಿನ ವಾರಗಳಲ್ಲಿ ಮತದಾರರ ಪಟ್ಟಿ ವಂಚನೆ ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ಚಿತ್ರಗಳೂ ಈ ಪ್ರದರ್ಶನದಲ್ಲಿದ್ದವು. ಈ ವಿಷಯವೇ ಆಡಳಿತ ಮಂಡಳಿಯ ಕಣ್ಣು ಕೆಂಪಾಗಿಸಲು ಕಾರಣ ಎನ್ನಲಾಗಿದೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಈ ಕುರಿತು ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿ, ರಾಷ್ಟ್ರಧ್ವಜದ ಫೋಟೋ ಕೂಡ ಸೆನ್ಸಾರ್‌ಶಿಪ್‌ನ ಕತ್ತರಿಯಿಂದ ಪಾರಾಗುತ್ತಿಲ್ಲ ಎಂದರೆ, ಇಲ್ಲಿ ತೊಂದರೆ ಇರುವುದು ಕಲೆಯಲ್ಲ, ಬದಲಿಗೆ ಆಡಳಿತ ನಡೆಸುವ ವ್ಯವಸ್ಥೆಯಲ್ಲಿ. ಗ್ಯಾಲರಿಯ ಗೋಡೆಗಳಲ್ಲಿ ಚಿತ್ರಗಳ ಬದಲಾಗಿ ಖಾಲಿ ಮೊಳೆಗಳು ಮಾತ್ರ ಮಿನುಗುತ್ತಿರುವುದು ಪ್ರಜಾಪ್ರಭುತ್ವದ ಇಂದಿನ ಭೀಕರ ಸೆನ್ಸಾರ್‌ಶಿಪ್‌ಗೆ ಸಾಕ್ಷಿಯಾಗಿದೆ ಎಂದು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅತ್ತ ಬಿಕಾನೇರ್ ಹೌಸ್‌ನ ಮುಖ್ಯ ನಿವಾಸ ಆಯುಕ್ತ ರೋಹಿತ್ ಕುಮಾರ್ ಸೇರಿದಂತೆ ಉನ್ನತಾಧಿಕಾರಿಗಳು ಈ ವಿವಾದದ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.