Rajya Sabha Elections: ಕೈ 2ನೇ ಅಭ್ಯರ್ಥಿ ವಾಪಸಿಗೆ ಖರ್ಗೆ ಮೂಲಕ ದೇವೇಗೌಡ ಯತ್ನ

*   ಚಿಂತನ ಶಿಬಿರ ಬಿಟ್ಟು ದಿಢೀರ್‌ ಹೈಕಮಾಂಡ್‌ ಬಳಿಗೆ ತೆರಳಿದ ಖರ್ಗೆ
*  ನಾಮಪತ್ರ ಹಿಂತೆಗೆತಕ್ಕೆ ಇಂದು ಕಡೇ ದಿನ 
*   ಸಿದ್ದು, ಡಿಕೆಶಿ ವಿರೋಧ
 

HD Devegowda Attempt to Get Congress 2nd Candidate Back in Rajya Sabha Elections grg

ಬೆಂಗಳೂರು(ಜೂ.03): ರಾಜ್ಯಸಭಾ ಚುನಾವಣೆಯ ನಾಲ್ಕನೇ ಸ್ಥಾನಕ್ಕೆ ಮೂರೂ ರಾಜಕೀಯ ಪಕ್ಷಗಳಲ್ಲಿ ನಡೆಯುತ್ತಿರುವ ಹಣಾಹಣಿ ಶುಕ್ರವಾರ ಸ್ಪಷ್ಟರೂಪ ಪಡೆದುಕೊಳ್ಳಲಿದ್ದು, ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣದಿಂದ ವಾಪಸ್‌ ಪಡೆಯಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನಡೆಸುತ್ತಿರುವ ಪ್ರಯತ್ನ ಫಲ ನೀಡಲಿದೆಯೇ ಎಂಬುದು ಕುತೂಹಲಕರವಾಗಿದೆ.

ದೇವೇಗೌಡರ ಒತ್ತಾಸೆ ಮೇರೆಗೆ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಪಡೆದು ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದರೂ, ರಾಜ್ಯದ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಯಾವುದೇ ಕಾರಣಕ್ಕೂ ಬೇಡ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಹೀಗಾಗಿ ಅಂತಿಮವಾಗಿ ಕಾಂಗ್ರೆಸ್‌ ಅಭ್ಯರ್ಥಿಯು ಕಣದಿಂದ ಹಿಂದೆ ಸರಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

Devegowdaರ ತೃತೀಯ ರಂಗಕ್ಕೆ ಜಗದೀಶ್ ಶೆಟ್ಟರ್ ಲೇವಡಿ

ನಾಮಪತ್ರಗಳನ್ನು ಹಿಂಪಡೆಯಲು ಶುಕ್ರವಾರ ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶ ಇದ್ದು, ಕಣದಲ್ಲಿ ಅಂತಿಮವಾಗಿ ಯಾರು ಉಳಿದುಕೊಳ್ಳಲಿದ್ದಾರೆ ಎಂಬುದರ ಚಿತ್ರಣ ಗೊತ್ತಾಗಲಿದೆ. ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಪೈಕಿ ಮೊದಲ ಮೂರು ಸ್ಥಾನಗಳಲ್ಲಿ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಎರಡು ಮತ್ತು ಕಾಂಗ್ರೆಸ್‌ಗೆ ಒಂದು ಸ್ಥಾನ ನಿರಾಯಾಸವಾಗಿ ಲಭಿಸಲಿವೆ. ಇನ್ನುಳಿದ ನಾಲ್ಕನೇ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದರಿಂದ ಆ ಸ್ಥಾನ ಯಾರ ಪಾಲಾಗುತ್ತದೆ ಎಂಬುದು ಕುತೂಹಲಕರವಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜತೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಮಹತ್ವದ ಮಾತುಕತೆ!

ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ವಾಪಸ್‌ ಪಡೆಯಬೇಕು ಎಂಬ ಪಟ್ಟನ್ನು ಜೆಡಿಎಸ್‌ ನಾಯಕರು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ದೇವೇಗೌಡರು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ಗುರುವಾರ ರಾಜ್ಯದಲ್ಲಿನ ಪಕ್ಷದ ಚಿಂತನ ಮಂಥನ ಸಭೆಗೆ ಗೈರು ಹಾಜರಾಗಿ ದೆಹಲಿಗೆ ತೆರಳಿದ್ದಾರೆ. ಅವರೊಂದಿಗೆ ರಾಜ್ಯಸಭಾ ಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೂಡ ಹೋಗಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪರಸ್ಪರ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಪಕ್ಷದ ಅಭ್ಯರ್ಥಿಯನ್ನು ವಾಪಸ್‌ ಪಡೆಯುವುದು ಬೇಡ ಎಂಬ ನಿರ್ಧಾರ ಕೈಗೊಂಡು ವರಿಷ್ಠರಿಗೂ ಮಾಹಿತಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios